ಸರಕಾರ ಬದಲಾಗುತ್ತಿದ್ದಂತೆ ಅಧಿಕಾರಿಗಳ ಬದಲಾವಣೆಗೆ ಭಾರೀ ಹುನ್ನಾರ ನಡೆಯುತ್ತಿದೆ. ಮಂಗಳೂರು ಖಡಕ್ ಕಮೀಷನರ್ ಆಗಿದ್ದ ಕುಲದೀಪ್ ಕುಮಾರ್ ಜೈನ್ ರವರನ್ನು ಇಲ್ಲಿಂದ ವರ್ಗಾವಣೆಗೊಳಿಸಿ ಅವರ ಜಾಗಕ್ಕೆ ಅನುಪಮ್ ಅಗರವಾಲ್ ಅವರನ್ನು ತರಲಾಗಿದೆ. ನೂತನ ಕಮೀಷನರ್ ಅನುಪಮ್ ಅಗರವಾಲ್ ದಕ್ಷ, ಪ್ರಮಾಣಿಕ ಪೊಲೀಸ್ ಅಧಿಕಾರಿ. ಆದರೆ ಕೆಳ ಹಂತದ ಅಧಿಕಾರಿಗಳು ಅವರಿಗೆ ತಪ್ಪು ಮಾಹಿತಿ ನೀಡಿ ಮರುಳು ಮಾಡುವ ಕೆಲಸವೂ ಇಲಾಖೆಯಲ್ಲಿ ನಡೆಯುತ್ತಿರುವುದು ಮಾತ್ರ ಸುಳ್ಳಲ್ಲ.
ಯಾವುದೇ ಸರಕಾರ ಬಂದರೂ ಅಧಿಕಾರಿಗಳ ವರ್ಗಾವಣೆ ಹಿಂದೆ ಧೋ ನಂಬರ್ ದಂಧೆಕೋರರ ‘ಕೈ’ಚಳಕವೇ ಅಧಿಕ. ಅದು ಯಾರನ್ನು ಕೂಡ ಬಿಟ್ಟಿಲ್ಲ. ಜನಸಾಮಾನ್ಯರಾರೂ ಅಧಿಕಾರಿಗಳ ವರ್ಗಾವಣೆ ಹಿಂದೆ ಹೋಗುತ್ತಿಲ್ಲ. ಅದೇನಿದ್ದರೂ ಮರಳು ಮಾಫಿಯಾ, ಕ್ಲಬ್ ಮಾಫಿಯಾದ ಜನರೇ ರಾಜಕಾರಣಿಗಳ ಹಿಂದೆ ಸುತ್ತಿ, ಗಿರಾಕಿ ಹೊಡೆದು ತಮಗಾಗದವರನ್ನು ಎತ್ತಂಗಡಿ ಮಾಡಿ ಬಿಡುತ್ತಾರೆ. ಮತ್ತೆ ಹೇಗೆ ಪೊಲೀಸ್ ಅಧಿಕಾರಿಗಳು ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಸಾಧ್ಯ.?
ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಇದೀಗ ಎಸಿಪಿ ದರ್ಜೆಯ ಅಧಿಕಾರಿಗಳ ವರ್ಗಾವಣೆಗೆ ಭಾರೀ ಹುನ್ನಾರ ನಡೆಯುತ್ತಿದೆ. ಅದರ ಜೊತೆಗೆ ಅಧಿಕಾರಿಗಳು ಪವರ್ ಫುಲ್ ಕಡೆಗೆ ಬರಲು ವಸೂಲಿ ಬಾಜಿ ನಡೆಸುತ್ತಿದ್ದಾರೆ. ಮಂಗಳೂರು ಸಿಸಿಬಿ ಇಲಾಖೆಗೆ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿವೈಎಸ್ಪಿ ಗ್ರೇಡಿನ ಅಧಿಕಾರಿಯೊಬ್ಬರು ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಬಂಟ್ವಾಳದ ಮಾಜಿ ಶಾಸಕರು, ಉನ್ನತ ಹುದ್ದೆಯಲ್ಲಿರುವ ಮಂಗಳೂರಿನ ಪ್ರಭಾವಿ ಶಾಸಕರೊಬ್ಬರ ಅಭಯ ಹಸ್ತ ಇವರ ಮೇಲಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಅಧಿಕಾರಿ ಲೋಕಾಯುಕ್ತದಿಂದ ಸಿಸಿಬಿಗೆ ಬರಲಿದ್ದಾರೆ.