ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯ: ಗ್ರಾಮ ಪಂಚಾಯತ್ ನಲ್ಲೊಂದು ಹೀಗೊಂದು ನಿರ್ಣಯ

ರಾಜ್ಯ

ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲವ್ ಮ್ಯಾರೇಜ್ ಸಂಖ್ಯೆ ವಿಪರೀತ ಹೆಚ್ಚಾಗಿರುವುದರಿಂದ, ಪ್ರೇಮ ವಿವಾಹಕ್ಕೆ ಬ್ರೇಕ್ ಹಾಕಬೇಕು, ಪ್ರೇಮಿಗಳು ಹೆತ್ತವರ ಒಪ್ಪಿಗೆ ಪಡೆದೆ ವಿವಾಹವಾಗಬೇಕು. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಡೊಂಗರಗಾಂವ ಗ್ರಾಮ ಪಂಚಾಯ್ತಿ ಸದಸ್ಯರು ಸೇರಿ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಂಡಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ಇತ್ತಿಚಿನ ದಿನಗಳಲ್ಲಿ ಪ್ರೇಮ ವಿವಾಹಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಇದು ಸಾಂಕ್ರಾಮಿಕವಾಗಿ ಹರಡಿಕೊಂಡಿದೆ. ಹೆತ್ತು ಹೊತ್ತು ಸಾಕಿ ಸಲುಹಿದ ಪೋಷಕರನ್ನು ಕಡೆಗಣಿಸಿ ಪ್ರೇಮ ವಿವಾಹ ಮಾಡಿಕೊಳ್ಳುತ್ತಿರುವ ಯುವಕ-ಯುವತಿಯರು ಮುಂದಿನ ಕೇಲ‌ ದಿನಗಳಲ್ಲಯೇ ಹೊಂದಾಣಿಕೆ ಇಲ್ಲದೆ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಪೋಷಕರ ಒಪ್ಪಿಗೆ ಇಲ್ಲದ ಪ್ರೇಮ ವಿವಾಹವನ್ನು ಸರ್ಕಾರ ನಿಷೇಧಿಸಬೇಕು ಇಲ್ಲೊಂದು ಗ್ರಾಮ ಠರಾವು ಮಾಡಿದೆ.

ಅಪ್ರಾಪ್ತ ವಯಸ್ಸಿನಲ್ಲಿ ಅಥವಾ ಯೌವ್ವನದಲ್ಲಿ ಆತುರಕ್ಕೆ ಬಿದ್ದು ಏನು ತಿಳಿಯದೆ ಪ್ರೇಮ ವಿವಾಹ ಆಗೋದರಿಂದ ಎರಡು ಕುಟುಂಬಗಳ ನಡುವೆ ಕಲಹ ಉಂಟಾಗಿ ಗಲಾಟೆಯಾಗುತ್ತಿವೆ. ಅಲ್ಲದೆ ಮದುವೆ ಮಾಡಿಕೊಂಡವರಲ್ಲಿ ಬಹುತೇಕರು ಮುಂದಿನ ಕೆಲ ದಿನಗಳಲ್ಲಿಯೇ ಹೊಂದಾಣಿಕೆ ಆಗದೆ ಜೀವನದ ದಿಕ್ಕೂ ತಪ್ಪುತ್ತಿದ್ದಾರೆ. ಹೀಗಾಗಿ ಇಂತಹದೊಂದು ನಿಷೇಧದ ಪ್ರಯತ್ನ ಮಾಡುತ್ತಿರುವುದಾಗಿ ಗ್ರಾಮ‌ ಪಂಚಾಯ್ತಿ ಅಧ್ಯಕ್ಷ ಶಾಂತಕುಮಾರ ಮೂಲಗೆ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ.

ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಒಟ್ಟು ಹದಿನೈದು ಪ್ರೇಮ ವಿವಾಹಗಳು ನಡೆದಿವೆಯಂತೆ. ಅನೇಕರು ಹೆತ್ತವರ ವಿರೋಧದ ನಡುವೆ ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದಾರಂತೆ. ಡೋಂಗರಗಾವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಡೋಂಗರಗಾವ್, ಕಾಳಮಂದರಗಿ ಸೇರಿದಂತೆ ನಾಲ್ಕು ತಾಂಡಾಗಳ ವ್ಯಾಪ್ತಿ ಹೊಂದಿದ್ದು, ಡೊಂಗರಗಾವ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹದಿನೆಂಟು ಗ್ರಾಮ ಪಂಚಾಯ್ತಿ ಸದಸ್ಯರು ಬರುತ್ತಾರೆ.

ಒಟ್ಟಿನಲ್ಲಿ ಪ್ರೇಮ ವಿವಾಹದಿಂದ ಯುವಕ ಯುವತಿಯರು ತಮ್ಮ ಜೀವನ ಬಲಿಯಾಗಿಸುವುದನ್ನು ತಪ್ಪಿಸಲು ಡೊಂಗರಗಾಂವ ಇಂತಹದೊಂದು ನಿರ್ಧಾರ ಕೈಗೊಂಡಿದ್ದು ಗ್ರಾಮಸ್ಥರ ಈ ನಿರ್ಧಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಗ್ರಾಮ ಪಂಚಾಯ್ತಿಯಲ್ಲಿ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಬಹಿರಂಗವಾಗಿ ಯಾರೂ ವಿರೋಧ ವ್ಯಕ್ತಪಡಿಸಿಲ್ಲವಾದರೂ ಕೆಲವರಿಗೆ ಈ ಬಗ್ಗೆ ಅಸಮಾಧಾನ ಇದೆ ಎಂದು ತಿಳಿದು ಬಂದಿದೆ.