ಯುದ್ದದಲ್ಲಿ ಮಾನವೀಯತೆಯೇ ಕಟಕಟೆಯಲ್ಲಿದೆ..! ಸೋನಿಯಾ ಗಾಂಧಿ

ರಾಷ್ಟ್ರೀಯ

‘ದ ಹಿಂದೂ ‘ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸೋನಿಯಾ ಗಾಂಧಿಯವರ ಆಂಗ್ಲ ಬಾಷೆಯ ಲೇಖನವನ್ನು ಪತ್ರಕರ್ತ ನವೀನ್ ಸೂರಿಂಜೆ ಕನ್ನಡಕ್ಕೆ ಅನುವಾದಿಸಿದ್ದಾರೆ.

October 7, 2023 ರಂದು, ಯೋಮ್ ಕಿಪ್ಪೂರ್ ಯುದ್ಧದ 50 ನೇ ವರ್ಷಗಳನ್ನು ನೆನಪಿಸುವಂತೆ, ಹಮಾಸ್ ಇಸ್ರೇಲ್ ಮೇಲೆ ಕ್ರೂರ ದಾಳಿಯನ್ನು ಪ್ರಾರಂಭಿಸಿತು. ಸಾವಿರಕ್ಕೂ ಹೆಚ್ಚು ಜನರು ಹತರಾಗಿದ್ದು ಅದರಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಮಾಯಕ ನಾಗರಿಕರಿದ್ದರು. 200 ಕ್ಕೂ ಹೆಚ್ಚು ಜನರನ್ನು ಅಪಹರಿಸಲಾಗಿತ್ತು. ಇಂತಹ ಅಘಾತಕಾರಿ ದಾಳಿಯು ಇಸ್ರೇಲ್‌ಗೆ ವಿನಾಶಕಾರಿಯಾಗಿದೆ. ‘ಸಭ್ಯ ಜಗತ್ತಿನಲ್ಲಿ ಹಿಂಸೆಗೆ ಅವಕಾಶವಿಲ್ಲ’ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಲವಾಗಿ ನಂಬುತ್ತದೆ. ಆ ಕಾರಣಕ್ಕಾಗಿಯೇ ಹಮಾಸ್ ದಾಳಿ ನಡೆಸಿದ ಮರುದಿನವೇ ಎಐಸಿಸಿ ಖಡಾಖಂಡಿತವಾಗಿ ಖಂಡಿಸಿದೆ.

ಆದರೆ, ಈ ದುರಂತದ ಬಳಿಕ ಗಾಜಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲಿ ಮಿಲಿಟರಿಯು ವಿವೇಚನಾರಹಿತ ಕಾರ್ಯಾಚರಣೆ ನಡೆಸಿದೆ. ಇದು ಗಾಜಾ ಪ್ರದೇಶದ ಮುಗ್ಧ ಮಕ್ಕಳು, ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸಾವಿರಾರು ಅಮಾಯಕ ಜನರ ಸಾವು ನೋವುಗಳಿಗೆ ಕಾರಣವಾಗಿದೆ. ಇಸ್ರೇಲ್ ರಾಷ್ಟ್ರದ ‘ಶಕ್ತಿ’ಯು ಈಗ ನಿರ್ದೋಷಿಯಾಗಿರುವ, ಅಸಹಾಯಕವಾಗಿರುವ ಪ್ಯಾಲೆಸ್ತೀನಿ ಜನರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದರತ್ತ ಕೇಂದ್ರೀಕೃತವಾಗಿದೆ. ವಿಪರ್ಯಾಸ ಎಂದರೆ ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಬಂಡುಕೋರರಿಗೂ ಅಮಾಯಕ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೂ ಸಂಬಂಧವಿಲ್ಲದಿದ್ದರೂ ಅವರ ಮೇಲೆ ಈ ಜಗತ್ತಿನ ಅತ್ಯಂತ ಪ್ರಬಲವಾದ ಮಿಲಿಟರಿ ಶಸ್ತ್ರಗಳ ಬಳಕೆಯಾಗುತ್ತಿದೆ. ಈಗ ಇಸ್ರೇಲ್ ದಾಳಿಗೆ ಒಳಗಾಗಿರುವ ಅಮಾಯಕ ಜನರು ಹಲವು ದಶಕಗಳಿಂದ ತಾರತಮ್ಯ ಮತ್ತು ಸಂಕಟವನ್ನು ಅನುಭವಿಸಿದವರಾಗಿದ್ದಾರೆ.

