ಬೆಂಗಳೂರು, ಮಂಗಳೂರಿನಂತಹ ಮಹಾನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಬೆಂಕಿ ಅವಘಡ ಪ್ರಕರಣಗಳು ಹೆಚ್ಚಾಗುತ್ತಿವೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಇರುವುದು ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣ. ಇನ್ನು ಬಿಬಿಎಂಪಿ, ಮಹಾನಗರ ಪಾಲಿಕೆಗಳು ಲಂಚದ ಆಮಿಷಕ್ಕೆ ಒಳಗಾಗಿ ಬೇಕಾಬಿಟ್ಟಿಯಾಗಿ ಲೈಸೆನ್ಸ್ ನೀಡುತ್ತಿರುವುದು ಇದಕ್ಕೆಲ್ಲ ಕಾರಣ. ಕೋರಮಂಗಲ, ಅತ್ತಿಬೆಲೆ ದುರಂತಗಳು ಕಣ್ಣ ಮುಂದೆ ಇದ್ದರೂ ಅಧಿಕಾರಿ ವರ್ಗ ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಬಲಿ ಬಿದ್ದು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸುರಕ್ಷತಾ ಸಂಬಂಧ ನಿರ್ಲಕ್ಷ್ಯ ದಿಂದಾಗಿ ಪದೇಪದೆ ಸಾವು ನೋವು ಸಂಭವಿಸುತ್ತಿವೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು 2015-16ನೇ ಸಾಲಿನಲ್ಲಿ ನಡೆಸಿದ್ದ ಆಡಿಟಿಂಗ್ ಪ್ರಕಾರ ಬೆಂಗಳೂರು ನಗರದಲ್ಲಿ ಸುಮಾರು 22 ಸಾವಿರ ಬಹುಮಹಡಿ ಕಟ್ಟಡಗಳಿದ್ದವು. ಈ ಪೈಕಿ 16 ಸಾವಿರಕ್ಕೂ ಹೆಚ್ಚು ಕಟ್ಟಡಗಳಲ್ಲಿಅಗ್ನಿ ಸುರಕ್ಷತೆ ವ್ಯವಸ್ಥೆಯೇ ಇಲ್ಲ ಎಂಬ ಆತಂಕಕಾರಿ ಸಂಗತಿ ಬಯಲಾಗಿತ್ತು. ಬಹುಮಹಡಿ ಕಟ್ಟಡಗಳಲ್ಲಿಅಗ್ನಿ ಸುರಕ್ಷತೆ ಕುರಿತು ಈಗ ಮತ್ತೊಮ್ಮೆ ಸಮೀಕ್ಷೆ ನಡೆದರೆ ಈ ಕಟ್ಟಡಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಅಗ್ನಿ ಸುರಕ್ಷತೆ ವಿಚಾರದಲ್ಲಿ ಅಪಾಯದ ಮಟ್ಟದಲ್ಲಿರುವ ಬಹುಮಹಡಿ ಕಟ್ಟಡಗಳನ್ನು ಈ ಹಿಂದೆಯೇ ಗುರುತಿಸಿತ್ತು. ಅತಿ ಅಪಾಯಕಾರಿ ಹಾಗೂ ಅಪಾಯಕಾರಿ ಎಂದು ಎರಡು ವಿಧದಲ್ಲಿ ಕಟ್ಟಡಗಳನ್ನು ವಿಂಗಡಿಸಲಾಗಿತ್ತು. ಅಲ್ಲದೆ, ಪ್ರತಿ ಕಟ್ಟಡದ ಬಗ್ಗೆ ಪ್ರತ್ಯೇಕ ವರದಿ ಸಿದ್ಧಪಡಿಸಿ ಬಿಬಿಎಂಪಿಗೆ ಸಲ್ಲಿಸಲಾಗಿತ್ತು. ಜತೆಗೆ, ಅಂತಹ ಕಟ್ಟಡಗಳ ವಾಣಿಜ್ಯ ಪರವಾನಗಿ ರದ್ದುಪಡಿಸುವಂತೆ ಪಾಲಿಕೆಗೆ ಶಿಫಾರಸು ಮಾಡಲಾಗಿತ್ತು. ಆ ವರದಿ ಮೂಲೆ ಸೇರಿದ್ದು, ಕಟ್ಟಡಗಳಲ್ಲಿಅಗ್ನಿ ಸುರಕ್ಷತೆ ಖಾತರಿಪಡಿಸುವಲ್ಲಿ ವ್ಯವಸ್ಥೆ ವಿಫಲವಾಗಿದೆ. ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ, ಮಂಗಳೂರಿನಲ್ಲೂ ಇಂತಹ ವರದಿಗಳು ಕಸದ ಬುಟ್ಟಿ ಸೇರಿದೆ.
