ಬ್ಯಾರಿ ಅಕಾಡೆಮಿ ‘ಅಧ್ಯಕ್ಷ ಗಾದಿ: ‘ಕಾಕಮಾರೋ ಕೋಲುಕಲಿ.!’

ಕರಾವಳಿ

ರಾಜ್ಯದಲ್ಲಿ ಬ್ಯಾರಿ ಭಾಷೆಯ ಅಭಿವೃದ್ಧಿ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸ್ಥಾಪನೆಯಾದ ಬ್ಯಾರಿ ಸಾಹಿತ್ಯ ಅಕಾಡೆಮಿ ಇದೀಗ ರಾಜಕೀಯ ಚದುರಂಗದಾಟಕ್ಕೆ ಸಿಲುಕಿ ತನ್ನ ಮೂಲ ಉದ್ದೇಶಕ್ಕೆ ಕೊಡಲಿಪೆಟ್ಟು ಬಿದ್ದಿದೆ ಎಂದು ಸಾರ್ವಜನಿಕವಾಗಿ ಚರ್ಚೆಗೊಳಗಾಗುತ್ತಿದೆ. ಭಾಷಾ ಸಾಹಿತ್ಯ ಅಕಾಡೆಮಿಗಳು ರಾಜಕೀಯ ರಹಿತವಾಗಿರಬೇಕು ಎನ್ನುವುದು ಹೇಳಲಷ್ಟೆ ಚೆಂದ. ಯಾವ ಸರಕಾರ ಬಂದರೂ ಆ ಪಕ್ಷದ ನಾಯಕರು ಅಧ್ಯಕ್ಷಗಾದಿಗೆ ಲಾಬಿ ನಡೆಸುವುದು ಮಾಮೂಲಿಯಾಗಿ ಬಿಟ್ಟಿದೆ. ಆದರೆ ಬ್ಯಾರಿ ಭಾಷೆ, ಸಾಹಿತ್ಯಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಕವಿಗಳು, ಸಾಹಿತಿಗಳು ಅಲ್ಲೇ ಬಾಕಿಯಾಗಿದ್ದಾರೆ. ಯಾರು ಹೆಚ್ಚು ಲಾಬಿ ನಡೆಸುತ್ತಾರೋ ಅವರಿಗೆ ಅಧ್ಯಕ್ಷ ಗಾದಿ ಫಿಕ್ಸ್ ಆಗುತ್ತದೆ.

2020 ಅಕ್ಟೋಬರ್ 10 ಕ್ಕೆ ರಾಜ್ಯದ ಬಹುತೇಕ ಅಕಾಡೆಮಿಗಳ ಅವಧಿ ಮುಕ್ತಾಯಗೊಂಡಿತ್ತು. ಬಿಜೆಪಿ ಸರ್ಕಾರ ಹೊಸ ಅಧ್ಯಕ್ಷ, ಸದಸ್ಯರನ್ನು ನೇಮಿಸದೆ ಕೇವಲ ಆಡಳಿತಾಧಿಕಾರಿಗಳನ್ನು ನೇಮಿಸಿ ಕೈ ತೊಳೆದುಕೊಂಡುಬಿಟ್ಟಿತು. ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿದ್ದ ರಹೀಂ ಉಚ್ಚಿಲ ರನ್ನು ಅವಧಿಪೂರ್ಣದ ಮೊದಲೇ ಅಧ್ಯಕ್ಷ ಗಾದಿಯಿಂದ ಕೆಳಕ್ಕಿಳಿಸಿತ್ತು. ಆ ನಂತರ ಹೊಸ ಅಧ್ಯಕ್ಷರನ್ನು ನೇಮಿಸದೆ, ಕಳೆದ ಒಂದೂವರೆ ವರ್ಷದಿಂದ ಬ್ಯಾರಿ ಅಕಾಡೆಮಿ ಕಾರ್ಯ ಚಟುವಟಿಕೆಗಳು ಸಂಪೂರ್ಣ ನಿಷ್ಕ್ರೀಯಗೊಂಡಿದೆ.

