ದಕ್ಷಿಣ ಆಫ್ರಿಕಾ ನೆದರ್ ಲೆಂಡ್ ಕ್ರಿಕೆಟ್ ಮ್ಯಾಚ್ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರನ್ನು ಬಂಧಿಸಲಾಗಿದ್ದು, ಇಬ್ಬರು ಪರಾರಿಯಾದ ಘಟನೆ ಹುಬ್ಬಳ್ಳಿಯ ಡಾಕಪ್ಪ ಸರ್ಕಲ್ ಬಳಿ ನಡೆದಿದೆ. ಬಂಧಿತ ಆರೋಪಿಗಳಿಂದ 2 ಲಕ್ಷದ 39 ಸಾವಿರ ರೂಪಾಯಿ ಹಾಗೂ ಹಲವಾರು ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿಯ ಡಾಕಪ್ಪ ಸರ್ಕಲ್ ನಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿದ್ದ ನವೀನ್, ಮಹಮ್ಮದ್,ಪವನ್ ಬಂಧಿತ ಆರೋಪಿಗಳಾಗಿದ್ದಾರೆ. ಧಾಳಿ ವೇಳೆ ಸಂತೋಷ್ ಹಾಗೂ ಗಿರೀಶ್ ಎಂಬವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಕ್ರಿಕೆಟ್ ಮ್ಯಾಚ್ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಐವರ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದ ಹುಬ್ಬಳ್ಳಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವಕಪ್ ಆರಂಭವಾಗುತ್ತಲೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಬೆಟ್ಟಿಂಗ್ ಭರಾಟೆ ಬಹಳ ಜೋರಾಗಿ ನಡೆಯುತ್ತಿದೆ.