ಫ್ಲ್ಯಾಟ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಹಕರೊಬ್ಬರ ಮುಂಗಡ ಮೊತ್ತ ಹಿಂದಿರುಗಿಸುವಾಗ ಕಡಿತಗೊಳಿಸಿದ್ದ ರೂ 17 ಲಕ್ಷವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ ಡಿ.ಕೆ. ಶಿವಕುಮಾರ್ ಅವರಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಈ ಸಂಬಂಧ ಎನ್‌ಟಿವೈ ಬಡಾವಣೆಯ ರಾಘವ ನಗರದ ನಿವಾಸಿ ಜೆ. ರಾಘವೇಂದ್ರ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎಂ.ಶೋಭಾ ಮತ್ತು ಸದಸ್ಯೆ ಸುಮಾ ಅನಿಲ್ ಕುಮಾರ್ ಅವರಿದ್ದ ಪೀಠವು ಈ ಕುರಿತಂತೆ ಇದೇ 9ರಂದು ಆದೇಶಿಸಿದೆ.
‘ಮುಂಗಡ ಹಣದಲ್ಲಿ ಕಡಿತ ಮಾಡಿರುವ ರೂ 17 ಲಕ್ಷವನ್ನು ವಾರ್ಷಿಕ ಶೇ 10ರ ಬಡ್ಡಿ ದರದಲ್ಲಿ ಹಿಂದಿರುಗಿಸಬೇಕು. ವ್ಯಾಜ್ಯದ ವೆಚ್ಚವಾಗಿ ₹ 10 ಸಾವಿರ ಪರಿಹಾರ ಪಾವತಿಸಬೇಕು. ಈ ಆದೇಶವನ್ನು ಮುಂದಿನ 60 ದಿನಗಳಲ್ಲಿ ಪಾಲಿಸಬೇಕು. ವಿಫಲವಾದಲ್ಲಿ ಒಪ್ಪಂದ ಮಾಡಿಕೊಂಡ ದಿನಕ್ಕೆ ಅನುಗುಣವಾಗಿ ಶೇ 12 ರ ಬಡ್ಡಿ ಸೇರಿಸಿ ಕೊಡಬೇಕು’ ಎಂದು ಪೀಠವು ಎದುರುದಾರರಾದ ಡಿ.ಕೆ. ಶಿವಕುಮಾರ್, ಡಿ.ಕೆ. ಮಂಜುಳಾ, ಡಿ.ಕೆ.ಸುರೇಶ್, ಡಿ.ಕೆ.ಕೆಂಪೇಗೌಡ ಹಾಗೂ ಸಲಾರ್‌ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನಿರ್ದೇಶಿಸಿದೆ.
ಡಿ.ಕೆ. ಶಿವಕುಮಾರ್, ಡಿ.ಕೆ. ಮಂಜುಳಾ, ಡಿ.ಕೆ.ಸುರೇಶ್, ಡಿ.ಕೆ.ಕೆಂಪೇಗೌಡ ಹಾಗೂ ಸಲಾರ್‌ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಜೊತೆ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದ “ಡಿವಿನಿಟಿ ಪ್ರಾಜೆಕ್ಟ್”ನಲ್ಲಿನ ಫ್ಲ್ಯಾಟ್‌ವೊಂದನ್ನು ₹ 86,06,800 ಮೊತ್ತಕ್ಕೆ ಖರೀದಿಸಲು ರಾಘವೇಂದ್ರ ಅವರು 2017ರ ಏಪ್ರಿಲ್ 10ರಂದು ಒಪ್ಪಂದ ಮಾಡಿಕೊಂಡಿದ್ದರು. ಮುಂಗಡವಾಗಿ ₹ 30,81,352 ಪಾವತಿ ಮಾಡಿದ್ದರು. ಆದರೆ, ಕೊರೊನಾ ಕಾರಣ ನೀಡಿ ₹ 56,25,458 ಮೊತ್ತವನ್ನು ನಿಗದಿತ ಸಮಯಕ್ಕೆ ಪಾವತಿ ಮಾಡಿರಲಿಲ್ಲ.ಏತನ್ಮಧ್ಯೆ, ಎದುರುದಾರರು ರಾಘವೇಂದ್ರ ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದ ಫ್ಲ್ಯಾಟ್ ಅನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದರು. ತರುವಾಯ ರಾಘವೇಂದ್ರ ಅವರಿಗೆ ಮುಂಗಡ ಹಣದಲ್ಲಿ ₹ 17,77,422 ಮೊತ್ತವನ್ನು ಕಡಿತಗೊಳಿಸಿ ಉಳಿದ ₹ 13,03,930 ಮೊತ್ತವನ್ನು ಚೆಕ್ ಮೂಲಕ ಹಿಂದಿರುಗಿಸಿದ್ದರು.
‘ಡಿ.ಕೆ.ಶಿವಕುಮಾರ್ ಮತ್ತು ಎದುರುದಾರರಾದ ಅವರ ಕುಟುಂಬದ ಸದಸ್ಯರು ನನ್ನ ಜೊತೆ ಒಪ್ಪಂದ ಮಾಡಿಕೊಂಡಿದ್ದ ಫ್ಲ್ಯಾಟ್ ಅನ್ನು ಮತ್ತೊಬ್ಬರಿಗೆ ಲಾಭಕ್ಕೆ ಮಾರಿಕೊಂಡಿದ್ದಾರೆ. ಆದರೂ, ನಮ್ಮಿಂದ ₹ 17,77,422 ಮೊತ್ತವನ್ನು ಕಡಿತಗೊಳಿಸಿದ್ದಾರೆ. ಇದು ದೊಡ್ಡಮಟ್ಟದ ಲಾಭ ಗಳಿಸುವ ಮತ್ತು ಖರೀದಿದಾರರನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕ್ರಿಯೆಯಾಗಿದೆ’ ಎಂದು ರಾಘವೇಂದ್ರ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿಗೆ ಆಕ್ಷೇಪಣೆ ಸಲ್ಲಿಸಿದ್ದ ಎದುರುದಾರರು, ‘2017ರಲ್ಲಿ ಫ್ಲ್ಯಾಟ್ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಒಪ್ಪಂದದ ನಂತರ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಜಾರಿ ಮಾಡಿತ್ತು. ಹೀಗಾಗಿ, ಫ್ಲ್ಯಾಟ್ ವೆಚ್ಚ ಪರಿಷ್ಕರಣೆಯಾಗಿದ್ದು, ಅದರ ಮೊತ್ತ ₹ 1 ಕೋಟಿ 4 ಲಕ್ಷಕ್ಕೆ ಏರಿಕೆಯಾಗಿದೆ. ದೂರುದಾರರು ಒಪ್ಪಂದಂತೆ ಬಾಕಿ ಮೊತ್ತ ₹ 55 ಲಕ್ಷವನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡುವಲ್ಲಿ ವಿಫಲರಾಗಿದ್ದು ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಪ್ರತಿಪಾದಿಸಿದ್ದರು.