ಕಾಂಗ್ರೆಸ್ ಬಣ ರಾಜಕೀಯ: ಹೈಕಮಾಂಡ್ ಗರಂ; ಸಿಎಂ ಮತ್ತು ಡಿಸಿಎಂ ಗೆ ಕ್ಲಾಸ್, ಶಿಸ್ತು ಮೀರಿ ಮಾತನಾಡಿದರೆ ಯಾರೇ ಆದರೂ ಕಠಿಣ ಕ್ರಮ

ರಾಷ್ಟ್ರೀಯ

ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ನೆರೆಯ ತೆಲಂಗಾಣದ ಚುನಾವಣಾ ಕೆಲಸ ಮುಗಿಸಿ ಬೆಂಗಳೂರಿಗೆ ಆಗಮಿಸಿದ್ದರು. ಬುಧವಾರದಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಜತೆಗೆ ಸಭೆ ನಡೆಸಿದರು. ಹೈಕಮಾಂಡ್ ಅಂಗಳದ ಆಂತರಿಕ ಮಾತುಕತೆಗಳು ಸಾರ್ವಜನಿಕ ಚರ್ಚೆಗೆ ವಸ್ತುವಾಗಿದೆ. ಬೆಂಬಲಿಗ ಸಚಿವ, ಶಾಸಕರನ್ನು ಮಾತನಾಡಲು ಬಿಟ್ಟು ಮುಗುಮ್ಮಾಗಿ ಉಳಿದಿದ್ದೀರಿ ಎಂದು ಸಿಎಂ ಮತ್ತು ಡಿಸಿಎಂ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಣ ತಾಕಲಾಟ ಹೆಚ್ಚಿ, ಪಕ್ಷ ಮತ್ತು ಸರಕಾರದ ವರ್ಚಸ್ಸು ಹಾಳಾಗುತ್ತಿದೆ. ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಪತನವಾಗಲಿದೆ ಎಂಬುವಷ್ಟರ ಮಟ್ಟಿಗೆ ರಾಜಕೀಯ ವಿರೋಧಿಗಳಿಗೆ ಚರ್ಚಾವಸ್ತುವಾಗುವ ಹಂತದವರೆಗೆ ಬೆಳವಣಿಗೆಗಳು ತಲುಪಿರುವುದಕ್ಕೆ ಎಐಸಿಸಿ ಪ್ರತಿನಿಧಿಗಳು ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.

ನಾಲ್ವರಿಗೆ ಸೀಮಿತವಾಗಿ ಕೆಪಿಸಿಸಿ ಕಛೇರಿಯಲ್ಲೇ ನಡೆದ ಸಭೆಯಲ್ಲಿ ನಾನಾ ವಿಚಾರಗಳು ಚರ್ಚೆ ಆದವು. ಪ್ರಮುಖವಾಗಿ ಸಿಎಂ, ಡಿಸಿಎಂ ಎರಡೂ ಕಡೆಯ ಬೆಂಬಲಿಗ ಸಚಿವ, ಶಾಸಕರು ಲಂಗು ಲಗಾಮಿಲ್ಲದೆ ಮಾತನಾಡುತ್ತಾ ಹೊರಟಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ‘ಕರ್ನಾಟಕ ಮಾದರಿ’ ಯೊಂದಿಗೆ ಎದುರುಗೊಳ್ಳುವ ಪಕ್ಷದ ಆಸೆಗೆ ಕುತ್ತು ತರುತ್ತಿದೆ. ಇದು ಇಲ್ಲಿಗೆ ನಿಲ್ಲಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಪಕ್ಷದ ಸಂಘಟನೆ, ಅಧಿಕಾರ ಹಾಗೂ ಸರಕಾರದ ಕಾರ್ಯವೈಖರಿ ಬಗ್ಗೆ ಮಾತನಾಡಲೇಬೇಕಾದ ಸಂಗತಿಗಳು ಇದ್ದರೆ ಸಿಎಂ, ಡಿಸಿಎಂ ಅಥವಾ ನನ್ನೊಂದಿಗೆ ನೇರವಾಗಿ ಚರ್ಚಿಸಿ. ನಿಮ್ಮ ಧ್ವನಿಗೆ ಪಕ್ಷದಲ್ಲಿ ಅವಕಾಶ ಇದ್ದೇ ಇದೆ. ದೂರು, ಸಲಹೆ, ಅಭಿಪ್ರಾಯಗಳನ್ನು ವ್ಯಕ್ತಮಾಡಲು ಪಕ್ಷದ ಈ ವೇದಿಕೆ ಬಳಸಿಕೊಳ್ಳುವ ಬದಲಿಗೆ, ಸಾರ್ವಜನಿಕವಾಗಿ ಪಕ್ಷದ ಶಿಸ್ತು ಮೀರಿ ಮಾತನಾಡಿದರೆ ಯಾರೇ ಆದರೂ ಕಠಿಣ ಕ್ರಮ ನಿಶ್ಚಿತ. ಅಶಿಸ್ತಿನ ನಡವಳಿಕೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.