ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದವರು ಪ್ರಾರ್ಥನಾ ಸಭೆ ನಡೆಸುತ್ತಿದ್ದಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಇಬ್ಬರು ಮಹಿಳೆಯರು ಸಾವಿಗಿಡಾಗಿದ್ದು, ಐವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇತ್ತೀಚೆಗೆ ಕೇರಳದಲ್ಲಿ ಪ್ಯಾಲೆಸ್ಟೀನ್ ಪರವಾದ ರ್‍ಯಾಲಿಯೊಂದು ಇದೇ 28ರಂದು ನಡೆದಿತ್ತು. ಈ ವೇಳೆ ಹಮಾಸ್‌ನ ನಾಯಕ ಖಾಲಿದ್ ಮಶಾಲ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ್ದರು. ಖಾಲಿದ್ ಭಾಷಣವನ್ನು ಉಲ್ಲೇಖಿಸಿ, ‘ಜಿಹಾದಿಗಳು ಭಾರತದ ಬೀದಿಗಿಳಿಯಲು ಸಿದ್ಧರಾಗಬೇಕು ಎಂದು ಖಾಲಿದ್ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಆದ್ದರಿಂದಲೇ ಈ ಸ್ಫೋಟ ನಡೆದಿದೆ’ ಎನ್ನುವಂಥ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ ಎಂದು ದಿ ಕ್ವಿಂಟ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಸ್ಪೋಟದ ಹೊಣೆಯನ್ನು ಡಾಮಿನಿಕ್ ಮಾರ್ಟಿನ್ ಹೊತ್ತುಕೊಂಡಿದ್ದಾರೆ. ‘ಯೆಹೋವನ ಸಾಕ್ಷಿಗಳು ಪಂಥದ ಬೋಧನೆಗಳು ಪ್ರಚೋದನಕಾರಿಯಾಗಿವೆ. ಆದ್ದರಿಂದ ಸ್ಫೋಟ ಮಾಡಿದ್ದೇನೆ’ ಎಂದು ಡಾಮಿನಿಕ್ ಅವರು ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ, 2021ರ ಪ್ಯು ರೀಸರ್ಚ್ ಸೆಂಟರ್‌ನ ಪ್ರಕಾರ ಭಾರತದಲ್ಲಿ 3 ಸಾವಿರದಿಂದ 4 ಸಾವಿರ ಯಹೂದಿಗಳು ಇದ್ದಾರೆ. ಕೇರಳದಲ್ಲಿ 15-20 ಜನರ ಯಹೂದಿಗಳು ಇದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ.
ಆದರೆ ಕಲಮಶೇರಿಯಲ್ಲಿ ಒಬ್ಬನೇ ಒಬ್ಬ ಯಹೂದಿಯೂ ವಾಸವಿಲ್ಲ. ಎರ್ನಾಕುಲಂ ನಗರ ಹಾಗೂ ಕೊಚ್ಚಿಯಲ್ಲಿ ಮಾತ್ರವೇ ಯಹೂದಿಗಳು ವಾಸವಿದ್ದಾರೆ ಎಂದು ಎರ್ನಾಕುಲಂನಲ್ಲಿರುವ ಯಹೂದಿ ಸಮುದಾಯದ ಮಂಜೂಷಾ ಇಮ್ಯಾನುಯಲ್ ಅವರು ಹೇಳಿದ್ದಾರೆ. ಆದ್ದರಿಂದ, ಈ ಸ್ಫೋಟವು ಯಹೂದಿಗಳನ್ನು ಗುರಿಯಾಗಿಸಿ ನಡೆದಿಲ್ಲ ಎಂದು ದಿ ಕ್ಚಿಂಟ್ ಹೇಳಿದೆ.