ಕರಾವಳಿ ಕೋಮುಹಿಂಸೆಯ ಹಿಂದಿರುವ ಕಾಂಗ್ರೆಸ್ ನಾಯಕರಿವರು.!

ಕರಾವಳಿ

ಕಾಂಗ್ರೆಸ್ ನಾಯಕರ ಸೈದ್ದಾಂತಿಕ ಬದ್ಧತೆ ಕೊರತೆಯೇ ಕರಾವಳಿಯ ಈ ಸ್ಥಿತಿಗೆ ಕಾರಣ.

✍️. ಸಂಜಯ ಮಂಗಳೂರು

ಹುಲಿವೇಷ ಕುಣಿತ ಎಂಬುದು ಕರಾವಳಿಯ ಶ್ರೀಮಂತ ಸಂಸ್ಲೃತಿಗಳಲ್ಲಿ ಒಂದು. ಎಲ್ಲರನ್ನೂ ಒಟ್ಟುಗೂಡಿಸುವ ಹುಲಿಕುಣಿತವನ್ನೂ ಆರ್ ಎಸ್ ಎಸ್ ಸಾಂಸ್ಕೃತಿಕ ರಾಜಕಾರಣಕ್ಕೆ ಬಳಸಿಕೊಂಡಿದೆ. ಹಿಂದೂ ಸಂಘಟನೆಗಳ ಹಫ್ತಾ ವಸೂಲಿಗೂ ಪಿಲಿ ಟೀಮ್ ಬಳಕೆಯಾಗುತ್ತದೆ. ಕೋಮುವಾದಿ ತಂಡಗಳು ಮನೆಮನೆ ತಲುಪಲು ಹುಲಿಕುಣಿತವನ್ನೂ ಸಂಘಪರಿವಾರ ವಾಹಕವನ್ನಾಗಿಸಿಕೊಂಡಿದೆ. ‘ಪಿಲಿ’ ತಂಡದ ಮೂಲಕವೇ ನಾಯಕರಾದವರು ಕರಾವಳಿಯ ಸಾಮಾಜಿಕ, ರಾಜಕೀಯ ಅಜೆಂಡಾವನ್ನು ನಿರ್ಧರಿಸುತ್ತಿದ್ದಾರೆ.

ಯಾವ ಸರ್ಕಾರ ಬಂದರೂ ಬದಲಾಗದ ಕರಾವಳಿಯ ಪರಿಸ್ಥಿತಿಗೆ ಕಾರಣರು ಯಾರು ? ಕರಾವಳಿಯಲ್ಲಿ ಕಾಂಗ್ರೆಸ್ ಶಾಸಕರಿದ್ದರೂ, ಶಾಸಕರು ಇಲ್ಲದೇ ಇದ್ದರೂ, ಕಾಂಗ್ರೆಸ್ ಸರ್ಕಾರ ಇದ್ದರೂ, ಇಲ್ಲದಿದ್ದರೂ ಮುಗಿಯದ ‘ಕೋಮುಹಿಂಸೆ’ಯ ಹಿಂದಿರುವವರು ಯಾರು ? ಕಾಂಗ್ರೆಸ್ ನಾಯಕರ ಸೈದ್ದಾಂತಿಕ ಬದ್ಧತೆ ಕೊರತೆಯೇ ಕರಾವಳಿಯ ಈ ಸ್ಥಿತಿಗೆ ಕಾರಣ. ಕೋಮುವಾದದ ಆಳ ಅಗಲಗಳನ್ನು ಅರಿಯಲಾಗದ, ಬಿಜೆಪಿಯನ್ನು ಸೋಲಿಸುವುದೇ ಕೋಮುವಾದಕ್ಕೆ ಪರಿಹಾರ ಎಂದು ಭಾವಿಸಿರುವ ಕಾಂಗ್ರೆಸ್ ನಾಯಕರೇ ಕರಾವಳಿ ಕೋಮುವಾದದ ಮೂಲಸಮಸ್ಯೆ. ಆರ್ ಎಸ್ ಎಸ್ ಹಿಡನ್ ಅಜೆಂಡಾ ಹೊಂದಿರುವ ಸಂಘಟನೆಗಳು, ವ್ಯಕ್ತಿಗಳನ್ನು ಪೋಷಿಸುವ ಕರಾವಳಿ ಕಾಂಗ್ರೆಸ್ ನಾಯಕರು ತಮ್ಮ ಸರ್ಕಾರದ ಅವಧಿಯಲ್ಲೆ ಹಿಂದುತ್ವವನ್ನು ಸದೃಢವಾಗಿ ಬೆಳೆಸುತ್ತಾರೆ.