ವಿವೇಚನಾರಹಿತ ವಿನಾಶ
ಈ ಯುದ್ಧದಲ್ಲಿ ಪ್ಯಾಲೆಸ್ತೀನಿನ ಹಲವು ಕುಟುಂಬಗಳು ನಾಶವಾದವು. ತಮ್ಮ ಮನೆ, ನೆರೆಹೊರೆಯ ಮನೆಗಳು ಭಗ್ನಾವಶೇಷವಾಗಿರುವುದಕ್ಕೆ ಇಲ್ಲಿನ ಜನ ಜೀವಂತ ಸಾಕ್ಷಿಯಾದರು. ಇಲ್ಲಿ ನಡೆದಿರುವ ದುರಂತದ ಜನಸಂಖ್ಯೆಗೆ ಅನುಗುಣವಾಗಿ ವೈದ್ಯಕೀಯ ಸೌಲಭ್ಯಗಳನ್ನು ವಿಶಾಲವಾದ ಮಾನವೀಯ ನೆಲೆಗಟ್ಟಿನಲ್ಲಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನೀರು, ಆಹಾರ ಮತ್ತು ವಿದ್ಯುತ್ ನಿರಾಕರಣೆ ಮಾಡುವ ಮೂಲಕ ಪ್ಯಾಲೆಸ್ತೀನ್ ಜನರಿಗೆ ಸಾಮೂಹಿಕ ಶಿಕ್ಷೆ ನೀಡಲಾಗಿದೆ‌. ಪ್ರಪಂಚದ ಬೇರೆ ಬೇರೆ ದೇಶಗಳು ಪ್ಯಾಲೆಸ್ತೀನಿಗೆ ಸಹಾಯ ಮಾಡುವುದನ್ನು ನಿರ್ಬಂಧಿಸಲಾಗಿದೆ. ಅದರಲ್ಲೂ ಗಾಜಾ ಪ್ರದೇಶಕ್ಕಂತೂ ಸಹಾಯ ಮಾಡುವವರಿಗೆ ಪ್ರವೇಶವೇ ಇಲ್ಲ ! ಗಾಜಾ ಪ್ರದೇಶದ ಪ್ಯಾಲೆಸ್ತೀನಿಯರಿಗೆ ಸಣ್ಣ ಪ್ರಮಾಣದ ಸಹಾಯ ಮಾಡಿದಂತೆ ಮಾಡಲಾಗುತ್ತದೆ. ಗಾಜಾಗೆ ಅಗತ್ಯವಿರುವ ಪ್ರಮಾಣದಷ್ಟು ಬೇಕಾಗಿರುವ ಸಹಾಯವನ್ನು ಸ್ಪಷ್ಟವಾಗಿ ನಿರಾಕರಿಸಲಾಗಿದೆ. ಇದು ಅಮಾನವೀಯ ಮಾತ್ರವಲ್ಲ, ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯೂ ಆಗಿದೆ. ಇಡೀ ಗಾಜಾ ಪ್ರದೇಶದಲ್ಲಿ ಕೆಲವೇ ಕೆಲವು ಗಾಜಾ ನಿವಾಸಿಗಳು ಹಿಂಸಾಚಾರದಿಂದ ಮುಕ್ತರಾಗಿದ್ದಾರೆ. ಈಗ, ಆಕ್ರಮಿತ ವೆಸ್ಟ್ ಬ್ಯಾಂಕ್ ಕೂಡ ಭುಗಿಲೆದ್ದಿದೆ ಮತ್ತು ಸಂಘರ್ಷವು ವಿಸ್ತರಿಸುತ್ತಿದೆ.

