ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಪ್ತ ರವಿ ಚಕ್ಕಿತ್ತಾಯ ಕೊರಳಲ್ಲಿ ಹುಲಿ ಪೆಂಡೆಂಟ್; ಕ್ರಮಕ್ಕೆ ಹನೀಫ್ ಸಾಹೇಬ್ ಪಾಜಪಳ್ಳ ಆಗ್ರಹ

ಕರಾವಳಿ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹುಲಿ ಉಗುರು, ಲಾಕೆಟ್ ಭರ್ಜರಿ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉದ್ಯಮಿ ರವಿ ಚಕ್ಕಿತ್ತಾಯ ಹುಲಿ ಪೆಂಡೆಂಟ್ ಧರಿಸಿದ ಪೋಟೋ ವೈರಲ್ ಆಗಿದೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಪೆಂಡೆಂಟ್ ಧರಿಸಿದ ಕಾರಣಕ್ಕೆ ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಗೆ ತೆರಳಿ ವರ್ತೂರು ಪ್ರಕಾಶ್ ರನ್ನು ಬಂಧಿಸಿದ್ದರು. ಇದಾದ ನಂತರ ರಾಜ್ಯದ ಖ್ಯಾತನಾಮರು, ಚಲನಚಿತ್ರ ನಟರು, ಉದ್ಯಮಿಗಳು, ರಾಜಕೀಯ ನಾಯಕರ ಪುತ್ರರು ಹುಲಿ ಲಾಕೆಟ್ ಧರಿಸಿದ ಪೋಟೋಗಳು ದಿನನಿತ್ಯ ವೈರಲ್ ಆಗುತ್ತಿದೆ. 1972 ರ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಪ್ರಕಾರ ಇದು ಅಪರಾಧವಾಗಿರುತ್ತದೆ.

ಹುಲಿ ಪೆಂಡೆಂಟ್ ಧರಿಸಿದ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಟ್ಟಿಲ್ಲ. ನಿನ್ನೆಯಷ್ಟೇ ಸುಳ್ಯ ನಗರ ಪಂಚಾಯತ್ ಸಿಬ್ಬಂದಿಯೊಬ್ಬರು ಹುಲಿ ಪೆಂಡೆಂಟ್ ಧರಿಸಿದ ಪೋಟೋ ವೈರಲ್ ಆಗಿತ್ತು. ಇದೀಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಉದ್ಯಮಿ ರವಿ ಚಕ್ಕಿತ್ತಾಯ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಪೋಟೋ ಬಯಲಾಗಿದ್ದು, ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಹನೀಫ್ ಸಾಹೇಬ್ ಪಾಜಪಳ್ಳ ಆಗ್ರಹಿಸಿದ್ದಾರೆ.