ಜನರ ಸಮಸ್ಯೆಗಳು, ದೌರ್ಜನ್ಯಗಳ ವಿರುದ್ದ ನಿಂತು ರಾಜಕೀಯ ಮಾಡಬೇಕಾದ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ನಾಗಮಂಡಲ, ಬ್ರಹ್ಮಕಲಶೋತ್ಸವ ಸಮಿತಿಗಳ ಅಧ್ಯಕ್ಷತೆ ವಹಿಸುವುದನ್ನೇ ಮಹಾನ್ ಸಾಧನೆ ಎಂದುಕೊಂಡಿದ್ದಾರೆ. ಕಾಂಗ್ರೆಸ್ ಶಾಸಕ, ಮಾಜಿ ಶಾಸಕರೇ ಮುಂದಾಳತ್ವ ವಹಿಸಿಕೊಂಡು, ಹಣಕಾಸಿನ ವ್ಯವಸ್ಥೆಯನ್ನೂ ಮಾಡಿಸಿಕೊಟ್ಟು ನಡೆಸಿದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದಿಕ್ಸೂಚಿ ಭಾಷಣ ಕೋಮುವಾದಿ ಚಿಂತಕನದ್ದಾಗಿರುತ್ತದೆ. ಈ ರೀತಿ ಕಾಂಗ್ರೆಸ್ ಶಾಸಕ, ಮಾಜಿ ಶಾಸಕನ ಅಧ್ಯಕ್ಷತೆಯ ಧಾರ್ಮಿಕ ಕಾರ್ಯಕ್ರಮಗಳ ಉಸ್ತುವಾರಿಯೆಲ್ಲವೂ ಕೇಸರಿಧಾರಿ ಸಂಘಟನೆಗಳದ್ದಾಗಿರುತ್ತದೆ. ಹಣಕಾಸಿನ ವ್ಯವಸ್ಥೆ ಮಾಡಿ, ಅಧ್ಯಕ್ಷತೆ ವಹಿಸಿಕೊಂಡ ಮೇಲೆ ಇಡೀ ಕಾರ್ಯಕ್ರಮದಲ್ಲಿ ಕೋಮುವಾದಿಗಳು ನುಸುಳದಂತೆ ಎಚ್ಚರಿಕೆ ವಹಿಸಬೇಕು ಎಂಬ ಕನಿಷ್ಠ ಕಾಳಜಿಯೂ ಕಾಂಗ್ರೆಸ್ ಶಾಸಕ, ಮಾಜಿ ಶಾಸಕರಿಗೆ ಇರುವುದಿಲ್ಲ.‌ ಹಾಗಾಗಿ ಕರಾವಳಿಯಲ್ಲಿ ನಡೆಯುವ ಹೆಚ್ಚಿನ ನಾಗಮಂಡಲ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷತೆ ಕಾಂಗ್ರೆಸ್ ನಾಯಕರದ್ದು : ಆ ಮೂಲಕ ಸಂಘಟನೆ ಬಲಗೊಳ್ಳುವುದು ಭಜರಂಗದಳ, ವಿಹಿಂಪ !

