ಇಸ್ರೇಲ್-ಪ್ಯಾಲೆಸ್ಟೀನ್ ಯುದ್ಧ.. ಈವರೆಗೂ 34 ಪತ್ರಕರ್ತರು ದುರ್ಮರಣ.!

ಅಂತಾರಾಷ್ಟ್ರೀಯ

ಇಸ್ರೇಲ್-ಪ್ಯಾಲೆಸ್ಟೀನ್ ನಡುವಿನ ಯುದ್ಧ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ವಿದೇಶಿ ರಾಷ್ಟ್ರಗಳು ಕದನ ವಿರಾಮಕ್ಕೆ ಮನವಿ ಮಾಡಿದರೂ ಕದನ ವಿರಾಮಕ್ಕೆ ಇಸ್ರೇಲ್ ಕಿಂಚಿತ್ತೂ ಒಪ್ಪುತ್ತಿಲ್ಲ. ಕದನ ವಿರಾಮ ಘೋಷಿಸಿದರೆ ಹಮಾಸ್ ವಿರುದ್ಧ ಸೋತಂತೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

ಇತ್ತ ಹಮಾಸ್ ಕೂಡ ಕೈ ಕಟ್ಟಿ ಕುಳಿತಿಲ್ಲ. ಭೂ ದಾಳಿಗೆ ಮುಂದಾಗಿದ್ದ ಕೆಲವು ಇಸ್ರೇಲ್ ಸೈನಿಕರನ್ನು ಹಮಾಸ್ ಕೊಂದಿದೆ. ಒಟ್ಟಾರೆ ಈ ಯುದ್ಧದಲ್ಲಿ ಅಮಾಯಕ ನಾಗರೀಕರು ಕೊಲ್ಲಲ್ಪಡುತ್ತಿದ್ದಾರೆ. ಗಾಜಾ ದ ಆಸ್ಪತ್ರೆ, ನಿರಾಶ್ರಿತರ ಶಿಬಿರ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿ ಕ್ರೂರತೆ ಪ್ರದರ್ಶಿಸುತ್ತಿದೆ. ಅಂದಾಜು 8,500 ಕ್ಕೂ ಅಧಿಕ ಪ್ಯಾಲೆಸ್ತೀನ್ ನಾಗರೀಕರು, 1500 ಕ್ಕೂ ಅಧಿಕ ಇಸ್ರೇಲ್ ಪ್ರಜೆಗಳು ಈ ಯುದ್ಧದಲ್ಲಿ ಜೀವ ಕಳೆದುಕೊಂಡಿದ್ದಾರೆ. ಗಾಯಾಳುಗಳ ಸಂಖ್ಯೆ ದುಪ್ಪಟ್ಟಾಗಿದೆ. ಅಕ್ಷರಶಃ ಗಾಜಾ ಬಯಲು ಶವಾಗಾರ ಆಗಿಬಿಟ್ಟಿದೆ. ಈ ಯುದ್ಧದ ಭೀಕರತೆಯನ್ನು ಚಿತ್ರಿಸಲು ಹೊರಟ ದೃಶ್ಯ ಮಾಧ್ಯಮದ ಮಂದಿ, ಪತ್ರಕರ್ತರು ಇಸ್ರೇಲ್ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ. ಇಸ್ರೇಲ್ ಸೇನೆಯು ನಿರ್ಧಿಷ್ಟವಾಗಿ ವರದಿಗಾರರ ಗುಂಪನ್ನು ಗುರಿಯಾಗಿಟ್ಟುಕೊಂಡು ಬಾಂಬ್ ದಾಳಿ ನಡೆಸುತ್ತಿದೆ. ದಕ್ಷಿಣ ಲೆಬನಾನ್ ನ ರಾಯಿಟರ್ಸ್ ಪತ್ರಿಕೆಯಲ್ಲಿ ವಿಡಿಯೋ ಗ್ರಾಫರ್ ಆಗಿದ್ದ ಇಸ್ಲಾಮ ಅಬ್ದುಲ್ಲಾ ಇಸ್ರೇಲ್ ಸೇನೆಯ ದಾಳಿಗೆ ಬಲಿಯಾದ ಮೊದಲ ಪತ್ರಕರ್ತರಾಗಿದ್ದರು.

