ವಿಷ್ಣುಮೂರ್ತಿ ದೇವಸ್ಥಾನದ ಚಿನ್ನಾಭರಣದೊಂದಿಗೆ ಉಪ್ಪಿನಂಗಡಿ ಪೊಲೀಸರಿಗೆ ಶರಣಾದ ಮಾಜಿ ಅಧ್ಯಕ್ಷ ರೋಹಿತಾಕ್ಷ

ಕರಾವಳಿ

ಕಳೆದ 2023ರ ಡಿಸೆಂಬರ್ ತಿಂಗಳಲ್ಲಿ ನಡೆದ ಬ್ರಹ್ಮಕಲಶೋತ್ಸದ ವೇಳೆ ಪೆರ್ನೆಯ ಕಳೆಂಜ, ದೇಂತಡ್ಕದ ವಿಷ್ಣುಮೂರ್ತಿ ದೇವಸ್ಥಾನದ ದೇವರಿಗೆ ಸಮರ್ಪಿಸಲಾದ ಆಭರಣಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ದೇವಳದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ನಾಪತ್ತೆಯಾದ ಚಿನ್ನಾಭರಣದೊಂದಿಗೆ ಉಪ್ಪಿನಂಗಡಿ ಪೊಲೀಸರಿಗೆ ಶರಣಾಗಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಈ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಈ ಸಂದರ್ಭ ಭಕ್ತರೋರ್ವರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋಡು ಮಾಲೆಯನ್ನು ಸಮರ್ಪಿಸಿದ್ದರು. ಹಾಗೂ ರಾಮದಾಸ್ ರೈ ಎಂಬವರು ಸಮರ್ಪಿಸಿದ ಎರಡು ಪವನಿನ ಚಿನ್ನದ ಸರ ದೇವಾಲಯದಲ್ಲಿದ್ದು, ರವಿವಾರದಂದು ಆಡಳಿತಾಧಿಕಾರಿಯ ಸಮ್ಮುಖದಲ್ಲಿ ನಡೆದ ಪರಿಶೀಲನೆಯ ವೇಳೆ ಆಭರಣಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು.

ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಆಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತರ ವಿರುದ್ಧ
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಂತೆಯೇ, ಮಂಗಳವಾರ ತನ್ನ ಅಧ್ಯಕ್ಷೀಯ ಸ್ಥಾನದ ದುರುಪಯೋಗ ನಡೆಸಿ ದೇವಳದ ಚಿನ್ನಾಭರಣವನ್ನು ಉಪ್ಪಿನಂಗಡಿಯ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡಮಾನವಿರಿಸಿ ಹಣ ಪಡೆದಿದ್ದ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ಚಿನ್ನಾಭರಣವನ್ನು ಹಣಕಾಸು ಸಂಸ್ಥೆಯಿಂದ ಬಿಡಿಸಿಕೊಂಡು ಬಂದು ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು.

ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದನ್ವಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ದೇವಾಲಯದಲ್ಲಿ ಮಹಜರು ನಡೆಸಿ ಇಲಾಖಾ ಕ್ರಮಕೈಗೊಂಡಿದ್ದಾರೆ. ಈ ಮಧ್ಯೆ ದೇವಾಲಯದಲ್ಲಿ ಇತ್ತೆನ್ನಲಾದ ಈ ಹಿಂದಿನ ದೇವಾಲಯದ ಪುನರ್ ನಿರ್ಮಾತೃ ದಿ. ರಾಮದಾಸ್ ರೈ ಎಂಬವರು ನೀಡಿದ್ದ 2 ಪವನ್ ತೂಕದ ಚಿನ್ನದ ಸರ ಇನ್ನೂ ನಾಪತ್ತೆಯಾಗಿದ್ದು, ಅದರ ಬಗ್ಗೆಯೂ ತನಿಖೆ ಮುಂದುವರೆದಿದೆ.