ಸರಕಾರಿ ನೌಕರರು ‘ಬಹುಪತ್ನಿತ್ವ’ ಹೊಂದಿದರೆ ದಂಡ, ಕಡ್ಡಾಯ ನಿವೃತ್ತಿ ಶಿಕ್ಷೆ: ಅಸ್ಸಾಂನಲ್ಲಿ ಕಾನೂನು ಜಾರಿ

ರಾಷ್ಟ್ರೀಯ

ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದೆ. ಇಲ್ಲಿನ ರಾಜ್ಯ ಸರಕಾರ ಮಹತ್ವದ ಕಾನೂನೊಂದನ್ನು ಜಾರಿಗೆ ತಂದಿದ್ದು, ಧರ್ಮ ಅವಕಾಶ ನೀಡಿದರೂ, ರಾಜ್ಯದಲ್ಲಿ ಯಾವುದೇ ಸರ್ಕಾರಿ ನೌಕರ ಬಹುಪತ್ನಿತ್ವ ಹೊಂದಲು ಅವಕಾಶ ಇಲ್ಲ. ಒಂದು ವೇಳೆ ಕಾನೂನು ಮೀರಿದರೆ ದಂಡ ಹಾಗೂ ಸರಕಾರಿ ನೌಕರಿಯಿಂದಲೇ ವಜಾ ಮಾಡುವ ಕಾನೂನನ್ನು ಜಾರಿಗೆ ತಂದಿದೆ. ಈ ಸಂಬಂಧ ಶುಕ್ರವಾರ ಅಸ್ಸಾಂ ಸರಕಾರಿ ಸೇವಾ ನಿಯಮ 26ರ ಅಡಿ ಆದೇಶ ಹೊರಡಿಸಿರುವ ರಾಜ್ಯ ಸರಕಾರವು ಯಾವುದೇ ಧರ್ಮ, ಮತ ಪಂಥಗಳ ಉಲ್ಲೇಖ ಮಾಡದೆ ಎಲ್ಲ ಸರಕಾರಿ ನೌಕರರಿಗೆ ಕಾನೂನು ಅನ್ವಯವಾಗಲಿದೆ ಎಂದು ತಿಳಿಸಿದೆ.

ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ಬಹುಪತ್ನಿತ್ವ ನಿರ್ಮೂಲನಕ್ಕೆ ಇದೊಂದು ದಿಟ್ಟ ಹೆಜ್ಜೆ ಎಂದು ಹೇಳಿಕೊಂಡಿದ್ದಾರೆ. ರಾಜ್ಯದ ನಾಲ್ಕು ಲಕ್ಷಕ್ಕೂ ಅಧಿಕ ನೌಕರರಿಗೆ ನಿಯಮದ ಕುರಿತು ಸಿಎಂ ನೆನಪಿಸಿದ್ದಾರೆ. ರಾಜ್ಯದಲ್ಲಿ ಬಹುಪತ್ನಿತ್ವ ನಿಷೇಧಿಸಲು ಕಾನೂನು ರೂಪಿಸಿರುವ ಅಸ್ಸಾಂ ಸರಕಾರ, ಪೂರ್ವಭಾವಿಯಾಗಿ ನೌಕರರ ಎರಡನೇ ಮದುವೆಗೆ ಬ್ರೇಕ್‌ ಹಾಕಲು ಮುಂದಾಗಿದೆ. ಮೊದಲನೇ ಹೆಂಡತಿ ಜೀವಂತ ಇರುವಾಗಲೇ ಮತ್ತೊಂದು ಮದುವೆಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಶರ್ಮಾ, ”ಇಬ್ಬರನ್ನು ಮದುವೆಯಾಗುವ ವ್ಯಕ್ತಿಗಳು, ನಿವೃತ್ತಿಯ ಬಳಿಕ ಪಿಂಚಣಿ ವಿಚಾರಕ್ಕೆ ಇಬ್ಬರು ಹೆಂಡತಿಯರು ಕಿತ್ತಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಸರಕಾರಿ ನೌಕರರ 2ನೇ ಮದುವೆ ನಿಯಂತ್ರಿಸಲಾಗುವುದು. ಒಂದು ವೇಳೆ ಮದುವೆ ಆಗುವುದಿದ್ದರೆ ಸರಕಾರದ ಅನುಮತಿ ಪಡೆದುಕೊಂಡ ಬಳಿಕವೇ ವಿವಾಹ ಆಗಬೇಕು,” ಎಂದು ಸುದ್ದಿಗಾರರಿಗೆ ವಿವರಣೆ ನೀಡಿದರು.

ಪುರುಷರಂತೆ ಮಹಿಳಾ ನೌಕರರಿಗೆ ಕಾನೂನು ಅನ್ವಯಿಸಲಿದೆ. ಸರಕಾರದ ಆದೇಶ ಉಲ್ಲಂಘಿಸಿದರೆ ನಿಯಮದಂತೆ ದಂಡ ವಿಧಿಸಲಾಗುವುದು. ಗರಿಷ್ಠ ಶಿಕ್ಷೆಯಾಗಿ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸುವ ಶಿಕ್ಷೆ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.