ಮೇ ಅಂತ್ಯದಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇದೀಗ ಸರ್ಕಾರಕ್ಕೆ ಐದು ತಿಂಗಳು ಕಳೆದರೂ ಇನ್ನೂ ಅಕಾಡೆಮಿಗೆ ಅಧ್ಯಕ್ಷ, ಸದಸ್ಯರ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಬಲ್ಲ ಮೂಲಗಳ ಪ್ರಕಾರ ಡಜನ್ ಗಟ್ಟಲೆ ಕಾಂಗ್ರೆಸ್ ನಾಯಕರು ಅಧ್ಯಕ್ಷ ಗಾದಿಗೆ ಕ್ಯೂನಲ್ಲಿ ನಿಂತಿದ್ದಾರಂತೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದುದೇ ತಡ ಬ್ಯಾರಿ ಅಕಾಡೆಮಿ ಅಧ್ಯಕ್ಷ ಗಾದಿಗೆ ತೀವ್ರ ಲಾಬಿ ಶುರುವಾಗಿದೆ.ಡಜನ್ ಗಟ್ಟಲೆ ನಾಯಕರು ಗೂಟದ ಕಾರಿನ ಹಿಂದೆ ಬಿದ್ದು ತಮ್ಮ ನಾಯಕರನ್ನು ಮನ ಒಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ತಮ್ಮ ತಮ್ಮ ಪರವಾದ ನಾಯಕರ ಮೂಲಕ ಬೆಂಗಳೂರು ಮಟ್ಟದಲ್ಲಿ ಲಾಬಿ ಜೋರಾಗಿ ನಡೆಯುತ್ತಿದೆ. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗಾದಿಗೆ ಉಮರ್ ಯು ಎಚ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಅದರ ಜೊತೆಗೆ ಉಳ್ಳಾಲದ ಬಿಲ್ಡರ್ ಹಾಜಿ, ಕಮ್ಮರಡಿ, ಬೈಕಂಪಾಡಿ, ಕಾಟಿಪಳ್ಳ, ಜೊತೆಗೆ ಗುರುಪುರ ಕೈಕಂಬದ ಬಳಿಯ ಡಾಕ್ಟರ್ ಹೀಗೆ ಇನ್ನು ಕೆಲವರ ಹೆಸರುಗಳು ಕೂಡ ಅಧ್ಯಕ್ಷ ಗಾದಿಗೆ ಕೇಳಿಬರುತ್ತಿದೆ.

ಸ್ಪೀಕರ್ ಯು ಟಿ ಖಾದರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮೂಲಕ ಅಧ್ಯಕ್ಷ ಗಾದಿಗೆ ಲಾಬಿ ನಡೆಸುತ್ತಿದ್ದು, ದಿನಕಳೆದಂತೆ ಲಾಬಿ ನಡೆಸುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ವಿಶೇಷ ಎಂದರೆ ಬ್ಯಾರಿ ಸಾಹಿತ್ಯ ವಲಯದಲ್ಲಿ ಕೆಲಸ ಮಾಡಿರುವವರು,ಕವಿಗಳು, ಸಾಹಿತಿಗಳು ಯಾವ ನಾಯಕರ ಬೆಂಬಲ ಸಿಗದೇ, ಲಾಬಿ ನಡೆಸುವ ಗೋಜಿಗೆ ಹೋಗದೆ ಸುಮ್ಮನಿದ್ದಾರೆ. ಇದೀಗ ಬ್ಯಾರಿ ಅಕಾಡೆಮಿ ಎಂಬುದು ಸಾಹಿತ್ಯಿಕವಾದ ಸ್ವಾಯತ್ತ ಸಂಸ್ಥೆಯಾಗಿ ಉಳಿಯದೆ ರಾಜಕೀಯ ನಾಯಕರ ಪ್ರಾತಿನಿಧ್ಯ ಕೇಂದ್ರವಾಗಿ ಬದಲಾಗಿದೆ.

ಇನ್ನು ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲಿ ಅಧ್ಯಕ್ಷತೆಗಾಗಿ ವಸೂಲಿ ಬಾಜಿ ಮಾಡಿದವರು ಕೂಡ ಇದೀಗ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ನಾಯಕರ ಹಿಂದೆ ದುಂಬಾಲು ಬೀಳುತ್ತಿದ್ದಾರೆ ಅನ್ನುವ ಮಾಹಿತಿಗಳು ಕೇಳಿ ಬರುತ್ತಿದೆ. ಇನ್ನು ನಾಯಕರ ಎದುರಲ್ಲಿ ಭೀಷ್ಮ, ಕರ್ಣ ಎಂದು ಕೊಂಡಾಡುವವರು, ನಾಯಕರು ತೆರಳಿದ ನಂತರ ಟೀಕಿಸುವ ಕೆಲವರು ಕೂಡ ಅವರ ಶಿಫಾರಸ್ಸಿನಲ್ಲಿ ಅಧ್ಯಕ್ಷ ಗಾದಿಗೆ ಪ್ರಯತ್ನಿಸುತ್ತಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಬ್ಯಾರಿ ಅಕಾಡೆಮಿ ಅಧ್ಯಕ್ಷ ಗಾದಿಗೆ ಕಾಕಮಾರೋ ಕೋಲು ಕಲಿ,ಕೋಲು ಬಿಲ್ಲಿಸ್ ಆರಂಭವಾಗಿದೆ. ಇನ್ನು ಸದಸ್ಯತನಕ್ಕಾಗಿ ಸಂಖ್ಯೆಯೂ ಹೆಚ್ಚಿದ್ದು, ಕಾಂಗ್ರೇಸ್ ಪಕ್ಷ ಹಾಗೂ ಇತರ ಪಕ್ಷದಲ್ಲಿ ಗುರುತಿಸಿಕೊಂಡವರು ಸದಸ್ಯ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರ ದುಂಬಾಲು ಬೀಳುತ್ತಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆಯಾಗಿ ಮಂಗಳೂರಿನ ಕೆಲವು ಬ್ಯಾರಿ ಕಾ..ಕಾ..ಗಳ ಅಧ್ಯಕ್ಷಗಾದಿಗಾಗಿ ಕೋಲು ಬಿಲ್ಲಿಸ್ ಜೋರಾಗಿ ನಡೆಯುತ್ತಿದೆ.