ಕೇರಳ ಬಾಂಬ್ ಸ್ಪೋಟ ಪ್ರಕರಣ: ಧರ್ಮದ್ವೇಷಿ ಪೋಸ್ಟ್ ಮಾಡಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲು

ರಾಷ್ಟ್ರೀಯ

ಕೇರಳ ಕಲುಮಶ್ಯೇರಿ ಚರ್ಚ್ ಮೇಲೆ ನಡೆದಿದ್ದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಗಳ ಮಧ್ಯೆ ವಿದ್ವೇಷ ಉಂಟು ಮಾಡುವ ಪೋಸ್ಟ್ ಶೇರ್ ಮಾಡಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಮಾಜಿಕ ದ್ವೇಷವನ್ನು ಹರಡಿದ ಆರೋಪದಡಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೇಲೆ ಆರೋಪ ಹೊರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚಂದ್ರಶೇಖರ್ ಭಾನುವಾರ ಕೇರಳದಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಸರಣಿ ಸ್ಫೋಟ ನಡೆದ ಬೆನ್ನಲ್ಲೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜೀವ್ ಚಂದ್ರಶೇಖರ್ ಪೋಸ್ಟ್‌ನಲ್ಲಿ ಏನಿದೆ?

ಭ್ರಷ್ಟಾಚಾರದ ಆರೋಪದ ಮೂಲಕ ಅಪಖ್ಯಾತಿ ಪಡೆದ ಸಿಎಂ ಪಿಣರಾಯಿ ವಿಜಯನ್‌ ನಾಚಿಕೆಯಿಲ್ಲದೆ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕುಳಿತು ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗ ಕೇರಳದಲ್ಲಿ ಜಿಹಾದ್‌ಗಾಗಿ ಹಮಾಸ್‌ನ ಮುಕ್ತ ಕರೆಗಳು ಅಮಾಯಕ ಕ್ರಿಶ್ಚಿಯನ್ನರ ಮೇಲೆ ದಾಳಿ ಮತ್ತು ಬಾಂಬ್ ಸ್ಫೋಟಗಳಿಗೆ ಕಾರಣವಾಗುತ್ತಿವೆ ಎಂದು ಪೋಸ್ಟ್‌ ಮಾಡಿದ್ದರು.

ರಾಜ್ಯದಲ್ಲಿ ದ್ವೇಷ ಮತ್ತು ಜಿಹಾದ್‌ನ್ನು ಮುಕ್ತವಾಗಿ ಬೋಧಿಸಲು INDIA ಮೈತ್ರಿಕೂಟದ ಎರಡು ರಾಜಕೀಯ ಪಕ್ಷಗಳು ಭಯೋತ್ಪಾದಕ ಸಂಘಟನೆ ಹಮಾಸ್‌ನ ಮುಖ್ಯಸ್ಥರಿಗೆ ಅವಕಾಶ ನೀಡಿರುವುದು ಮಾತ್ರ ಕಷ್ಟ ಎಂದು ಹೇಳಿದ್ದರು.

ಚಂದ್ರಶೇಖರ್‌ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯ್ ವಿಜಯನ್‌, ಸಚಿವರ ಹೇಳಿಕೆ ಕೋಮುವಾದದಿಂದ ಕೂಡಿದೆ. ವಿಷವುಳ್ಳವರು ವಿಷವನ್ನು ಉಗುಳುತ್ತಲೇ ಇರುತ್ತಾರೆ. ಜವಾಬ್ದಾರಿಯುತ ಸಚಿವರಾಗಿ ಅವರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳಿಗೆ ಕನಿಷ್ಠ ಗೌರವವನ್ನು ತೋರಿಸಬೇಕಾಗಿತ್ತು. ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಿಕೊಂಡು ತನಿಖೆಯ ಆರಂಭಿಕ ದಿನಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದರು.

ಚರ್ಚ್ ಮೇಲೆ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಡೊಮಿನಿಕ್ ಮಾರ್ಟಿನ್ ಪೊಲೀಸರಿಗೆ ಶರಣಾಗಿದ್ದ.