ಅಂಗಾಂಗ ದಾನ ಮಾಡುವ ವ್ಯಕ್ತಿಗಳ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ನೀಡುವ ಕುರಿತಂತೆ ನೀತಿ ರೂಪಿಸಲು ಚಿಂತನೆ: ಗುಂಡೂರಾವ್

ರಾಜ್ಯ

ಪ್ರತಿಫಲಾಪೇಕ್ಷೆ ಇಲ್ಲದೆ ಅಂಗಾಂಗ ದಾನ ಮಾಡುವ ವ್ಯಕ್ತಿಗಳ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ನೀಡುವ ಕುರಿತಂತೆ ನೀತಿ ರೂಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾನವೀಯ ನೆಲೆಯಲ್ಲಿ ಅಂಗಾಂಗ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ನೆರವಾಗುವ ವ್ಯಕ್ತಿಗಳು ಮತ್ತು ಕುಟುಂಬದವರನ್ನು ಗುರುತಿಸಿ ಗೌರವಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋದ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅಂಗಾಂಗ ದಾನ ಮಾಡುವ ವ್ಯಕ್ತಿ ಅಥವಾ ಕುಟುಂಬಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸುವ ಹಾಗು ತಮಿಳುನಾಡು ಮಾದರಿಯಲ್ಲಿ ಅಂಗಾಂಗ ದಾನಿಗಳ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸುವ ಬಗ್ಗೆಯೂ ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಸರ್ಕಾರ ಅಂಗಾಂಗ ದಾನದ ಮಹತ್ವವನ್ನು ಸಾರಲು ಮತ್ತು ಮತ್ತಷ್ಟು ಜನರಿಗೆ ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಶೀಘ್ರದಲ್ಲೇ ನೀತಿಯೊಂದನ್ನು ರೂಪಿಸಲಿದೆ ಎಂದಿದ್ದಾರೆ.

ಅಂಗಾಂಗಗಳ ವೈಫಲ್ಯದಿಂದ ಪ್ರತಿನಿತ್ಯ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಂಗಾಂಗ ಧಾನಿಗಳಿಗೆ ಉತ್ತೇಜನೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಅಂಗಾಂಗಗಳ ದಾನಿಗಳ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ನೀಡುವ ನಿರ್ಣಯ ಮಹತ್ವದ ಉತ್ತೇಜನ ನೀಡಲಿದೆ ಎಂದು ಹೇಳಲಾಗುತ್ತಿದೆ.