ಧರ್ಮಸ್ಥಳ ದೇಗುಲ ಹಿಂದೂ ಧಾರ್ಮಿಕ ದತ್ತಿ ನಿಯಮದ ಅಡಿಯಲ್ಲಿ ನೋಂದಾವಣೆಯಾಗಿಲ್ಲ: ಆರ್ ಟಿ ಐ ನಲ್ಲಿ ಸ್ಪೋಟಕ ವಿವರ ಬಹಿರಂಗ

ರಾಜ್ಯ

ಸೌಜನ್ಯ ಪ್ರಕರಣದಿಂದ ರಾಜ್ಯದಾದ್ಯಂತ ಭಾರೀ ಸುದ್ಧಿಯಲ್ಲಿರುವ ಧರ್ಮಸ್ಥಳ ಇದೀಗ ಮತ್ತೊಮ್ಮೆ ಸುದ್ಧಿಗೆ ಗ್ರಾಸವಾಗಿದೆ. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರವನ್ನು ಎಳೆದು ತರಬೇಡಿ ಎಂದು ಭಕ್ತವೃಂದ ಒಂದು ಕಡೆ ಹೇಳಿಕೊಳ್ಳುತ್ತಿದ್ದರೆ, ಇತ್ತ ಸೌಜನ್ಯ ಪ್ರಕರಣದ ಹೋರಾಟಗಾರರು ಧರ್ಮಸ್ಥಳ ಕ್ಷೇತ್ರದ ಪ್ರಭಾವಿಗಳೇ ಇದರ ಹಿಂದೆ ಇದ್ದಾರೆ. ಅದೇ ಕಾರಣದಿಂದ ಮುಚ್ಚಿಹಾಕಲಾಗಿದೆ ಎಂದು ನೇರವಾಗಿ ಆರೋಪಿಸುತ್ತಿದ್ದಾರೆ. ತಲೆತಲಾಂತರಗಳಿಂದ ಪೂಜನೀಯ ಭಾವನೆ ಹೊಂದಿದ್ದ ನಂಬಿಕಸ್ಥರು ಇದೀಗ ಧರ್ಮಸ್ಥಳದ ಪ್ರಭಾವಿಗಳ ಬಗ್ಗೆಯೇ ಅಪನಂಬಿಕೆ ಹುಟ್ಟಿಸುವಷ್ಟರ ಮಟ್ಟಿಗೆ ಈ ಕೇಸ್ ಸಾಗುತ್ತಿದೆ ಅನ್ನುವುದು ಸತ್ಯ.

ಇದೀಗ ಧರ್ಮಸ್ಥಳ ಕ್ಷೇತ್ರವೇ ಸರಕಾರದ ನಿಯಮಾವಳಿಗೆ ಅನುಸಾರವಾಗಿ ನೋಂದಾವಣೆಗೊಂಡಿಲ್ಲ ಅನ್ನುವ ಸ್ಪೋಟಕ ಸುದ್ದಿಯೊಂದು ಹೊರಬಿದ್ದಿದೆ. ಆರ್ ಟಿ ಐ ಅಡಿಯಲ್ಲಿ ಕೇಳಲಾದ ಪ್ರಶ್ನೆಗೆ ಸರಕಾರವೇ ಇಂತಹದ್ದೊಂದು ಉತ್ತರ ನೀಡಿರುವ ಕಾರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೋಂದಾವಣೆಯೇ ಆಗಿಲ್ಲ ಎಂಬುದು ಇದೀಗ ಹೊರಬಿದ್ದಿರುವ ಸತ್ಯವಾಗಿದೆ. ಇದು ಧರ್ಮಾದಾಯ ದತ್ತಿ ಅಧಿನಿಯಮದ ಉಲ್ಲಂಘನೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ದತ್ತಿ ತಹಶೀಲ್ದಾರ್‌ ಅವರು, ”ಮಂಜುನಾಥೇಶ್ವರ ದೇವಸ್ಥಾನವು ನೋಂದಾವಣೆಯೇ ಅಗಿಲ್ಲ” ಎಂದು ಆರ್‌ಟಿಐ ಅಡಿಯಲ್ಲಿ ಮಾಹಿತಿ ನೀಡಿದ್ದಾರೆ.

ಧರ್ಮಸ್ಥಳ ಮಂಜುನಾಥ ದೇಗುಲವು ಧಾರ್ಮಿಕ ಸಂಸ್ಥೆ, ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೋಂದಾವಣೆ ಆಗಿರುವುದಿಲ್ಲ. ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ಅವರು, ”ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೋಂದಾವಣೆ ಮಾಡಿರುವ ಪ್ರತಿಯನ್ನು ಕೋರಿ ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಆರ್‌ಟಿಐ ಅರ್ಜಿಗೆ 2023ರ ಅಕ್ಟೋಬರ್ 18ರಂದು ಮಾಹಿತಿ ನೀಡಿದ್ದಾರೆ.

”ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮ 2002ರ ಸೆಕ್ಷನ್ 53ರಂತೆ ಇದುವರೆಗೂ ನೋಂದಣಿ ಆಗಿರುವುದಿಲ್ಲ” ಎಂದು ಧಾರ್ಮಿಕ ದತ್ತಿ ತಹಶೀಲ್ದಾರ್‌ ಅವರು ಮಾಹಿತಿ ನೀಡಿದ್ದಾರೆ.