✍️. ಪತ್ರಕರ್ತ, ನವೀನ್ ಸೂರಿಂಜೆ
ಹುಲಿ ಉಗುರು ಬಳಕೆ ಮತ್ತು ಮಾರಾಟ ಮಾಡುವವರನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಏಕಾಏಕಿ ಬಂಧಿಸುವುದನ್ನು ವಿರೋಧಿಸಿದ್ದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಅಲ್ಲೂ ಹಿಂದೂ ಮುಸ್ಲಿಂ ದ್ವೇಷವನ್ನು ಮುಂದೆ ತಂದಿದ್ದರು. “ಮುಸ್ಲೀಮರ ದರ್ಗಾದಲ್ಲಿ ಇಮಾಮ್ ಗಳು ಆಶೀರ್ವಾದ ಮಾಡಲು ನವಿಲು ಗರಿ ಬಳಸುತ್ತಾರೆ. ಅವರನ್ಯಾಕೆ ಬಂಧಿಸುವುದಿಲ್ಲ?” ಎಂದು ಪ್ರಶ್ನಿಸಿದ್ದರು.
ಚಿಕ್ಕಮಗಳೂರಿನ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ದೇವಾಲಯದ ಅರ್ಚಕರಾದ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ್ ಎಂಬವರಿಂದ ಹುಲಿ ಉಗುರಿನ ಮೂರು ಲಾಕೆಟ್ ವಶಕ್ಕೆ ಪಡೆದು ಬಂಧಿಸಿದ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರರು ಇಮಾಮ್ ಗಳು ಮತ್ತು ದರ್ಗಾದ ನವಿಲು ಗರಿಯ ಚರ್ಚೆಯನ್ನು ಮುನ್ನಲೆಗೆ ತಂದಿದ್ದರು.
ಅಕ್ಟೋಬರ್ 01 ಬುಧವಾರದಂದು ತೀರ್ಥಹಳ್ಳಿಯ ಬಸವನಗದ್ದೆಯ ಬ್ರಾಹ್ಮಣ ಕುಟುಂಬದ ಪ್ರಸನ್ನ ಅವರ ಮನೆಯಲ್ಲಿ ಜಿಂಕೆ ಮತ್ತು ಕಾಡುಕೋಣದ ಕೊಂಬುಗಳಿದ್ದು, ಅದರ ಜೊತೆಗೆ ಹಲವಾರು ಗಂಧದ ಕೊರಡುಗಳಿದ್ದವು. ಇವೆಲ್ಲವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡು ಮನೆಯ ಸದಸ್ಯರನ್ನು ಬಂಧಿಸಲು ಮುಂದಾಗಿದ್ದರು. ತಕ್ಷಣ ಸ್ಥಳಕ್ಕೆ ಬಂದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅರಣ್ಯಾಧಿಕಾರಿಗಳ ಈ ನಡೆ ಖಂಡಿಸಿ, ಗ್ರಾಮಸ್ಥರೊಂದಿಗೆ ಪ್ರತಿಭಟಿಸಿದರು. ಈ ವೇಳೆ ಅಧಿಕಾರಿಗಳ ಜೊತೆ ಮಾತನಾಡಿದ ಅರಗ ಜ್ಞಾನೇಂದ್ರ “ಜಿಂಕೆ ಕೊಂಬುಗಳು ಇವರ ಅಜ್ಜನ ಕಾಲದ್ದು. ಜಿಂಕೆ ಕೊಂದು ಕೊಂಬು ತಂದಿದ್ದಲ್ಲ. ಪ್ರಾಯವಾದ ಜಿಂಕೆಗಳು ತಮ್ಮ ಕೊಂಬನ್ನು ತಾವೇ ಉದುರಿಸುತ್ತವೆ. ಅದನ್ನು ಹೆಕ್ಕಿ ತಂದಿದ್ದು. ಇನ್ನು, ಗಂಧದ ಕೊರಡು ಮಾರಾಟಕ್ಕಾಗಿ ತಂದಿರುವುದಲ್ಲ. ತೀರ್ಥಹಳ್ಳಿಯ ಹಣಗೆರೆಯಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ದರ್ಗಾ ಇದೆ. ಆ ದರ್ಗಾಕ್ಕೆ ಗಂಧ ಈ ಬ್ರಾಹ್ಮಣರ ಮನೆಯಿಂದಲೇ ಹೋಗಬೇಕು. ಅದಕ್ಕಾಗಿ ಗಂಧದ ಕೊರಡು ಶೇಖರಿಸಿಡಲಾಗಿದೆ” ಎಂದರು.
ಅರ್ಚಕರನ್ನು ಹುಲಿ ಉಗುರು ಸಂಗ್ರಹ ಸಂಬಂಧ ಬಂಧಿಸಿದಾಗ ನವಿಲು ಗರಿ ಬಳಕೆ ಮಾಡುವ ದರ್ಗಾದ ಇಮಾಮ್ ರನ್ನು ಯಾಕೆ ಬಂಧಿಸಲ್ಲ ಎಂದು ಕೇಳುವ ಅರಗ ಜ್ಞಾನೇಂದ್ರರು, ಬ್ರಾಹ್ಮಣರನ್ನು ಬಂಧಿಸಬಾರದು ಎನ್ನುವುದಕ್ಕೆ ಹಣಗೆರೆಯ ದರ್ಗಾದ ಸೌಹಾರ್ದತೆಯನ್ನು ಗುರಾಣಿಯಾಗಿ ಬಳಸುತ್ತಾರೆ.
ತೀರ್ಥಹಳ್ಳಿ ತಾಲೂಕು ಹಜರತ್ ಸೈಯ್ಯದ್ ಸಾದತ್ ಸ್ವಾಮಿ ದರ್ಗಾ, ಚೌಡೇಶ್ವರಿ ದೇವಸ್ಥಾನ ಹಣಗೆರೆ ಕಟ್ಟೆಯಲ್ಲಿ ಗಂಧ ಉತ್ಸವ ಮತ್ತು ಉರುಸ್ ಉತ್ಸವ ಪ್ರತೀ ವರ್ಷ ನಡೆಯುತ್ತಿದೆ. ಅಂದು ಸಂಜೆ ಬಸವನಗದ್ದೆ ಬಿ.ಪಿ. ತಿಮ್ಮಪ್ಪಯ್ಯನವರ ಮನೆಯಲ್ಲಿ ತೇಯ್ದ ಶ್ರೀಗಂಧ ಪ್ರಸಾದ ತಂದ ಬಳಿಕ ಸಂಜೆ 7 ಗಂಟೆಗೆ ನಮಾಜ್ ನಂತರ ಗಂಧ ಏರಿಸಲ್ಪಡುವ ಮೂಲಕ ಉರೂಸ್ ಆರಂಭಗೊಳ್ಳುತ್ತದೆ. ಇದು ಈ ನೆಲದ ನಿಜವಾದ ಸಂಸ್ಕೃತಿ. ಸೈಯ್ಯದ್ ಸಾದತ್ ಮತ್ತು ಚೌಡೇಶ್ವರಿ ಒಟ್ಟಿಗಿದ್ದು ಆರಾಧನೆಗೊಳ ಪಡುವುದೇ ನಮ್ಮ ನೆಲದ ಸೌಂದರ್ಯ. ಈ ರೀತಿಯ ಸೌಹಾರ್ದತೆಯನ್ನು ಹಾಳುಗೆಡಹುವ ಮೂಲಕವೇ ರಾಜಕಾರಣ ಮಾಡುವವರು ತಮ್ಮ ರಕ್ಷಣೆಗಾಗಿ ಮಾತ್ರ ಅದೇ ಸೌಹಾರ್ದತೆಯನ್ನು ಬಳಸಿಕೊಳ್ಳುತ್ತಾರೆ.
ಕೋಮು ರಾಜಕಾರಣಕ್ಕಾಗಿ ಅನಾವಶ್ಯಕವಾಗಿ ದರ್ಗಾವನ್ನೋ, ಮಸೀದಿಯನ್ನೋ, ಮಂದಿರ, ಚರ್ಚ್ ಗಳನ್ನೋ ಎಳೆದು ತರುವುದು ಯಾಕೆ ? ಯಾವುದೋ ಅರ್ಚಕನನ್ನು ಹುಲಿ ಉಗುರು ಪ್ರಕರಣಕ್ಕೆ ಬಂಧಿಸಿದರೆ, ಆ ಆರ್ಚಕನಿಗೆ ಸಂಬಂಧವೇ ಇಲ್ಲದ ದರ್ಗಾದ ಇಮಾಮ್ ರನ್ನು ಯಾಕೆ ಬಂಧಿಸಬೇಕು ? ಸುಖಾಸುಮ್ಮನೆ ರಾಜಕಾರಣದಲ್ಲಿ ಮುಸ್ಲೀಮರನ್ನು ಎಳೆದು ತರುವ ಚಾಳಿಯಿದು. ಆದರೆ ತಮ್ಮನ್ನು ರಕ್ಷಿಸಿಕೊಳ್ಳಲು ಅದೇ ಮುಸ್ಲೀಮರ ಭಾವೈಕ್ಯತಾ ಕೇಂದ್ರಗಳನ್ನು ಹಿಂದುತ್ವವಾದಿಗಳು ಬಳಸಿಕೊಳ್ಳುತ್ತಾರೆ. ಬ್ರಾಹ್ಮಣರು ಮಾತ್ರವಲ್ಲ, ನಾವು ನೀವು ಎಲ್ಲರೂ ಬದುಕಿ ಕೊಳ್ಳಲು, ದೌರ್ಜನ್ಯಗಳಿಂದ ಬಚಾವಾಗಲು ಸೌಹಾರ್ದತೆಯೊಂದೇ ದಾರಿ ಎಂಬುದನ್ನು ಹಿಂದುತ್ವವಾದಿಗಳು ಅರ್ಥ ಮಾಡಿಕೊಳ್ಳಬೇಕು.