ಹುಲಿವೇಷ ಕುಣಿತ ಎಂಬುದು ಕರಾವಳಿಯ ಶ್ರೀಮಂತ ಸಂಸ್ಲೃತಿಗಳಲ್ಲಿ ಒಂದು. ಎಲ್ಲರನ್ನೂ ಒಟ್ಟುಗೂಡಿಸುವ ಹುಲಿಕುಣಿತವನ್ನೂ ಆರ್ ಎಸ್ ಎಸ್ ಸಾಂಸ್ಕೃತಿಕ ರಾಜಕಾರಣಕ್ಕೆ ಬಳಸಿಕೊಂಡಿದೆ. ಹಿಂದೂ ಸಂಘಟನೆಗಳ ಹಫ್ತಾ ವಸೂಲಿಗೂ ಪಿಲಿ ಟೀಮ್ ಬಳಕೆಯಾಗುತ್ತದೆ. ಕೋಮುವಾದಿ ತಂಡಗಳು ಮನೆಮನೆ ತಲುಪಲು ಹುಲಿಕುಣಿತವನ್ನೂ ಸಂಘಪರಿವಾರ ವಾಹಕವನ್ನಾಗಿಸಿಕೊಂಡಿದೆ. ‘ಪಿಲಿ’ ತಂಡದ ಮೂಲಕವೇ ನಾಯಕರಾದವರು ಕರಾವಳಿಯ ಸಾಮಾಜಿಕ, ರಾಜಕೀಯ ಅಜೆಂಡಾವನ್ನು ನಿರ್ಧರಿಸುತ್ತಿದ್ದಾರೆ.

ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ ಇವರ ಹುಲಿ ವೇಷದ ಊದು ಪೂಜೆ ಕಾರ್ಯಕ್ರಮಕ್ಕೆ ಯು ಟಿ ಖಾದರ್, ರಮಾನಾಥ ರೈ, ಇನಾಯತ್ ಅಲಿಯವರು ಸ್ಪರ್ಧೆಗೆ ಬಿದ್ದವರಂತೆ ಧಾವಿಸಿದ್ದಾರೆ. ಬಿರುವೆರು ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿಯವರು ಆರ್ ಎಸ್ ಎಸ್ ಅಜೆಂಡಾವನ್ನು ಬಿಲ್ಲವ ಸಮುದಾಯದ ಮೂಲಕ ಜಾರಿ ಮಾಡುವ ಕೆಲಸವನ್ನು ನಾಜೂಕಾಗಿ ಮಾಡುತ್ತಿದ್ದಾರೆ.

ಕರಾವಳಿಯ ಐತಿಹಾಸಿಕ ಹೆಸರುಗಳನ್ನು ಬದಲಾವಣೆ ಮಾಡುವ ಆರ್ ಎಸ್ ಎಸ್ ಹುನ್ನಾರಕ್ಕೆ ಜಾತಿ ಮತ್ತು ನಾರಾಯಣ ಗುರುಗಳನ್ನು ಬಳಸಿದ್ದು ಇದೇ ಉದಯ ಪೂಜಾರಿ. ಲೇಡಿಹಿಲ್ ವೃತ್ತವನ್ನು ನಾರಾಯಣ ಗುರು ವೃತ್ತ ಮಾಡಬೇಕು ಎಂಬ ಉದಯಪೂಜಾರಿ ಆಗ್ರಹದ ಹಿಂದೆ ಕ್ರಿಶ್ಚಿಯನ್ ದ್ವೇಷ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಾರಾಯಣ ಗುರುಗಳ ತತ್ವಾದರ್ಶಗಳಿಗೆ ವಿರುದ್ದವಿರುವ ಸಂಘಟನೆ ಮತ್ತು ಬಿಜೆಪಿ ನಾರಾಯಣ ಗುರುಗಳ ಹೆಸರಿನಲ್ಲಿ ವೃತ್ತ ಘೋಷಿಸಿ ಲೇಡಿಹಿಲ್ ಎಂಬ ಹೆಸರನ್ನು ಅಳಿಸುವ ದ್ವೇಷದ ರಾಜಕಾರಣ ಮಾಡಿತ್ತು. ಈ ಕಾರಣಕ್ಕಾಗಿಯೇ 2021 ಫೆಬ್ರವರಿ 02 ರಂದು ಲೇಡಿಹಿಲ್ ವೃತ್ತದ ಹೆಸರನ್ನು ತೆಗೆದು ಹಾಕಿ ಅಲ್ಲಿಗೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ಮರುನಾಮಕರಣ ಮಾಡುವ ಹೋರಾಟ ನಡೆಸಿದ ಬಿರುವೆರ್ ಕುಡ್ಲ ಫ್ರೆಂಡ್ಸ್ ಬಲ್ಲಾಳ್ ಬಾಗ್ (ರಿ) ಇದರ ಅಧ್ಯಕ್ಷರಾದ ಉದಯ ಪೂಜಾರಿ ಅವರಿಗೆ ಅಖಿಲ ಭಾರತ ಹಿಂದೂ ಮಹಾ ಸಭಾ ದ.ಕ ಜಿಲ್ಲಾ ಘಟಕದ ವತಿಯಿಂದ ಅಭಿನಂದಿಸಲಾಯಿತು ! ಗೋಡ್ಸೆ ಅಭಿಮಾನಿಗಳು ಗಾಂಧಿಗೆ ಪ್ರೇರಣೆ ನೀಡಿದ್ದ ನಾರಾಯಣ ಗುರುಗಳ ಹೆಸರಿನಲ್ಲಿ ನಡೆಸುವ ರಾಜಕಾರಣವಿದು !

ಬಿಲ್ಲವರು ಕೋಮು ರಾಜಕಾರಣಕ್ಕೆ ಬಲಿಯಾಗಬೇಡಿ ಎಂದು ಹೇಳಬೇಕಿದ್ದ ಬಿರುವೆರು ಕುಡ್ಲದ ಅಧ್ಯಕ್ಷ ಉದಯಪೂಜಾರಿ ಜುಲೈ 28, 2022 ರಂದು ಕೊಲೆಯಾದ ನೆಟ್ಟಾರು ಪ್ರವೀಣ್ ಕುಮಾರ್ ಮನೆಗೆ ಭೇಟಿ ನೀಡುತ್ತಾರೆ. ಅದಕ್ಕೂ ಮೊದಲು ಕೊಲೆಯಾದ ಅಮಾಯಕ ಮುಸ್ಲೀಮರ ಮನೆಗಾಗಲೀ, ಅದರ ನಂತರ ಕೊಲೆಯಾದ ಅಮಾಯಕ ಮುಸ್ಲೀಮರ ಮನೆಗಾಗಲೀ ಉದಯ ಪೂಜಾರಿ ಭೇಟಿ ನೀಡುವುದಿಲ್ಲ ! ಪ್ರವೀಣ್ ನೆಟ್ಟಾರ್ ಸಾವು ಬಿಲ್ಲವ ಸಮುದಾಯವನ್ನು ಎಚ್ಚರಿಸಬೇಕೇ ಹೊರತು ಉದ್ರೇಕಿಸಬಾರದು. ಆದರೆ ಉದಯ ಪೂಜಾರಿಯವರು ಆರ್ ಎಸ್ ಎಸ್ ಅಜೆಂಡಾ ಜಾರಿಗಾಗಿ ತನ್ನ ಸಮುದಾಯವನ್ನು ಬಲಿ ಕೊಡುತ್ತಾರೆ.