ಇದೀಗ ಸಿಸಿಬಿಯಲ್ಲಿ ಎಸಿಪಿಯಾಗಿರುವ ಅಧಿಕಾರಿ ಮುಂಬಡ್ತಿ ಪಡೆದು ಡಿಸಿಪಿಯಾಗಲಿದ್ದಾರೆ. ಅ ಸ್ಥಾನವನ್ನು ತುಂಬಲು ಕಸರತ್ತು ನಡೆಸುತ್ತಿದ್ದಾರೆ ಕೆಲವು ಮಂದಿ ಎಸಿಪಿಗಳು. ಆದರೆ ಅದು ಪಕ್ಕಾ ಆಗಿದೆ ಇದೀಗ ಲೋಕಾಯುಕ್ತದಲ್ಲಿರುವ ಅಧಿಕಾರಿಗೆ. ಇದರ ಮಧ್ಯೆ ಸಿಸಿಬಿಗೆ ಬರಲು ಮಡಿಕೇರಿಯ ಡಿಸಿಪಿ ಯೊಬ್ಬರು ತೆರೆಮರೆಯಲ್ಲಿ ಬಹಳ ಕಸರತ್ತು ಕೂಡ ನಡೆಸುತ್ತಿದ್ದಾರೆ ಅನ್ನುವ ಸುದ್ಧಿ ಇದೆ.
ಇನ್ನು ಪಣಂಬೂರು ಎಸಿಪಿ ವರ್ಗಾವಣೆಗೆ ಕೂಡ ಭಾರೀ ಹುನ್ನಾರ ನಡೆಯುತ್ತಿದ್ದು, ಆ ಸ್ಥಾನಕ್ಕೆ ಉತ್ತರ ಕರ್ನಾಟಕದ ಕಾರವಾರದಲ್ಲಿ ಡಿಸಿಆರ್’ಬಿ ಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಯೊಬ್ಬರು ತೀವ್ರ ಪ್ರಯತ್ನ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಮಂಗಳೂರಿಗೆ ಬಂದ ಖಡಕ್ ಅಧಿಕಾರಿಗಳು ಬ್ರೇಕ್ ಹಾಕಿ, ಬೆನ್ನು ಮೂಳೆ ಮುರಿದದ್ದು ಡ್ರಗ್ ಮಾಫಿಯಾವನ್ನು, ಬೆಟ್ಟಿಂಗ್ ದಂಧೆಯನ್ನು, ಮರಳು ಮಾಫಿಯಾ, ಮಣ್ಣು ಮಾಫಿಯಾವನ್ನು. ಆದರೆ ಇಲ್ಲಿನ ಸೋಕಾಲ್ಡ್ ನಾಯಕರು ಬ್ರೇಕ್ ಹಾಕಿದ್ದು ಮಾತ್ರ ಖಢಕ್ ಅಧಿಕಾರಿಗಳ ಪ್ರಾಮಾಣಿಕತೆಯ ಸೇವೆಗೆ.! ಇಸ್ಪೀಟ್ ದಂಧೆಕೋರರ, ಡ್ರಗ್ ಮಾಫಿಯಾಗಳ, ವೇಶ್ಯಾವಾಟಿಕೆ, ಮಟ್ಕಾ ದಂಧೆಕೊರರ ಜೊತೆ ಸೇರಿ ಯೋಗ್ಯತೆ ಇಲ್ಲದವರು, ಉನ್ನತ ಮಟ್ಟದ ನಿಷ್ಠಾವಂತ ಅಧಿಕಾರಿಗಳನ್ನು ಬದಲಾಯಿಸುತ್ತಾರೆ ಅಂದರೆ ಇದು ಈ ಬುದ್ದಿವಂತರ ಜಿಲ್ಲೆಯ ದುರಂತ ಸರಿ.
ಈ ಎಲ್ಲಾ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಹಿಂದೆ ಧೋ ನಂಬರ್ ದಂಧೆಕೋರರು ಕೈಯಾಡಿಸುತ್ತಿರುವುದು ಸುಳ್ಳಲ್ಲ. ಮಂಗಳೂರು ಕ್ಲಬ್ ಮಾಫಿಯಾದ ಬಿಗ್ ಬಾಸ್ ಒಬ್ಬರು ಇದರ ಹಿಂದೆ ಇರುವುದಾಗಿ ತಿಳಿದು ಬಂದಿದೆ.