ಹೆಸರಾಂತ ಬಿಲ್ಡರ್ ಓರ್ವರ ಮನೆಯ ಕೆಲಸಕ್ಕಿದ್ದ ವ್ಯಕ್ತಿಯೋರ್ವ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದನ್ನು ಕಳುವು ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ನಡೆದಿದೆ. ಪುದು, ಕೋಡಿಮಜಲು ನಿವಾಸಿ ಇಮಾದ್ ಬಿಲ್ಡರ್ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯ ಕಪಾಟಿನೊಳಗೆ ಇರಿಸಲಾಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಸಹಿತ ನಗದನ್ನು ಮನೆಯ ಕೆಲಸದಾತನೇ ಕದ್ದುಕೊಂಡು ಹೋಗಿರುವುದಾಗಿ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 27 ಲಕ್ಷದ 50, ಸಾವಿರ ರೂ ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಬಿಲ್ಡರ್ ಮೊಹಮ್ಮದ್ ಝಫರುಲ್ಲಾ ಎಂಬವರ ಜೊತೆ ಸುಮಾರು 8 ತಿಂಗಳ ಹಿಂದೆ ಕಟ್ಟಡ ಕಾಮಗಾರಿಯ ಕೆಲಸಕ್ಕೆ ಮಂಜೇಶ್ವರ ಮೂಲದ ಆಲಿ ಎಂಬಾತ ಸೇರಿದ್ದ. ಆತನಿಗೆ ಫರಂಗಿಪೇಟೆ ಎಂಬಲ್ಲಿನ ಹುಡುಗಿಯ ಜೊತೆ ವಿವಾಹವಾಗಿದ್ಸು, ಮಾಲಕರ ಜೊತೆ ಹೆಚ್ಚಿನ ವಿಶ್ವಾಸ ಹೊಂದಿದ್ದ. ಈ ಕಾರಣಕ್ಕಾಗಿ ಸಹಾಯಕನಾಗಿ ದುಡಿಯುತ್ತಿದ್ದ ಆಲಿಯಲ್ಲಿ ಮನೆಗೆ ಅಗತ್ಯ ಸಾಮಾಗ್ರಿಗಳನ್ನು ಕಳುಹಿಸಿಕೊಡುತ್ತಿದ್ದರು. ಆದರೆ ಈತನ ಮೇಲಿರಿಸಿದ್ದ ಅತೀ ವಿಶ್ವಾಸ ಮಾಲಕರಿಗೆ ಮುಳುವಾಗಿ ಪರಿಣಮಿಸಿತು. ಅ.18 ರಂದು ಮನೆ ಮಂದಿ ಎಲ್ಲರು ಮನೆಗೆ ಬೀಗ ಹಾಕಿ ತಮ್ಮನ ಮನೆಗೆ ಹೋಗಿದ್ದರು. ಮನೆಗೆ ಬೀಗ ಹಾಕಿ ಅದರ ಕೀ ಯನ್ನು ಆಲಿಯಲ್ಲಿ ನೀಡಿದ್ದರು.
ಅ ಬಳಿಕ 19 ರಂದು ಕಟ್ಟಡ ಕಾಮಗಾರಿಯ ವಿಚಾರಕ್ಕೆ ಮಾಲಕ ಮೊಹಮ್ಮದ್ ಅವರು ಈತನಿಗೆ ಪೋನ್ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು. ಆದರೆ ಪೋನ್ ಸ್ವಿಚ್ ಆಫ್ ಆಗಿರುವ ವಿಚಾರವನ್ನು ಅಷ್ಟಾಗಿ ಸೀರಿಯಸ್ ಆಗಿ ತೆಗೆದುಕೊಂಡಿರದ ಮಾಲಕರು ಮರುದಿನ ಅಂದರೆ ಅ. 20 ರಂದು ಅಗತ್ಯ ಕೆಲಸವೊಂದರ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು.
ಬೆಂಗಳೂರಿನಿಂದಲೂ ಪೋನ್ ಮಾಡಿದಾಗಲೂ ಈತನ ಮೊಬೈಲ್ ಆಫ್ ಆಗಿತ್ತು. ಕೆಲಸದ ಒತ್ತಡದ ನಡುವೆಯ ಅ. 23 ರಂದು ಊರಿಗೆ ವಾಪಾಸು ಆದ ಬಿಲ್ಡರ್ ರಾತ್ರಿ ಸುಮಾರು 8 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಹಾಕಿಕೊಂಡಿತ್ತು. ಕೀ ಕೊಡುವಂತೆ ಆತನಿಗೆ ಪೋನ್ ಮಾಡಿದಾಗ ಆಗಲೂ ಆಫ್ ಆಗಿತ್ತು. ಸಂಶಯದಿಂದ ಮನೆಯ ಹಿಂಬದಿಯಿಂದ ಕಿಟಕಿಯಲ್ಲಿ ಇಣುಕಿ ನೋಡಿದಾಗ ಕೋಣೆಯ ಬಾಗಿಲು ತೆರದುಕೊಂಡಿದ್ದು, ಕಪಾಟಿನ ಲಾಕರ್ ಮುರಿದು ಅದರಲ್ಲಿ ಇದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿತ್ತು. ಕೂಡಲೇ ಗ್ರಾಮಾಂತರ ಪೋಲಿಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.