ಮೂಲಗೇಣಿ ಭೂ ಮಾಲಿಕರ ಅರ್ಜಿ ವಜಾ; ಗೇಣಿದಾರರಿಗೆ ಆನೆ ಬಲ, ಮೂಲಗೇಣಿ ಹಕ್ಕಿನ ಸಿಂಧುತ್ವ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್‌

ರಾಜ್ಯ

ಮೂಲಗೇಣಿ ಅಥವಾ ಒಳಮೂಲಗೇಣಿ ಗೇಣಿದಾರರಿಗೆ ಮಾಲಕತ್ವ ಪ್ರಧಾನ ಮಾಡುವ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಮೂಲಗೇಣಿ, ಒಳಮೂಲಗೇಣಿ ಹಕ್ಕು ಅಧಿನಿಯಮ-2011ರ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದೆ.ಇದರಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಗೇಣಿದಾರರಿಗೆ ಹೈಕೋರ್ಟ್‌ನ ಈ ಆದೇಶದಿಂದ ಆನೆ ಬಲ ಬಂದಂತಾಗಿದೆ.

ಉಡುಪಿ ಅದಮಾರು ಮಠ, ಗಣೇಶ್ ಪೈ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಭೂ ಕಂದಾಯ ವಸೂಲಿ ಮಾಡುವ ಅಧಿಕಾರವನ್ನು ಸ್ಥಳೀಯ ಶ್ರೀಮಂತರು, ಮಠ-ಮಂದಿರ, ಮಸೀದಿ ಮತ್ತು ಚರ್ಚುಗಳಿಗೆ ನೀಡಲಾಗಿತ್ತು. ಕಾಲಕ್ರಮೇಣ, ಆ ಭೂಮಿಯ ಕಂದಾಯ ವಸೂಲಿ ಮಾಡಿ, ಮೇಲುಸ್ತುವಾರಿ ನೋಡಿಕೊಳ್ಳುವವರು ಮೂಲದಾರರು ಎನಿಸಿಕೊಂಡರು. ಒಂದರ್ಥದಲ್ಲಿ ಅವರೇ ಭೂ ಮಾಲೀಕರು ಆದರು.

ಕಾಲಾನಂತರದಲ್ಲಿ ಆ ಭೂಮಿಯನ್ನು ತಲೆತಲಾಂತರಗಳಿಂದ ವಾಸ್ತವಿಕವಾಗಿ ಅನುಭವಿಸಿ ಬಾಳಿ ಬದುಕಿಕೊಂಡು ಬಂದುವರು ಮೂಲಗೇಣಿದಾರರು ಎಂದು ಭೂಮಿಯ ಪ್ರಮಾಣ ಪತ್ರದಲ್ಲಿ ನಮೂದು ಮಾಡಲಾಯಿತು. ಭೂಮಿಯ ಸ್ವಾಧೀನದಲ್ಲಿ ಇದ್ದರೂ ಒಡೆತನ ಇಲ್ಲದೆ ಜಾಗವನ್ನು ಅಭಿವೃದ್ಧಿಪಡಿಸುವುದು ಕಷ್ಟವಾಗಿತ್ತು. ಬ್ಯಾಂಕಿನಿಂದ ಸಾಲ-ಸೌಲಭ್ಯವೂ ದೊರೆಯುತ್ತಿರಲಿಲ್ಲ. ಅಷ್ಟೇ ಅಲ್ಲ, ಮೂಲಗೇಣಿ ಭೂಮಿಯನ್ನು ಮಾರಾಟ ಮಾಡುವ ಹಕ್ಕೂ ಮೂಲಗೇಣಿದಾರರಿಗೆ ಇಲ್ಲವಾಗಿತ್ತು.

ಸಾಕಷ್ಟು ಹೋರಾಟದ ಬಳಿಕ ಮೂಲಗೇಣಿದಾರರಿಗೆ ಜಮೀನಿನ ಪೂರ್ಣ ಮಾಲೀಕತ್ವ ಮತ್ತು ಮೂಲದಾರರಿಗೆ ನ್ಯಾಯಯುತ ಪರಿಹಾರ ನೀಡುವ ಉದ್ದೇಶದಿಂದ 2011ರಲ್ಲಿ ರಾಜ್ಯ ಸರ್ಕಾರ ಕಾಯಿದೆ ಜಾರಿಗೆ ತಂದಿತ್ತು. ಈ ಕಾಯಿದೆಯನ್ನು ಪ್ರಶ್ನಿಸಿ ಕೆಲ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಇದೀಗ ಹೈಕೋರ್ಟ್ ನ್ಯಾಯಪೀಠ ವಜಾಗೊಳಿಸಿ ಕಾಯಿದೆಯ ಸಿಂಧುತ್ವವನ್ನು ಎತ್ತಿಹಿಡಿದಿದೆ.