ಭವಿಷ್ಯದ ಬಗೆಗಿನ ನಿರೀಕ್ಷೆಗಳೇ ಆತಂಕಕಾರಿಯಾಗಿದೆ. ಇಸ್ರೇಲ್ ಹಿರಿಯ ಅಧಿಕಾರಿಗಳು ಗಾಜಾವನ್ನು ನಾಶಪಡಿಸುವ ಮತ್ತು ಗಾಜಾದಲ್ಲಿ ಜನರನ್ನೇ ಇಲ್ಲವಾಗಿಸುವ ಬಗ್ಗೆ ಮಾತನಾಡಿದ್ದಾರೆ. ಇಸ್ರೇಲಿ ರಕ್ಷಣಾ ಮಂತ್ರಿ ಪ್ಯಾಲೆಸ್ತೀನಿಯಾರನ್ನು “ಮಾನವ ರೂಪದ ಪ್ರಾಣಿಗಳು” ಎಂದು ಉಲ್ಲೇಖಿಸಿದ್ದಾರೆ. ಹತ್ಯೆಗಳನ್ನು ಕಣ್ಣಾರೆ ಕಂಡವರು, ದಾಳಿಗಳ ಸಂತ್ರಸ್ತರಾಗಿರುವವರ ಬಾಯಿಯಲ್ಲೇ ಇಂತಹ ಅಮಾನವೀಯ ಭಾಷೆ ಬರುತ್ತಿರುವುದು ಆಘಾತಕಾರಿಯಾಗಿದೆ.

ಹೌದು. ಈಗ ಮಾನವೀಯತೆ ವಿಚಾರಣೆಯಲ್ಲಿದೆ. ಇಸ್ರೇಲ್ ಮೇಲಿನ ಹಮಾಸ್ ನ ಕ್ರೂರ ದಾಳಿಯಿಂದ ನಾವು ಒಟ್ಟಾರೆಯಾಗಿ ಕುಸಿದು ಹೋಗಿದ್ದೇವು. ಅದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್‌ ನಡೆಸಿದ ಅಸಮಾನ ಮತ್ತು ಅಷ್ಟೇ ಕ್ರೂರ ದಾಳಿಯಿಂದ ನಾವೆಲ್ಲರೂ ಈಗ ಮತ್ತಷ್ಟು ಕುಸಿದಿದ್ದೇವೆ. ನಮ್ಮ ಸಾಮೂಹಿಕ ಆತ್ಮಸಾಕ್ಷಿಯ ಕಲಕಲು ಮತ್ತು ಜಾಗೃತಗೊಳ್ಳಲು ಇನ್ನೂ ಎಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳಬೇಕು?

ಹಮಾಸ್‌ ಮಾಡಿರುವ ಕೃತ್ಯಗಳನ್ನು ಪ್ಯಾಲೆಸ್ತೀನ್ ಜನರೊಂದಿಗೆ ಸಮೀಕರಿಸುವ ಮೂಲಕ ಇಸ್ರೇಲ್ ಸರ್ಕಾರವು ಘೋರ ಅಪರಾಧ ಮಾಡುತ್ತಿದೆ. ಹಮಾಸ್ ಅನ್ನು ನಾಶ ಮಾಡುವ ಸಂಕಲ್ಪದಲ್ಲಿ, ಅದು ಗಾಜಾದ ಸಾಮಾನ್ಯ ಜನರ ವಿರುದ್ಧ ವಿವೇಚನಾರಹಿತ ದಾಳಿ ಮಾಡಿದೆ. ಆ ಮೂಲಕ ಜನರ ಸಾವು, ನೋವು, ವಿನಾಶಕ್ಕೆ ಕಾರಣವಾಗಿದೆ. ಪ್ಯಾಲೆಸ್ತೀನಿಯರು ಅನುಭವಿಸುತ್ತಿರುವ ಸಂಕಟಕ್ಕೆ ಸುದೀರ್ಘ ಇತಿಹಾಸ ಇದೆ. ಅದನ್ನು ಬದಿಗಿಟ್ಟು ನೋಡಿದರೂ, ಯಾರೋ ಕೆಲವರ ಕೃತ್ಯಗಳಿಗೆ ಇಡೀ ಪ್ಯಾಲೆಸ್ತೀನ್‌ ಜನರನ್ನು ಹೊಣೆಗಾರರನ್ನಾಗಿ ಮಾಡುವುದು ಎಷ್ಟು ಸರಿ ?

ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ ನ ಈ ಸಂಕೀರ್ಣ ಸಮಸ್ಯೆಯ ಹಿಂದೆ ಸಾಮ್ರಾಜ್ಯಶಾಹಿ ಶಕ್ತಿಗಳಿಂದ ಯೋಜಿತ ಹುನ್ನಾರವಿದೆ. ಹಾಗಾಗಿಯೇ ಇತಿಹಾಸದಲ್ಲಿ ಬೇರೂರಿರುವ ಈ ಸಮಸ್ಯೆಯನ್ನು ಮಾತುಕತೆಯ ಮೂಲಕವಷ್ಟೇ ಬಗೆಹರಿಸಬಹುದು. ಈ ರೀತಿಯ ಸಂವಾದವು ಪ್ಯಾಲೆಸ್ತೀನಿಯನ್ನರ ನ್ಯಾಯಸಮ್ಮತ ಬೇಡಿಕೆಗಳನ್ನು ಒಳಗೊಂಡಿರಬೇಕು. ದಶಕಗಳಿಂದ ಪ್ಯಾಲೆಸ್ತೀನಿಯರಿಗೆ ನಿರಾಕರಿಸಲ್ಪಟ್ಟಿರುವ ಸಾರ್ವಭೌಮ ರಾಷ್ಟ್ರದ ಬೇಡಿಕೆಯನ್ನು ಮಾತುಕತೆ ಪೂರೈಸುವಂತಿರಬೇಕು. ಅದರ ಜೊತೆಯಲ್ಲೇ ಅಂತಹ ಮಾತುಕತೆಯು ಇಸ್ರೇಲಿನ ಭದ್ರತೆಯನ್ನೂ ಖಾತ್ರಿಪಡಿಸುವಂತಿರಬೇಕು.

