500 ಕೋಟಿ ಮೌಲ್ಯದ ಅರಣ್ಯ ಭೂಮಿಯ ಪರಭಾರೆಗೆ ನೆರವಾದ ಎಸಿ ವಿರುದ್ಧ ಎಫ್ಐಆರ್

ರಾಜ್ಯ

ಅರಣ್ಯ ಎಂದು ವರ್ಗೀಕರಣವಾಗಿದ್ದ ನೂರಾರು ಕೋಟಿ ರೂಪಾಯಿ ಬೆಲೆಬಾಳುವ 17 ಎಕರೆ 34 ಗುಂಟೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿ ಎಂದು ಮ್ಯುಟೇಷನ್ ಮಾಡಿದ್ದ ಬೆಂಗಳೂರಿನ ಉಪ ಜಿಲ್ಲಾಧಿಕಾರಿ ಡಾ.ಎಂ ಜಿ ಶಿವಣ್ಣ ವಿರುದ್ಧ ಅರಣ್ಯ ಸಚಿವರ ಸೂಚನೆ ಮೇರೆಗೆ ಇಲಾಖೆ ಎಫ್ ಐ ಆರ್ ದಾಖಲಿಸಿದೆ.

ಉತ್ತರ ಬೆಂಗಳೂರಿನ ಭಾರತೀಯ ನಗರದ ಬಳಿ ಸುಮಾರು 500 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ 17 ಎಕರೆ 34 ಗುಂಟೆ ಅರಣ್ಯ ಭೂಮಿಯನ್ನು ಉಪ ವಿಭಾಗಾಧಿಕಾರಿಯಾಗಿದ್ದ ಶಿವಣ್ಣ ಏಕಪಕ್ಷೀಯವಾಗಿ ಕಂದಾಯ ಭೂಮಿ ಎಂದು ತಿದ್ದುಪಡಿ ಮಾಡಿದ್ದು ಈ ಭೂಮಿಯನ್ನು ಒತ್ತುವರಿ ಮಾಡಿ, ಆ ಜಮೀನಿನ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದವರಿಗೆ ಅನುಕೂಲ ಮಾಡಿಕೊಡುವ ಸಂಚನ್ನು ಅರಣ್ಯ ಇಲಾಖೆ ಇತ್ತೀಚೆಗೆ ಪತ್ತೆ ಹಚ್ಚಿತ್ತು. ಈ ವಿಷಯ ತಮ್ಮ ಗಮನಕ್ಕೆ ಬಂದ ಕೂಡಲೇ ಅರಣ್ಯ ಸಚಿವರು ಸಿಎಂ ಜತೆ ಸಮಾಲೋಚಿಸಿದ್ದರು. ತರುವಾಯ ಅರಣ್ಯ ಭೂಮಿಯನ್ನು ಸರ್ಕಾರಿ ಜಮೀನು ಎಂದು ತಿದ್ದುಪಡಿ ಮಾಡಿರುವ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಜಾಗೃತ ದಳಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು.