ಇಲ್ಲಿ ಆಡಳಿತ, ವಿರೋಧ ಪಕ್ಷ ಎಂಬುದೇ ಇಲ್ಲ.. ಎಲ್ಲದಕ್ಕೂ ಕಮ್ಯುನಿಸ್ಟರೇ ಮುಂದು.!
ವರ್ಷದ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಇತ್ತೋ,ವರ್ಷ ಕಳೆದು ಇದೀಗ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದರೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಅದೇ ರೀತಿ ಇದೆ. ಇಲ್ಲಿ ಯಾವುದೇ ಸರಕಾರ ಅಸ್ತಿತ್ವಕ್ಕೆ ಬಂದರೂ ಎಲ್ಲವೂ ಸಂಘಪರಿವಾರದ ಸಂಘಟನೆಗಳ ಹಿಡಿತದಲ್ಲಿದೆ ಅನ್ನುವುದಕ್ಕೆ ಸಾಲು ಸಾಲು ನಡೆದ ಘಟನೆಗಳೇ ಸಾಕ್ಷಿ. ಬಿಜೆಪಿ ಧರ್ಮಾಧಾರಿತವಾಗಿ ತನ್ನ ಕಸುಬನ್ನು ಯಥಾವತ್ತಾಗಿ ಜಾರಿಗೊಳಿಸುತ್ತಿದೆ. ಅದನ್ನು ತಡೆಯಬೇಕಾದ ಕಾಂಗ್ರೆಸ್ ಎಲ್ಲವನ್ನೂ ಕೈ ಕಟ್ಟಿ,ಕಣ್ಣುಮುಚ್ಚಿಕೊಂಡು ನೋಡುತ್ತಾ ಬಿಜೆಪಿಯ ಅಜೆಂಡಾ ಜಾರಿಗೆ ಸಹಕರಿಸುತ್ತಿದೆ. ಇಲ್ಲಿನ ಅಲ್ಪಸಂಖ್ಯಾತರು ‘ನೆಮ್ಮದಿಯ ನಾಳೆಗಾಗಿ’ ಕಾಂಗ್ರೆಸ್ ಪರ ಒಗ್ಗಟ್ಟಾಗಿ ಮತ ಚಲಾಯಿಸುತ್ತಿದ್ದರೂ ಅಲ್ಪಸಂಖ್ಯಾತರಿಗೆ ನೆಮ್ಮದಿ ಕೇವಲ ಭರವಸೆಯ ಗ್ಯಾರಂಟಿ ಆಗಿ ಉಳಿದಿದೆಯೇ ಹೊರತು, ಬಿಜೆಪಿ ಆಡಳಿತವಿದ್ದಾಗ ಹೇಗಿತ್ತೋ ಅದೇ ಪರಿಸ್ಥಿತಿ ಈಗಲೂ ಹಾಗೆಯೇ ಇದೆ ಅನ್ನುವುದು ಬಹು ಬೇಸರದ ಸಂಗತಿ ಅನ್ನುವುದಂತೂ ಸತ್ಯ.
ಬಿಜೆಪಿ ಆಡಳಿತವಿದ್ದಾಗ ಕರಾವಳಿಯ ಪರಿಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ಇಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದವರಿಗೆ ಪರಿಹಾರದಲ್ಲೂ ಆಡಳಿತ ವರ್ಗ ತಾರತಮ್ಯ ತೋರಿಸಿತ್ತು. ಇಲ್ಲಿ ವ್ಯಾಪಾರದಲ್ಲೂ ಧರ್ಮ ದಂಗಲ್ ನಡೆಯುತ್ತಿತ್ತು. ಅಲ್ಪಸಂಖ್ಯಾತ ವರ್ಗವನ್ನು ಆಡಳಿತಾರೂಢರು ದ್ವಿತೀಯ ದರ್ಜೆ ಪ್ರಜೆಯನ್ನಾಗಿ ಟ್ರೀಟ್ ಮಾಡುತ್ತಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಆದರೆ ಜಿಲ್ಲೆಯಲ್ಲಿ ಈಗಲೂ ಅದೇ ರೀತಿಯ ಪರಿಸ್ಥಿತಿಯಿದೆ. ಸೌಹಾರ್ಧತೆಯ ತಾಣವಾಗಿದ್ದ ಮಂಗಳಾದೇವಿ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಹಿಂದೂ ಹೊರತುಪಡಿಸಿ ಅನ್ಯರಿಗೆ ವ್ಯಾಪಾರ ನಡೆಸಲು ಅವಕಾಶ ನೀಡಬಾರದಾಗಿ ಸಂಘಪರಿವಾರದ ಮುಖಂಡ ಪಂಪ್ ವೆಲ್ ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದರು. ಕೊನೆಗೆ ಸ್ಥಳೀಯ ಸಂಸ್ಥೆ ತನ್ನ ಅಧೀನದ ಜಾಗದಲ್ಲಿ ಎಲ್ಲಾ ಸಮುದಾಯಕ್ಕೂ ವ್ಯಾಪಾರ ನಡೆಸಲು ಅನುಮತಿ ನೀಡಿದ್ದರೂ, ವಿ ಎಚ್ ಪಿ, ಭಜರಂಗದಳ ಹಿಂದೂ ವ್ಯಾಪಾರಿಗಳ ಮಳಿಗೆಗೆ ಕೇಸರಿ ಧ್ವಜ ಕಟ್ಟಿ ಕರಾವಳಿ ನಮ್ಮದೇ ಅನ್ನುವ ರೀತಿಯ ಸಂದೇಶವನ್ನು ಸರಕಾರಕ್ಕೆ ನೀಡಿತ್ತು. ಆದರೆ ಈ ಬಗ್ಗೆ ಕಾಂಗ್ರೆಸ್ ಮೌನ ಸಮ್ಮತಿಯ ಮೂಲಕ ಮತೀಯವಾದಿ ಸಂಘಟನೆಯ ಕೃತ್ಯಕ್ಕೆ ಸಹಮತ ಸೂಚಿಸಿದ್ದರು. ಜಿಲ್ಲೆಯಲ್ಲಿ ಘಟಾನುಘಟಿ ಕಾಂಗ್ರೆಸ್ ನಾಯಕರಿದ್ದರೂ, ಇಬ್ಬರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದರೂ, ಈ ಬಗ್ಗೆ ಕನಿಷ್ಠ ಒಂದೇ ಒಂದು ಹೇಳಿಕೆ ಕೂಡ ನೀಡಿಲ್ಲ. ಆದರೆ ಕಮ್ಯುನಿಸ್ಟ್ ಪಕ್ಷ, ಡಿವೈಎಫ್ಐ,ಸಮಾನ ಮನಸ್ಕರ ಸಂಘಟನೆ ಈ ಬಗ್ಗೆ ಧ್ವನಿ ಎತ್ತಿ ಸಂಘಪರಿವಾರದ ಹಿಡನ್ ಅಜೆಂಡಾವನ್ನು ಬಹಿರಂಗವಾಗಿಯೇ ವಿರೋಧಿಸಿತ್ತು. ಮಂಗಳೂರಿಗೆ ಬಂದಿದ್ದ ಉಸ್ತುವಾರಿ ಸಚಿವರನ್ನು ಡಿವೈಎಫ್ಐ, ಕಮ್ಯೂನಿಸ್ಟ್ ಪಕ್ಷ, ಬೀದಿ ಬದಿ ವ್ಯಾಪಾರಸ್ಥರು ಭೇಟಿ ನೀಡಿ ಇಲ್ಲಿನ ಪರಿಸ್ಥಿತಿ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದರು. ಪಂಪ್ ವೆಲ್ ಬಂಧನಕ್ಕೆ ಆಗ್ರಹಿಸಿದರು. ಆ ನಂತರ ಎಚ್ಚೆತ್ತುಕೊಂಡ ಸರ್ಕಾರ ಪಂಪ್ ವೆಲ್ ವಿರುದ್ಧ ಸುಮೊಟೋ ಕೇಸ್ ದಾಖಲಿಸಿತ್ತು. ಆದರೆ ಪೊಲೀಸರು ದಾಖಲಿಸಿದ್ದ ಕೇಸ್ ಎಷ್ಟು ವೀಕ್ ಇತ್ತು ಅನ್ನುವುದಕ್ಕೆ 24 ಗಂಟೆಯಲ್ಲೇ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಕರಾವಳಿಯಲ್ಲಿ ಕಾಂಗ್ರೆಸ್ ಮತೀಯವಾದವನ್ನು ಮಟ್ಟ ಹಾಕುವ ಕೆಲಸ ಮಾಡಬೇಕಿತ್ತು. ಆದರೆ ಅದನ್ನು ಎಡಪಂಥೀಯರು ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಅನ್ಯಾಯವಾದಾಗ ಕಣ್ಮುಚ್ಚಿ ಕುಳಿತುಕೊಳ್ಳುವ ಕಾಂಗ್ರೆಸ್ ಗೆ ಇಲ್ಲಿನ ಅಲ್ಪಸಂಖ್ಯಾತರು ಮತ ಹಾಕುತ್ತಾರೆ. ಆದರೆ ಅಲ್ಪಸಂಖ್ಯಾತರಿಗೆ ಧ್ವನಿ ಎತ್ತುವ ಕಮ್ಯುನಿಸ್ಟರು ಹೋರಾಟಕ್ಕೆ ಮಾತ್ರ ಸೀಮಿತರಾಗುತ್ತಿದ್ದಾರೆ. ಆದರೆ ಚುನಾವಣೆ ಬಂದಾಗ ಅಲ್ಪಸಂಖ್ಯಾತರು ಕಮ್ಯುನಿಸ್ಟರನ್ನು ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಳ್ಳುತ್ತಾರೆ. ಬಿಜೆಪಿ ಸೋಲಿಸಲು ಹೇಗೆ ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಕಾಂಗ್ರೆಸ್ ಗೆ ಮತ ಚಲಾಯಿಸುತ್ತಾರೋ, ಅದೇ ರೀತಿ ಒಮ್ಮೆ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಬುದ್ಧಿ ಕಲಿಸಲು ಇಲ್ಲಿನ ಅಲ್ಪಸಂಖ್ಯಾತ ವರ್ಗ ಒಗ್ಗಟ್ಟಾಗಿ ಕಮ್ಯುನಿಸ್ಟರಿಗೆ ಒಮ್ಮೆ ಮತ ಚಲಾಯಿಸಿ ನೋಡಿ.. ಖಂಡಿತ ಕರಾವಳಿಯಲ್ಲಿ ಮತೀಯವಾದ ನಿರ್ಮೂಲನೆ ಆಗುವುದಂತೂ ಸತ್ಯ. ಏಕೆಂದರೆ ಇಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಗೆ ಮತ ಚಲಾಯಿಸದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಇಡುಗಂಟೇ ಇಲ್ಲ. ಖಂಡಿತವಾಗಿಯೂ ಅಲ್ಪಸಂಖ್ಯಾತರು ತಮ್ಮ ಕೈ ಯಿಂದ ದೂರ ಸರಿಯುತ್ತಾರೆ ಅಂದುಕೊಂಡು ದೌರ್ಜನ್ಯ ನಡೆದಾಗ ಎದುರು ಬರುತ್ತಾರೆ. ಇಲ್ಲವಾದರೆ ಇಲ್ಲಿ ಏನೇ ಆದರೂ ಅಲ್ಫಸಂಖ್ಯಾತರು ನಮಗೆ ಓಟು ಹಾಕುವುದು ಎಂಬ ಭಾವನೆ ಕಾಂಗ್ರೆಸ್ ಗೆ ಇರುತ್ತದೆ. ಮೊದಲು ಅಂತಹ ಮನೋಸ್ಥಿತಿಯಿಂದ ಜಿಲ್ಲೆಯ ಕಾಂಗ್ರೆಸ್ಸಿಗರನ್ನು ಮುಟ್ಟಿ ನೋಡುವ ಕೆಲಸ ಇಲ್ಲಿನ ಅಲ್ಫಸಂಖ್ಯಾತ ವರ್ಗ ಮಾಡಬೇಕಿದೆ.