ನೆಲಮಹಡಿ ಸೇರಿ ಏಳು ಅಂತಸ್ತಿನ ಕಟ್ಟಡ ಹಾಗೂ 21 ಮೀಟರ್‌ಗಿಂತ ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳಿರುವಂತೆ ನೋಡಿಕೊಳ್ಳುವುದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಜವಾಬ್ದಾರಿ. ಹೊಸ ಕಟ್ಟಡ ನಿರ್ಮಿಸುವಾಗ ಮಾಲೀಕರು ಸಲ್ಲಿಸುವ ಅರ್ಜಿಯನ್ನು ಪರಿಶೀಲಿಸುವ ಇಲಾಖೆ ಅಧಿಕಾರಿಗಳು, ಅಗ್ನಿ ಸುರಕ್ಷತಾ ಮಾರ್ಗಸೂಚಿ ಪಾಲನೆಯ ಷರತ್ತಿನೊಂದಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡುತ್ತಾರೆ. ಕಟ್ಟಡ ಮಾಲೀಕರು ಆ ಮಾರ್ಗಸೂಚಿ ಪಾಲಿಸಲೇಬೇಕು.
ಕಟ್ಟಡ ಸಂಪೂರ್ಣ ನಿರ್ಮಾಣವಾದ ನಂತರ ಮಾಲೀಕರು ಮತ್ತೆ ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ಸುರಕ್ಷತಾ ಪ್ರಮಾಣಪತ್ರ ಪಡೆಯಬೇಕು. ಆ ನಂತರವೇ ಕಟ್ಟಡವನ್ನು ಬಳಕೆ ಮಾಡಬೇಕು. ಜತೆಗೆ, ನಿಯಮಿತವಾಗಿ ಅಗ್ನಿ ಸುರಕ್ಷತಾ ಪ್ರಮಾಣಪತ್ರ ನವೀಕರಿಸಿಕೊಳ್ಳಬೇಕು. ಅದರಂತೆ, ನಗರದ 22 ಸಾವಿರ ಬಹುಮಹಡಿ ಕಟ್ಟಡಗಳ ಪೈಕಿ 4 ಸಾವಿರ ಕಟ್ಟಡಗಳಿಗೆ ಮಾತ್ರ ಎನ್‌ಒಸಿ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರ ಪಡೆಯಲಾಗಿದೆ. 2 ಸಾವಿರ ಕಟ್ಟಡಗಳ ಮಾಲೀಕರು ಎನ್‌ಒಸಿ ಮಾತ್ರ ಪಡೆದು, ಅಗ್ನಿ ಸುರಕ್ಷತಾ ಪ್ರಮಾಣಪತ್ರವನ್ನು ಉಪೇಕ್ಷಿಸಿದ್ದಾರೆ. ಉಳಿದ 16 ಸಾವಿರ ಕಟ್ಟಡಗಳಿಗೆ ಎನ್‌ಒಸಿಯೂ ಇಲ್ಲ, ಅಗ್ನಿ ಸುರಕ್ಷತಾ ಪ್ರಮಾಣಪತ್ರವನ್ನೂ ಪಡೆದಿಲ್ಲ.
ಗೃಹ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಬೆಂಗಳೂರಿನಲ್ಲಿಒಟ್ಟು 2,847 ಅಗ್ನಿ ಅವಘಡ ಪ್ರಕರಣಗಳು ವರದಿಯಾಗಿವೆ. 2017ರಲ್ಲಿ 514, 2018ರಲ್ಲಿ 603, 2019ರಲ್ಲಿ 616, 2020ರಲ್ಲಿ 513, 2021 ರಲ್ಲಿ 490 ಹಾಗೂ 2022ರಲ್ಲಿ 111 ಅಗ್ನಿ ದುರಂತಗಳು ಸಂಭವಿಸಿವೆ. ಈ ಪೈಕಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ 1,889 ದುರಂತಗಳು ನಡೆದರೆ, ಅಡುಗೆ ಅನಿಲ ಸೋರಿಕೆಯಿಂದ 785, ರಾಸಾಯನಿಕಗಳ ಸೋರಿಕೆಯಿಂದ 41, ಆಯಿಲ್ ಸೋರಿಕೆಯಿಂದ 50 ಮತ್ತು ಸಿಗರೇಟು ಕಿಡಿಯಿಂದ 82 ಅಗ್ನಿ ದುರಂತ ಸಂಭವಿಸಿವೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಂಡರೆ ದುರಂತ ಸಂಭವಿಸುವುದನ್ನು ತಡೆಯಬಹುದು.