ಕಾಂಗ್ರೆಸ್ ನಿಲುವು
ಶಾಂತಿ ಬೇಕು. ಆದರೆ, ‘ನ್ಯಾಯವಿಲ್ಲದೆ ಶಾಂತಿ ಇರುವುದಿಲ್ಲ’. ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಇಸ್ರೇಲ್‌ನ ನಿರಂತರ ದೌರ್ಜನ್ಯ, ದಿಗ್ಬಂಧನದಿಂದ ಗಾಜಾ ಪ್ರದೇಶವೇ ಒಂದು ‘ತೆರೆದ ಸೆರೆಮನೆ’ಯಾಗಿದೆ. ಗಾಜಾದ ದೊಡ್ಡ ದೊಡ್ಡ ನಗರಗಳು ಮತ್ತು ನಿರಾಶ್ರಿತರ ಶಿಬಿರಗಳಲ್ಲಿ ತುಂಬಿರುವ ಎರಡು ಮಿಲಿಯನ್ ನಿವಾಸಿಗಳಿಗೆ ಈ ತೆರೆದ ಸೆರೆಮನೆಯಲ್ಲಿದ್ದಾರೆ. ಜೆರುಸಲೆಮ್ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ಪ್ಯಾಲೆಸ್ತೀನಿಯರನ್ನು ತಮ್ಮ ಸ್ವಂತ ಭೂಮಿಯಿಂದ ಹೊರದಬ್ಬುವ ಕೆಲಸವನ್ನು ಇಸ್ರೇಲ್ ವಸಾಹತುಗಾರರು ಮುಂದುವರೆಸಿದ್ದಾರೆ. ಜಾಗತಿಕ ನೀತಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿರುವ ದೇಶಗಳ ನೇತೃತ್ವದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ಗಳಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಬಗ್ಗೆ ಮಾತುಕತೆ ನಡೆದರೆ ಮಾತ್ರ ಶಾಂತಿ ಮರುಕಳಿಸಬಹುದು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿಷಯದಲ್ಲಿ ಈ ಹಿಂದಿನ ನಿಲುವಿಗೆ ಸ್ಥಿರವಾಗಿ ನಿಂತಿದೆ. ಪ್ಯಾಲೆಸ್ತೀನಿಯನ್ನರು ಮತ್ತು ಇಸ್ರೇಲಿಗಳು ನ್ಯಾಯಯುತವಾಗಿ ಶಾಂತಿಯಿಂದ ಬದುಕುವ ಹಕ್ಕನ್ನು ಹೊಂದಿದ್ದಾರೆ. ಇಸ್ರೇಲ್ ಜನರೊಂದಿಗೆ ನಮ್ಮ ಸ್ನೇಹವನ್ನು ನಾವು ಗೌರವಿಸುತ್ತೇವೆ. ಹಾಗೆಂದು ನಾವು ಪ್ಯಾಲೆಸ್ತೀನ್‌ನ ಮೇಲೆ ಇಸ್ರೇಲ್ ನಡೆಸಿದ ದೌರ್ಜನ್ಯವನ್ನು ಮರೆತುಬಿಡುತ್ತೇವೆ ಎಂದರ್ಥವಲ್ಲ. ಶತಮಾನಗಳ ಕಾಲ ಪ್ಯಾಲೆಸ್ತೀನಿಯರನ್ನು ಅವರ ತಾಯ್ನಾಡಿನಿಂದ ಬಲವಂತವಾಗಿ ಹೊರಹಾಕಿದ ನೋವಿನ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ. ಪ್ಯಾಲೆಸ್ತೇನಿಯರ ಘನತೆ ಮತ್ತು ಸ್ವಾಭಿಮಾನದ ಜೀವನಕ್ಕೆ ಬೇಕಾಗಿದ್ದ ಮೂಲಭೂತ ಹಕ್ಕನ್ನು ಇಸ್ರೇಲ್ ಇಷ್ಟು ವರ್ಷಗಳ ಕಾಲ ಕಸಿದಿತ್ತು ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ.

ಕೆಲವು ಚೇಷ್ಟೆಯ ಸಲಹೆ, ಕುಹಕಗಳು ಕೇಳಿ ಬಂದರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪ್ಯಾಲೆಸ್ತೀನ್ ಪರವಾಗಿನ ತನ್ನ ತತ್ವಬದ್ಧ ನಿಲುವುಗಳಿಗೆ ಬದ್ಧವಾಗಿದೆ. ಕಾಂಗ್ರೆಸ್ ಪಕ್ಷವು, ಶಾಂತಿಯಿಂದ ಸಹಬಾಳ್ವೆ ನಡೆಸುವ ಸಾರ್ವಭೌಮ ಸ್ವತಂತ್ರ ರಾಷ್ಟ್ರವಾದ ಪ್ಯಾಲೆಸ್ತೀನ್‌ಗಾಗಿ ನೇರ ಮಾತುಕತೆಗಳನ್ನು ಬೆಂಬಲಿಸುತ್ತದೆ.

ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವ ಆರಂಭಿಕ ಹೇಳಿಕೆಯಲ್ಲಿ ಭಾರತದ ಪ್ರಧಾನಿಗಳು ಪ್ಯಾಲೆಸ್ತೀನ್ ಹಕ್ಕುಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿರಲಿಲ್ಲ. ಆ ಬಳಿಕ ಅಕ್ಟೋಬರ್ 12, 2023 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಕೂಡಾ ಕಾಂಗ್ರೆಸ್ ತೆಗೆದುಕೊಂಡ ನಿಲುವನ್ನೇ ತೆಗೆದುಕೊಂಡಿದೆ. ಇಸ್ರೇಲ್ ಗಾಜಾದ ಮೇಲೆ ಅಮಾನವೀಯ ದಾಳಿಯನ್ನು ನಡೆಸಿದ ನಂತರವಾದರೂ ಪ್ಯಾಲೆಸ್ತೀನ್‌ ಬಗೆಗೆ ಭಾರತದ ಐತಿಹಾಸಿಕ ನಿಲುವನ್ನು ಪುನರುಚ್ಚರಿಸಿರುವುದು ಗಮನಾರ್ಹವಾಗಿದೆ.

