ವಂಚನೆಯ ಹೊಸ ಟ್ರೆಂಡ್: ಸಿಮ್ ಅದಲು ಬದಲು ದಂಧೆ.. ಎಚ್ಚರ ತಪ್ಪಿದರೆ ನಿಮ್ಮ ಖಾತೆಯ ಹಣ ಮಾಯ.!

ರಾಷ್ಟ್ರೀಯ

ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ರೀತಿಯ ವಂಚನೆ ಪ್ರಕರಣಗಳೂ ಹುಟ್ಟಿಕೊಳ್ಳುತ್ತಿವೆ. ಸೈಬರ್ ಕ್ರೈಂ ಬಲಿಪಶು ಆಗಬಾರದು ಎಂದರೆ ಯಾವುದೇ ಕಾರಣಕ್ಕೂ ಯಾರಿಗೂ ಒಟಿಪಿ ಕೊಡಬೇಡಿ ಅಂತಾರೆ ಪೊಲೀಸರು. ಆದರೆ, ನಿಮ್ಮ ಬಳಿ ಒಟಿಪಿ ಪಡೆಯದೇ ನಿಮ್ಮ ಖಾತೆಯಲ್ಲಿ ಇರುವ ಹಣ ವಂಚಕರ ಪಾಲಾಗಿಬಿಟ್ರೆ? ಈ ಪ್ರಶ್ನೆಯೇ ಆತಂಕಕಾರಿ! ಆದರೆ, ಈ ರೀತಿಯ ಕೃತ್ಯಗಳು ನಡೆದಿವೆ. ಇದಕ್ಕೆ ಸಿಮ್ ಸ್ವ್ಯಾಪಿಂಗ್ ವಂಚನೆ ಅಂತಾರೆ! ನಿಮ್ಮ ಮೊಬೈಲ್ ನಂಬರ್‌ ವಂಚಕರ ಪಾಲಾಗುವ ಕುತಂತ್ರ ಇದು!

ಇತ್ತೀಚೆಗೆ ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಸಿಮ್ ಅದಲು – ಬದಲು ವಂಚನೆ ಪ್ರಕರಣವೊಂದು ಬಯಲಾಗಿತ್ತು. ಮಹಿಳಾ ವಕೀಲರೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ 50 ಲಕ್ಷ ರೂ. ಹಣ ವಂಚಕರ ಪಾಲಾಗಿತ್ತು. ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಪೊಲೀಸರು ಹಾಗೂ ಸೈಬರ್ ತಜ್ಞರು ಎಚ್ಚರ ವಹಿಸಿದ್ದಾರೆ. ದಿಲ್ಲಿ ಪೊಲೀಸರ ತನಿಖೆ ಪ್ರಕಾರ ಸಂತ್ರಸ್ತ ಮಹಿಳೆ ವಂಚರಿಗೆ ಒಟಿಪಿ ಸೇರಿದಂತೆ ಯಾವುದೇ ಮಾಹಿತಿಯನ್ನೂ ಕೊಟ್ಟಿರಲಿಲ್ಲ. ಆದರೂ ಅವರ ಖಾತೆಯಲ್ಲಿದ್ದ ಹಣ ವಂಚಕರ ಪಾಲಾಗಿತ್ತು!