ಆನಂತರ ಪತ್ರಕರ್ತರನ್ನೆ ಗುರಿಯಾಗಿಟ್ಟು ಇಸ್ರೇಲ್ ದಾಳಿ ನಡೆಸುತ್ತಿದ್ದು, ಈವರೆಗೂ ಅಂದಾಜು 34 ಪತ್ರಕರ್ತರು ದುರ್ಮರಣಕ್ಕೀಡಾಗಿದ್ದಾರೆ. ಹಲವಾರು ಪತ್ರಕರ್ತರು ನಾಪತ್ತೆಯಾಗಿದ್ದಾರೆ. ಬಲಿಯಾದವರಲ್ಲಿ 30 ಕ್ಕೂ ಹೆಚ್ಚು ಪತ್ರಕರ್ತರು ಇಸ್ರೇಲ್ ಸೇನೆಯ ದಾಳಿಗೆ ಮಡಿದವರಾಗಿದ್ದಾರೆ ಎಂದು ‘ಮಿಡ್ಲ್ ಈಸ್ಟ್ ಮಾನಿಟರ್’ ವರದಿ ಮಾಡಿದೆ. ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಗಳಲ್ಲಿ ಮೃತಪಟ್ಟ ಪತ್ರಕರ್ತರ ಪಟ್ಟಿಯನ್ನು ಗಾಜಾದ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದೆ.

ಮೂವರು ಮಹಿಳೆಯರು ಸೇರಿದಂತೆ 34 ಪತ್ರಕರ್ತರು ದಾಳಿಗಳಲ್ಲಿ ಬಲಿಯಾಗಿದ್ದಾರೆ. ಇನ್ನೂ ಅನೇಕ ಪತ್ರಕರ್ತರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಅಕ್ಟೋಬರ್ 25ರಂದು ನುಸೀರಾತ್ ನಿರಾಶ್ರಿತರ ಶಿಬಿರದಲ್ಲಿನ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲ್ ಜಜೀರಾ ಪತ್ರಕರ್ತ ವಾಯೆಲ್ ಅಲ್ ದಾಹದುಹ್ ಅವರು ಹೆಂಡತಿ, ಮಗ ಹಾಗೂ ಮಗಳು ಸೇರಿದಂತೆ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದರು.

ಸೋಮವಾರ ಇಸ್ರೇಲ್ ಪಡೆಗಳು ಪ್ಯಾಲೆಸ್ತೀನ್ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಬ್ರಾಡ್‌ಕಾಸ್ಟ್ ಎಂಜಿನಿಯರ್ ಮುಹಮ್ಮದ್ ಅಬು ಅಲ್ ಕುಸ್ಮಾನ್ ಅವರು ತಮ್ಮ ಕುಟುಂಬದ 19 ಸದಸ್ಯರನ್ನು ಕಳೆದುಕೊಂಡಿದ್ದಾರೆ ಎಂದು ಅಲ್ ಜಜೀರಾ ತಿಳಿಸಿದೆ.

ಇಸ್ರೇಲ್- ಲೆಬನಾನ್ ಗಡಿ ಭಾಗದಲ್ಲಿ ನಡೆದ ಸಂಘರ್ಷದಲ್ಲಿ ಇಸ್ರೇಲ್‌ನ ಗುಂಡೇಟಿಗೆ ಲೆಬನಾನ್ ಪತ್ರಕರ್ತರೊಬ್ಬರು ಮೃತಪಟ್ಟಿದ್ದಾರೆ. ಹಮಾಸ್ ನಡೆಸಿದ ದಾಳಿಗಳಲ್ಲಿ ಇಸ್ರೇಲ್ ತನ್ನ ನಾಲ್ವರು ಪತ್ರಕರ್ತರನ್ನು ಕಳೆದುಕೊಂಡಿದೆ. ಈವರೆಗೂ ಎಂಟು ಮಂದಿ ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.