ಆದರೆ, ಇಸ್ರೇಲಿ ಪಡೆಗಳು ಮತ್ತು ಗಾಜಾದಲ್ಲಿ ಹಮಾಸ್ ನಡುವೆ, ಮಾನವೀಯತೆಯ ದೃಷ್ಟಿಯಿಂದ ತಕ್ಷಣದ ಮತ್ತು ಧೀರ್ಘಕಾಲೀನ ಕದನ ವಿರಾಮಕ್ಕೆ ಕಾರಣವಾಗುವ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಗೆ ಭಾರತವು ಗೈರು ಹಾಜರಾಗಿರುವುದನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಲವಾಗಿ ವಿರೋಧಿಸುತ್ತದೆ.

ಮಾನವೀಯ ಜಗತ್ತು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಯುದ್ದದ ಬಗ್ಗೆ ಪ್ರತಿಕ್ರಿಯೆ ಕೊಡಬೇಕು. ಈ ಯುದ್ದದ ಹುಚ್ಚುತನವನ್ನು ಕೊನೆಗಾಣಿಸಬೇಕು ಎಂದು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನ ಪ್ರಜ್ಞಾವಂತ ಜನರು ಬಯಸುತ್ತಿದ್ದಾರೆ. ಈಗಾಗಲೇ ಕುಟುಂಬ, ಸ್ನೇಹಿತರನ್ನು ಕಳೆದುಕೊಂಡಿರುವ ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರು ಮಾತುಕತೆಯೇ ಮುಂದಿನ ದಾರಿ ಎಂದು ನಂಬಿದ್ದಾರೆ. ಯುದ್ಧದ ಹಿಂಸಾಚಾರವು ಹೆಚ್ಚಿನ ಸಂಕಟಗಳಿಗೆ ಕಾರಣವಾಗುತ್ತದೆ. ಯುದ್ಧವು ಸ್ವಾಭಿಮಾನ, ಸಮಾನತೆ ಮತ್ತು ಘನತೆಯಿಂದ ಬದುಕುವ ಕನಸಿನಿಂದ ಮತ್ತಷ್ಟು ದೂರ ಕೊಂಡೊಯ್ಯುತ್ತದೆ ಎಂದು ಪ್ಯಾಲೆಸ್ತೀನಿಯರಿಗೂ, ಇಸ್ರೇಲಿಗರಿಗೂ ಮನದಟ್ಟಾಗಿದೆ.
ಅನೇಕ ಪ್ರಭಾವಿ ದೇಶಗಳು ಯುದ್ಧವನ್ನು ಕೊನೆಗೊಳಿಸಲು ತಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿರುವಾಗ ಯಾರೂ ಕೂಡಾ ಪಕ್ಷಪಾತಿಯಾಗಬಾರದು. ಜನಸಾಮಾನ್ಯರ ಮೇಲೆ ಮಿಲಿಟರಿ ಚಟುವಟಿಕೆಯನ್ನು ನಿಲ್ಲಿಸಲು ಗಟ್ಟಿಯಾದ ಮತ್ತು ಶಕ್ತಿಯುತ ಧ್ವನಿಗಳು ಮೊಳಗಬೇಕು. ಇಲ್ಲದಿದ್ದರೆ, ಈ ಯುದ್ಧ ಚಕ್ರವು ಮುಂದುವರಿದು ಶಾಂತಿ ಸಮಾನತೆಯ ಬದುಕು ದುಸ್ತರವಾಗುತ್ತದೆ. ಬನ್ನಿ, ಶಾಂತಿ, ಸಮಾನತೆಯತ್ತಾ ಸಾಗೋಣಾ…

ಅನುವಾದ : ಪತ್ರಕರ್ತ, ನವೀನ್‌ ಸೂರಿಂಜೆ