ಪೊಲೀಸರ ತನಿಖೆ ವೇಳೆ ಅಚ್ಚರಿಯ ಮಾಹಿತಿ ಬಯಲಾಗಿತ್ತು. 35 ವರ್ಷ ವಯಸ್ಸಿನ ಈ ಮಹಿಳೆಗೆ ಯಾವುದೋ ಒಂದು ಅಪರಿಚಿತ ನಂಬರ್‌ನಿಂದ ಮೂರು ಬಾರಿ ಮಿಸ್ ಕಾಲ್ ಬಂದಿತ್ತು. ಆಗ ಮಹಿಳೆ ತಮ್ಮ ಬಳಿ ಇದ್ದ ಬೇರೊಂದು ನಂಬರ್‌ನಿಂದ ಈ ನಂಬರ್‌ಗೆ ಕರೆ ಮಾಡಿದರು. ಆಗ ಆ ವಂಚಕ ತನ್ನನ್ನು ತಾನು ಕೊರಿಯರ್ ಬಾಯ್ ಎಂದು ಪರಿಚಯಿಸಿಕೊಂಡ. ಮಹಿಳೆ ಹೆಸರಿನಲ್ಲಿ ಕೊರಿಯರ್ ಬಂದಿದೆ ಎಂದು ಮಾಹಿತಿ ನೀಡಿದ ಆತ, ಮನೆಯ ವಿಳಾಸ ಹಾಗೂ ಇನ್ನಿತರ ಮಾಹಿತಿ ಪಡೆದುಕೊಂಡ. ಇದಾದ ಬಳಿಕ ಮಹಿಳೆಯ ಬ್ಯಾಂಕ್ ಖಾತೆಯಲ್ಲಿ ಎರಡು ಬಾರಿ ವಹಿವಾಟು ನಡೆ ಸಂದೇಶ ಬಂತು. ಆಕೆಯ ಖಾತೆಯಲ್ಲಿದ್ದ 50 ಲಕ್ಷ ರೂ. ಹಣ ವಂಚಕರ ಪಾಲಾಗಿತ್ತು. ವಂಚಕರು ಸಿಮ್ ಅದಲು – ಬದಲು ಮಾಡಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚಕರು ನಿಮ್ಮ ಸಿಮ್‌ ಕಾರ್ಡ್‌ ಅನ್ನೇ ಬದಲಿಸಲು ಯತ್ನಿಸುತ್ತಾರೆ. ಮೊಬೈಲ್ ನೆಟ್‌ವರ್ಕ್‌ ನೀಡುವ ಸಂಸ್ಥೆಯ ಬಳಿ ನಿಮ್ಮ ಸಿಮ್‌ ಕಾರ್ಡ್‌ ಹಾಗೂ ಅದಕ್ಕೆ ಜೋಡಣೆ ಆಗಿರುವ ಮೊಬೈಲ್ ನಂಬರ್‌ನ ಮಾಹಿತಿ ಇರುತ್ತದೆ. ವಂಚಕರು ತಮ್ಮ ಬಳಿ ಇರುವ ಬೇರೊಂದು ಸಿಮ್‌ ಕಾರ್ಡ್‌ಗೆ ನಿಮ್ಮ ನಂಬರ್ ಸೇರಿಸಲು ಯತ್ನಿಸುತ್ತಾರೆ. ಆಗ ನಿಮಗೆ ಬರುವ ಮೆಸೇಜ್‌ ಹಾಗೂ ಕರೆಗಳು ವಂಚಕರಿಗೆ ಬರಲು ಆರಂಭವಾಗುತ್ತದೆ. ನಿಮ್ಮ ನಂಬರ್ ಅನ್ನು ವಂಚಕರು ಹೈಜಾಕ್ ಮಾಡಿಬಿಡುತ್ತಾರೆ!

ಇದೊಂದು ಹೊಸ ರೀತಿಯ ವಂಚನೆಯ ಟ್ರೆಂಡ್ ಆಗಿದ್ದು, ನಿಮ್ಮ ಸಿಮ್ ಕಾರ್ಡ್‌ ‘ಲಾಕ್’ ಆಗಿದೆ ಎಂಬ ಸಂದೇಶ ಬಂದರೆ, ‘ಎರರ್‌’ ಎಂಬ ಮೆಸೇಜ್ ಬಂದರೆ, ‘ನೋ ವ್ಯಾಲಿಡ್’ ಎಂಬ ಸಂದೇಶ ಬಂದರೆ ಕೂಡಲೇ ನಿಮ್ಮ ಮೊಬೈಲ್ ನೆಟ್‌ವರ್ಕ್‌ ಸಂಸ್ಥೆಯನ್ನು ಸಂಪರ್ಕಿಸಿ ನಿಮ್ಮ ನಂಬರ್ ಬ್ಲಾಕ್ ಮಾಡಿಸಿ. ಇಲ್ಲವಾದರೆ ನಿಮ್ಮ ಖಾತೆಯಲ್ಲಿರುವ ದುಡ್ಡು ಮಾಯವಾಗಬಹುದು.