ಜಾತಿ ಪ್ರಮಾಣ ಪತ್ರ ಮೋಸ: ಎಳವ ಜಾತಿಗೆ ಸೇರಿದ ಮಾಜಿ ಶಾಸಕರ ಪತ್ನಿ; ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ

ರಾಜ್ಯ

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಭಡ್ತಿ ಪಡೆಯಲು ಮಾಜಿ ಶಾಸಕರ ಪತ್ನಿಯೂ ಆಗಿರುವ ಡಾ. ಸುಜಾ ಕೆ. ಶ್ರೀಧರ್ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವುದು ಸಾಬೀತಾಗಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು ನಿರ್ದೇಶನ ನೀಡಿದೆ.

ಈ ಕುರಿತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಎಚ್.ಡಿ ಆನಂದ್ ಕುಮಾರ್ ಅವರ ಸುತ್ತೋಲೆ ಮಾಧ್ಯಮಗಳಿಗೆ ದೊರಕಿದೆ.

ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರ ಗ್ರಾಮದ ಡಾ. ಕೆ ಶ್ರೀನಿವಾಸ ಮೂರ್ತಿ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 10 ವರ್ಷ ಶಾಸಕರಾಗಿದ್ದರು. ಇವರ ಪತ್ನಿ ಡಾ. ಸುಜಾ ಕೆ ಶ್ರೀಧರ್ ಕೇರಳ ಮೂಲದವರಾಗಿದ್ದು ಎಳವ ಜಾತಿಗೆ ಸೇರಿದ್ದಾರೆ. ಆದರೆ, ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಅವರು ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ ತಾವೆಂದು ಪ್ರಮಾಣ ಪತ್ರ ಪಡೆದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಭಡ್ತಿ ಪಡೆದುಕೊಂಡಿದ್ದರು. ಈ ವಿಚಾರವಾಗಿ ಸಲ್ಲಿಕೆಯಾಗಿದ್ದ ದೂರನ್ನು ಬೆಂಗಳೂರು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ತನಿಖೆ ನಡೆಸಿದಾಗ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವುದು ಸಾಬೀತಾಗಿದೆ. ಹಾಗಾಗಿ ಡಾ. ಸುಜಾ ಕೆ ಶ್ರೀಧರ್ ಅವರು ಪಡೆದಿದ್ದ ಪರಿಶಿಷ್ಟ ಜಾತಿ ಆದಿ ದ್ರಾವಿಡ ಸುಳ್ಳು ಪ್ರಮಾಣ ಪತ್ರವನ್ನು ಅಸಿಂಧುಗೊಳಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ನೆಲಮಂಗಲ ತಹಶೀಲ್ದಾರ್ ಅವರಿಗೆ ಬೆಂಗಳೂರು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನಿರ್ದೇಶನಾ ನೀಡಿತ್ತು.

ಪತ್ನಿ ಡಾ. ಸುಜಾ ಕೆ ಶ್ರೀಧರ್ ಕೇರಳ ಎಳವ ಜಾತಿಗೆ ಸೇರಿದ್ದು, ತಂದೆಯ ಜಾತಿ ಮಾತ್ರ ಮಗಳಿಗೆ ಬರುತ್ತದೆ ಎಂಬ ಮಾಹಿತಿ ತಿಳಿದಿದ್ದರೂ ಡಾ. ಕೆ ಶ್ರೀನಿವಾಸ ಮೂರ್ತಿ ತಮ್ಮ ಪ್ರಭಾವ ಬಳಸಿ ಪತ್ನಿಗೆ ತಮ್ಮ ಜಾತಿಯ ಸರ್ಟಿಫಿಕೆಟ್ ಕೊಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.