“ಒಂದು ಪ್ರಕರಣದಲ್ಲಿ ಮಂಗಳೂರಿನ ವಕೀಲೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆಶೆಲ್ ಬಸ್ಸಿನ ನಿರ್ವಾಹಕನ ಮೇಲೆ ಐಪಿಸಿ ಸೆಕ್ಷನ್ 354 ದಾಖಲಾಗಿರುವ ಹೊರತಾಗಿಯೂ ಮಂಗಳೂರು ಪೊಲೀಸರು ಕೇವಲ ನೋಟಿಸ್ ನೀಡಿ ಕೈ ತೊಳೆದು ಕೊಂಡಿರುತ್ತಾರೆ.
ಇನ್ನೊಂದು ಪ್ರಕರಣದಲ್ಲಿ ವೆನ್ಲಾಕ್ ಆಸ್ಪತ್ರೆಯ ಸೆಕ್ಯುರಿಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಸಮಾಜ ಸೇವಕ ಆಸಿಫ್ ಆಪತ್ಬಾಂಧವರ ಮೇಲೆ ಮಂಗಳೂರು ಪೊಲೀಸರು ಐಪಿಸಿ ಸೆಕ್ಷನ್ 354 ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡುವಂತೆ ಮಾಡುತ್ತಾರೆ.
ಒಂದೇ ರೀತಿಯ ಸೆಕ್ಷನ್ ದಾಖಲಾಗಿರುವ ಎರಡು ವಿಭಿನ್ನ ಪ್ರಕರಣಗಳಲ್ಲಿ ಆರೋಪಿಗಳ ಧರ್ಮ ನೋಡಿ ಮಂಗಳೂರು ಪೊಲೀಸರು ನಡೆಸಿಕೊಂಡಿರುವ ರೀತಿ ತಾರತಮ್ಯ ಧೋರಣೆ ಆಗಿರುತ್ತದೆ. ಮಾತ್ರವಲ್ಲ ಮಂಗಳೂರಿನ ಪೊಲೀಸರಲ್ಲೂ ಸಂಘೀ ಮನೋಸ್ಥಿತಿಯ ಕೋಮುವಾದವು ಮನೆಮಾಡಿದೆ.
ಕರಾವಳಿಯಲ್ಲಿ ಈಗಲೂ ಬಿಜೆಪಿ ಯೇ ಆಳುತ್ತಿದೆ ಅನ್ನುವುದಕ್ಕೆ ಈ ಕೆಲವು ಘಟನೆಗಳೇ ಸಾಕ್ಷಿ. ಕೋಮುಗಲಭೆ ಸೃಷ್ಟಿಸುವ ಹೇಳಿಕೆ ನೀಡುತ್ತಿರುವ ಪಂಪ್ ವೆಲ್ ಮುಟ್ಟಲು ಇಲ್ಲಿನ ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಇಸ್ರೇಲ್ ಕ್ರೌರ್ಯದ ವಿರುದ್ಧ ಧ್ವನಿ ಎತ್ತಿ ಪ್ಯಾಲೆಸ್ತೀನ್ ಬೆಂಬಲಿಸಿದ ಜಾಕೀರ್ ಬಂದರ್ ಜೈಲು ಪಾಲಾಗುತ್ತಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಆಸೀಫ್ ಆಪದ್ಭಾಂಧವ ಕ್ಷುಲ್ಲಕ ವಿಚಾರ ಮುಂದಿಟ್ಟು ಪೊಲೀಸರು ಬಂಧಿಸುತ್ತಾರೆ. ಆದರೆ ಇಲ್ಲೊಂದು ಹುಲಿವೇಷ ತೊಟ್ಟವರು ಐ ಸ್ಟ್ಯಾಂಡ್ ಇಸ್ರೇಲ್ ಬಣ್ಣ ಹಚ್ಚಿ ಬಹಿರಂಗವಾಗಿ ತೋರ್ಪಡಿಸಿದರೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಕರಾವಳಿಯಲ್ಲಿ ಮಾತ್ರ ನಮ್ಮದೇ ಸಾಮ್ರಾಜ್ಯ ಅನ್ನುವ ರೀತಿಯಲ್ಲಿ ಸಂಘಪರಿವಾರ ತೋರ್ಪಡಿಸುತ್ತಿದ್ದರೂ, ಇದನ್ನು ಮಟ್ಟ ಹಾಕಬೇಕಾದ ಕಾಂಗ್ರೆಸ್ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ.