ಬೈಯಪ್ಪನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ; ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ ಬಳಿಕ ಗರ್ಭಪಾತ ಮಾಡಿಸುತ್ತಿದ್ದ ಜಾಲ ಪತ್ತೆ.

ರಾಜ್ಯ

ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ ಬಳಿಕ ಗರ್ಭಪಾತ ಮಾಡಿಸುತ್ತಿದ್ದ ಜಾಲವೊಂದನ್ನು ಭೇದಿಸಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಮೈಸೂರಿನ ಬನ್ನೂರು ರಸ್ತೆ ವಸಂತನಗರದ ಶಿವಲಿಂಗೇಗೌಡ, ಮಂಡ್ಯ ಜಿಲ್ಲೆ ಕೂಳೇನಹಳ್ಳಿಯ ನಯನ್‌ಕುಮಾರ್, ಪಾಂಡವಪುರ ತಾಲೂಕಿನ ಸುಂಕದನ್ನೂರು ಗ್ರಾಮದ ನವೀನ್‌ಕುಮಾರ್, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಟಿ.ಎಂ.ವೀರೇಶ್ ಬಂಧಿತರು.

ಈ ದಂಧೆಯಲ್ಲಿ ವೈದ್ಯರು ಸಹ ಇದ್ದು, 15 ರಿಂದ 20 ಸಾವಿರ ರೂಪಾಯಿ ಪಡೆದುಕೊಂಡು ಈ ದಂಧೆಗೆ ಸಾಥ್ ನೀಡುತ್ತಿದ್ದರು. ಇತ್ತೀಚೆಗೆ ಹೆಣ್ಣು ಭ್ರೂಣ ಪತ್ತೆ ದಂಧೆ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಪಡೆದ ಇನ್‌ಸ್ಪೆಕ್ಟರ್‌ ಎಂ.ಪ್ರಶಾಂತ್ ರವರು ಒಂದು ತನಿಖಾ ತಂಡವನ್ನು ರಚಿಸಿಕೊಂಡು ದಂಧೆಕೋರರ ಬೆನ್ನುಹತ್ತಿದ್ದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹಳೇ ಮದ್ರಾಸ್‌ ರಸ್ತೆ ಕಡೆಯಿಂದ ಗರ್ಭಿಣಿಯನ್ನು ಪರೀಕ್ಷೆಗೆ ಕರೆದೊಯ್ಯಲು ವೀರೇಶ್ ತಂಡ ಬರುವ ಖಚಿತ ಮಾಹಿತಿ ಪಿಐ ಪ್ರಶಾಂತ್ ತಂಡಕ್ಕೆ ಸಿಕ್ಕಿದೆ. ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ಹಳೇ ಮದ್ರಾಸ್‌ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಅಲ್ಲಿಗೆ ಬಂದ ದಂಧೆಕೋರರು, ಪೊಲೀಸರನ್ನು ಕಂಡು ಭೀತಿಯಿಂದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು, ಕೂಡಲೇ ಆ ಕಾರನ್ನು ಬೈಕ್‌ಗಳಲ್ಲಿ ಸ್ಪಲ್ಪದೂರ ಬೆನ್ನಹತ್ತಿ ಹೋಗಿ ತಡೆದಿದ್ದಾರೆ. ಬಳಿಕ ಕಾರಿನಲ್ಲಿದ್ದ ಶಿವಲಿಂಗೇಗೌಡ, ನಯನ್ ಹಾಗೂ ಗರ್ಭಿಣಿಯನ್ನು ಠಾಣೆ ಕರೆತಂದು ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದೆ.

ಈ ಆರೋಪಿಗಳ ಮಾಹಿತಿ ಆಧರಿಸಿ ಮಂಡ್ಯ-ಪಾಂಡಪುರ ರಸ್ತೆಯಲ್ಲಿದ್ದ ಅಲೆಮನೆ ಮೇಲೆ ಪೊಲೀಸರು ಕ್ಷಿಪ್ರ ದಾಳಿ ನಡೆಸಿದಾಗ ಇನ್ನುಳಿದ್ದಿಬ್ಬರು ಸೆರೆಯಾಗಿದ್ದಾರೆ. ದಂಧೆಕೋರರ ಅಡ್ಡೆಯಾದ ಪಾಂಡಪುರ ರಸ್ತೆಯ ಅಲೆಮನೆ ಮೇಲೆ ದಾಳಿ ನಡೆಸಿದಾಗ ಐದಕ್ಕೂ ಹೆಚ್ಚಿನ ಗರ್ಭೀಣಿಯರು ಪತ್ತೆಯಾಗಿದ್ದಾರೆ. ಆ ಮಹಿಳೆಯರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದು ಕಳುಹಿಸಲಾಗಿದೆ. ಈ ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆಗೆ ಕೆಲ ವೈದ್ಯರು ಸಹ ಸಾಥ್ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.