ಮಾಜಿ ಸಿ.ಎಂ ಯಡಿಯೂರಪ್ಪಗೆ ಇನ್ಮುಂದೆ ಕೇಂದ್ರದ ಝಡ್ ಪ್ಲಸ್ ಭದ್ರತೆ; ರಾಜಾಹುಲಿಯನ್ನು ಕಟ್ಟಿಹಾಕುವ ತಂತ್ರಗಾರಿಕೆ.?

ರಾಜ್ಯ

ಬಿಜೆಪಿ ಹಿರಿಯ ನಾಯಕ, ರಾಜ್ಯ ರಾಜಕೀಯದ ರಾಜಾಹುಲಿ ಬಿ. ಎಸ್ . ಯಡಿಯೂರಪ್ಪನವರಿಗೆ ಕೇಂದ್ರ ಗೃಹ ಇಲಾಖೆ ಝಡ್ ಕೆಟಗರಿ ಭದ್ರತೆ ನೀಡಿದೆ. ಗುಪ್ತಚರ ವಿಭಾಗ (IB) ಬೆದರಿಕೆ ಮೌಲ್ಯಮಾಪನಕ್ಕೆ ಪ್ರತಿಕ್ರಿಯೆಯಾಗಿ ಅವರಿಗೆ ಗೃಹ ಸಚಿವಾಲಯ (MHA) ಝಡ್ ಕೆಟಗರಿ ಭದ್ರತೆಯನ್ನು ನೀಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಯಡಿಯೂರಪ್ಪನವರ ಸುರಕ್ಷತೆಯ ಬಗೆಗೆ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ಕೈಗೊಂಡಿದೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂಲಭೂತ ಗುಂಪುಗಳಿಂದ ಸಂಭಾವ್ಯ ಬೆದರಿಕೆಗಳಿವೆ ಎಂದು ತಿಳಿದುಬಂದಿದೆ. ಎಂಎಚ್ಎ ನಿರ್ದೇಶನದಂತೆ ಯಡಿಯೂರಪ್ಪ ಅವರಿಗೆ ಭದ್ರತೆ ಹೆಚ್ಚಿಸಲಾಗಿದ್ದು, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಮಾಂಡೋಗಳು ಒದಗಿಸುತ್ತಾರೆ. ಯಡಿಯೂರಪ್ಪ ಅವರ ಭದ್ರತೆಗೆ ಒಟ್ಟು 33 ಝಡ್ ಕೆಟಗರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಹೆಚ್ಚುವರಿಯಾಗಿ, 10 ಶಸ್ತ್ರಸಜ್ಜಿತ ಸ್ಟ್ಯಾಟಿಕ್ ಗಾರ್ಡಗಗಳನ್ನು ಅವರ ನಿವಾಸದಲ್ಲಿ ಇರಿಸಲಾಗಿದ್ದು ಪೂರಕವಾಗಿ 6 ವೈಯಕ್ತಿಕ ಭದ್ರತಾ ಅಧಿಕಾರಿಗಳು (PSO) ಹಗಲು ರಾತ್ರಿ ದಿನದ 24 ಗಂಟೆ ಭದ್ರತೆ ಕೊಡಲಿದ್ದಾರೆ.

ಸಂಭಾವ್ಯ ಬೆದರಿಕೆಗಳ ವಿರುದ್ಧ ನಿರಂತರ ಜಾಗ್ರತಿವಹಿಸಲು 12 ಸಶಸ್ತ್ರ ಬೆಂಗಾವಲು ಕಮಾಂಡೋಗಳನ್ನು ಮೂರು ಪಾಳಿಗಳಲ್ಲಿ ನಿಯೋಜಿಸಲಾಗುವುದು. ನಿರಂತರ ಕಣ್ಗಾವಲು ಕಾಯ್ದುಕೊಳ್ಳಲು ಇಬ್ಬರು ವೀಕ್ಷಕರನ್ನು ಶಿಫ್ಟ್ ಗಳಲ್ಲಿ ನಿಯೋಜಿಸಲಾಗುವುದು, ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತಿದೆ. ಈ ಕ್ರಮಗಳ ಜೊತೆಗೆ, ಯಡಿಯೂರಪ್ಪನವರಿಗೆ ತರಬೇತಿ ಪಡೆದ 3 ಚಾಲಕರನ್ನು ನಿಯೋಜಿಸಲಾಗಿದೆ.

ಇದೆಲ್ಲದರ ನಡುವೆ ಬಿಜೆಪಿಯ ಮೇಲೆ ಯಡಿಯೂರಪ್ಪನವರ ಕುಟುಂಬಕ್ಕೆ ಇರುವ ಹಿಡಿತವನ್ನು ಬಿಡಿಸಿಕೊಳ್ಳಲು ಬಿಜೆಪಿ ಅಥವಾ ಅದರ ಬ್ರಾಹ್ಮಣರ ಗುಂಪು ಬಹಳವಾಗಿ ಪ್ರಯತ್ನಿಸುತ್ತಿದೆ. ಸದಾನಂದ ಗೌಡ, ಈಶ್ವರಪ್ಪ ಮೊದಲಾದ ಹಿರಿಯ ಬಿಜೆಪಿ ನಾಯಕರನ್ನು ಮೂಲೆಗುಂಪು ಮಾಡುವಲ್ಲಿ ಸಫಲರಾಗಿರುವ ಅವರು ಯಡಿಯೂರಪ್ಪ ವಿಷಯದಲ್ಲಿ ಪದೇ ಪದೇ ಎಡವುತ್ತಿದ್ದಾರೆ. ಈ ಬಾರಿ ಯಡಿಯೂರಪ್ಪ ಕುಟುಂಬದ ಮೇಲೆ ಇನ್ನೊಮ್ಮೆ ಹಿಡಿತ ಬಿಗಿಮಾಡಲು ಹೈಕಮಾಂಡ್‌ ಪ್ರಯತ್ನಿಸುತ್ತಿರುವಂತಿದೆ.ಅದರ ಭಾಗವಾಗಿ ಝೆಡ್ ಪ್ಲಸ್ ಭದ್ರತೆಯಿಂದ ರಾಜಾಹುಲಿಯನ್ನು ಕಟ್ಟಿ ಹಾಕುವ ತಂತ್ರಗಾರಿಕೆ ಅಡಗಿದೆ ಎಂಬ ಸಂಶಯ ಮೂಡುತ್ತದೆ.