ಬಿರುವೆರು ಕುಡ್ಲ ಎಂಬುದು ಬಿಲ್ಲವರ ಸಂಘಟನೆ. ಹಾಗಾಗಿ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ವೃತ್ತ, ಪ್ರವೀಣ್ ನೆಟ್ಟಾರ್ ಎಂಬ ಬಿಲ್ಲವನ ಪರವಾದ ಹೋರಾಟ ಮಾಡಬೇಕಾಯಿತು ಎಂದು ಉದಯ ಪೂಜಾರಿ ಸಮರ್ಥನೆ ಕೊಡಬಹುದು. ಮೇ 06, 2023 ರಂದು ಬಿರುವೆರು ಕುಡ್ಲ ಅಧ್ಯಕ್ಷ ಉದಯ ಪೂಜಾರಿ ಬೆಳ್ತಂಗಡಿಯ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಪರವಾಗಿ ಮತ ಯಾಚನೆ ನಡೆಸುತ್ತಾರೆ. ಇಡೀ ಕರಾವಳಿಯಲ್ಲಿ ಅತ್ಯಂತ ದೊಡ್ಡ ಸಮುದಾಯವಾಗಿರುವ ಬಿಲ್ಲವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ ಎಂಬ ನೋವು ಇರುವ ದಿನಗಳಿವು. ಇಂತಹ ದಿನಗಳಲ್ಲಿ ಅತ್ಯಂತ ಹೆಚ್ಚು ಬಿಲ್ಲವ ಮತದಾರರನ್ನು ಹೊಂದಿರುವ ಬೆಳ್ತಂಗಡಿಯಲ್ಲಿ ಬಿಲ್ಲವ ಸಮುದಾಯಕ್ಕೆ ಸೇರಿದ ಬಿ ಕೆ ರಕ್ಷಿತ್ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರೆ. ಬಿಲ್ಲವರ ನಾಯಕರಾಗಿ ಗುರುತಿಸಿಕೊಂಡು ಎಐಸಿಸಿ ಮಟ್ಟದ ರಾಜಕಾರಣಿಯಾಗಿರುವ ಬಿ ಕೆ ಹರಿಪ್ರಸಾದ್ ಅವರ ಅಣ್ಣನ ಮಗ ರಕ್ಷಿತ್ ಗೆಲುವು ಬಿಲ್ಲವ ಸಮುದಾಯಕ್ಕೆ ಅತೀ ಮುಖ್ಯವಾಗಿತ್ತು. ಆದರೆ ಬಿರುವೆರು ಕುಡ್ಲದ ಅಧ್ಯಕ್ಷ ಉದಯ ಪೂಜಾರಿಯವರು ಬಂಟ ಸಮುದಾಯದ ಹರೀಶ್ ಪೂಂಜಾ ಪರವಾಗಿ ಮತ ಯಾಚನೆ ಮಾಡಿ ಗೆಲ್ಲಿಸಿ ಸಂಭ್ರಮಪಡುತ್ತಾರೆ‌.

ಈ ರೀತಿ ಆರ್ ಎಸ್ ಎಸ್ ಅಜೆಂಡಾವನ್ನು ಜಾರಿ ಮಾಡುವ ಬಿರುವೆರು ಕುಡ್ಲದ ಅಧ್ಯಕ್ಷ ಉದಯ ಪೂಜಾರಿಯ ಕಾರ್ಯಕ್ರಮದಲ್ಲಿ ಯು ಟಿ ಖಾದರ್, ರಮಾನಾಥ ರೈ, ಇನಾಯತ್ ಅಲಿಯವರು ಭಾಗವಹಿಸುತ್ತಾರೆ. ನಂತರ ನಾನು ಬಿರುವೆರು ಕುಡ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಎಂದು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಾರೆ. ಇದು ಒಬ್ಬ ಕೋಮುವಾದಿ ನಾಯಕನಿಗೆ ಸಾಮಾಜಿಕ ವಿಶ್ವಾಸಾರ್ಹತೆಯನ್ನು ನೀಡಿದಂತಾಗುತ್ತದೆ. ಇದೇ ವರ್ಚಸ್ಸು ಆತನ ಕೋಮುರಾಜಕಾರಣದ ಹೋರಾಟಕ್ಕೆ ಬಳಕೆಯಾಗುತ್ತದೆ.

ಬಿಜೆಪಿ ವಿರುದ್ದ ಚುನಾವಣೆ ಗೆಲ್ಲುವುದರಿಂದ ಬಲಪಂಥೀಯ ಸಿದ್ದಾಂತ, ಕೋಮುವಾದವನ್ನು ಮಣಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ಸಾಭೀತಾಗಿದೆ. ಕೋಮುವಾದದ ಬೇರುಗಳನ್ನು ಕಿತ್ತೆಸೆಯಬೇಕಾದರೆ ನಾವು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅದಕ್ಕೆ ನೀರೆರೆಯಬಾರದು ಎಂಬ ಪ್ರಜ್ಞೆ ನಮಗಿರಬೇಕು. ಅಂತಹ ಅರಿವು ಕರಾವಳಿಯ ಕಾಂಗ್ರೆಸ್ ಅಧಿಕಾರಸ್ಥರಿಗೆ ಇಲ್ಲದಿರುವುದು ದುರಂತ !