ರಾಜ್ಯದಲ್ಲಿ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಸೈಬರ್ ಕ್ರೈಂ, ಅಪಹರಣ, ಪೋಕ್ಸೋ, ಸುಲಿಗೆ, ಕೊಲೆ, ಅತ್ಯಾಚಾರ, ಹಲ್ಲೆ, ಬೆದರಿಕೆ ಸಹಿತ ಇತ್ತೀಚೆಗಿನ ಪ್ರತಿ ಅಪರಾಧಗಳೂ ಮೊಬೈಲ್ ಸಾಕ್ಷ್ಯದ ಆಧಾರದಲ್ಲಿ ಮುಂದಿನ ಆಯಾಮ ಪಡೆದುಕೊಳ್ಳುತ್ತದೆ. ಆದರೆ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ಎಸ್‌ಎಲ್)ಕ್ಕೆ ಮೊಬೈಲ್ ಸಾಕ್ಷ್ಯ ಪತ್ತೆ ಹಚ್ಚಿ ವರದಿ ನೀಡುವುದೇ ದೊಡ್ಡ ಸವಾಲಾಗಿಬಿಟ್ಟಿದೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಶೇ.90ರಷ್ಟು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಮೊಬೈಲ್ ಸಂದೇಶಗಳು, ಕರೆಗಳು, ಲೊಕೇಶನ್‌ಗಳೇ ಪ್ರಮುಖ ಸಾಕ್ಷ್ಯವಾಗಿದೆ. ಮೊಬೈಲ್ ಸಾಕ್ಷ್ಯಗಳಿಂದಲೇ ತನಿಖಾಧಿಕಾರಿಗಳು ಮುಂದಿನ ತನಿಖಾ ಮಾರ್ಗ ಕಂಡುಕೊಳ್ಳುತ್ತಾರೆ. ಚಾರ್ಜ್‌ಶೀಟ್‌ನಲ್ಲೂ ಮೊಬೈಲ್ ಸಾಕ್ಷ್ಯಗಳನ್ನೇ ಉಲ್ಲೇಖೀಸಲಾಗುತ್ತಿದೆ. ಆದರೆ, ತನಿಖಾಧಿಕಾರಿಗಳು ಕಳುಹಿಸುವ ಆರೋಪಿಗಳ ಮೊಬೈಲ್ ರಿಟ್ರೈವ್ ಮಾಡಿ ಸಾಕ್ಷ್ಯ ಪತ್ತೆ ಹಚ್ಚಿ ಸೂಕ್ತ ಸಮಯಕ್ಕೆ ವರದಿ ನೀಡುವಲ್ಲಿ ಎಫ್ಎಸ್‌ಎಲ್ ವಿಫಲವಾಗಿದೆ. ಜತೆಗೆ ಮೊಬೈಲ್ ಡಾಟಾ ಕಲೆ ಹಾಕಲು ಹಲವು ತಿಂಗಳುಗಳೇ ಹಿಡಿಯುತ್ತದೆ. ಪರಿಣಾಮ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿರುವ ಶೇ.30ರಷ್ಟು ಪ್ರಕರಣಗಳು ಹಳ್ಳಹಿಡಿದರೆ, ಶೇ.50ರಷ್ಟು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಜಾಗೊಳ್ಳುತ್ತಿವೆ.
ರಾಜ್ಯದಲ್ಲಿರುವ ಕಾನೂನು ಸುವ್ಯವಸ್ಥೆ, ಸೈಬರ್ ಕ್ರೈಂ ಪೊಲೀಸ್ ಠಾಣೆಗಳಿಂದ ಪ್ರತಿವರ್ಷ ಸುಮಾರು 30 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ಎಫ್ಎಸ್‌ಎಲ್‌ಗೆ ಬರುತ್ತಿವೆ. ಈ ಪೈಕಿ ಶೇ.70ರಷ್ಟು ಮೊಬೈಲ್‌ಗಳೇ ಇರುತ್ತವೆ. ಪ್ರಸ್ತುತ 3,400 ಸಾವಿರ ಕೇಸ್‌ಗಳಲ್ಲಿ ವರದಿ ನೀಡಲು ಬಾಕಿ ಇವೆ. ಸುಮಾರು 1,800 ಮೊಬೈಲ್ ಅಪರಾಧ ಪ್ರಕರಣಗಳಿವೆ. ಮೊಬೈಲ್ ಫಾರೆನ್ಸಿಕ್ ಹೊರತುಪಡಿಸಿ ಉಳಿದ ಪ್ರಕರಣಲ್ಲಿ ಒಂದು ತಿಂಗಳೊಳಗೆ ವರದಿಯು ತನಿಖಾಧಿಕಾರಿಗಳ ಕೈ ಸೇರುತ್ತಿವೆ. ಬೆಂಗಳೂರಿನಲ್ಲಿ ಎಫ್ಎಸ್‌ಎಲ್‌ನ ಪ್ರಧಾನ ಕಚೇರಿಯಿದ್ದು, ಇಲ್ಲಿ 13 ವಿಭಾಗಗಳಿವೆ. ದಾವಣಗೆರೆ, ಮಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು, ಹುಬ್ಬಳ್ಳಿ, ಬಳ್ಳಾರಿ ಜಿಲ್ಲೆಗಳಲ್ಲಿ 1 ಸ್ಥಳೀಯ ಎಫ್ಎಸ್‌ಎಲ್‌ಗಳಿವೆ. ಇಲ್ಲಿ 6 ವಿಭಾಗಗಳಿವೆ. ನಾರ್ಕೋಟಿಕ್ಸ್‌ನಂತಹ ಕೆಲವೊಂದು ಗಂಭೀರ ಪ್ರಕರಣಗಳಲ್ಲಿ ಪರೀಕ್ಷಿಸಿ ವರದಿ ನೀಡುವ ವ್ಯವಸ್ಥೆ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದೆ.