ದ.ಕ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ನಿಂದ ಬಿಲ್ಲವರಿಗೆ ಟಿಕೆಟ್ ಗ್ಯಾರಂಟಿ.?

ಕರಾವಳಿ

ಪನಾಮ ಧಣಿ ಹೆಸರು ಮುಂಚೂಣಿಯಲ್ಲಿ.! ಜೊತೆಗೆ ಇನ್ನಷ್ಟು ಹೆಸರುಗಳು.. ಇಲ್ಲಿದೆ ಡೀಟೈಲ್ಸ್

ಲೋಕಸಭಾ ಚುನಾವಣೆಗೆ ಐದಾರು ತಿಂಗಳು ಮಾತ್ರ ಉಳಿದಿದ್ದು, ಎಂ.ಪಿ ಸೀಟಿಗಾಗಿ ಹಲವು ಪಕ್ಷಗಳ ನಾಯಕರಿಂದ ಟಿಕೆಟ್ ಗಿಟ್ಟಿಸಿಕೊಳ್ಳುವ ಕಸರತ್ತು ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅನಾಯಾಸವಾಗಿ ಗೆಲ್ಲುತ್ತಿದ್ದಾರೆ. ಮುಂದಿನ ಬಾರಿಯೂ ಬಿಜೆಪಿಯಿಂದ ಕಟೀಲು ರಿಗೆ ಟಿಕೆಟ್ ಫಿಕ್ಸ್ ಆಗಿದ್ದು, ಕಾಂಗ್ರೆಸ್ ನಿಂದ ಯಾರು ಕಣಕ್ಕಿಳಿಯಲಿದ್ದಾರೆ ಅನ್ನುವ ಕುತೂಹಲ ಗರಿಗೆದರಿದೆ.

ದ.ಕ ಜಿಲ್ಲೆಯಲ್ಲಿ ಬಿಲ್ಲವ ಕೋಟಾದಿಂದ ಜನಾರ್ಧನ ಪೂಜಾರಿ ಸತತವಾಗಿ ಗೆಲ್ಲುತ್ತಾ ಬಂದಿದ್ದು, ಹೊಸ ಮುಖವಾಗಿದ್ದ ಕಟೀಲು ಎದುರು ಸೋತಿದ್ದರು. ಆ ನಂತರ ಬಿಜೆಪಿ ಇಲ್ಲಿ ಸ್ಥಾನವನ್ನು ಗಟ್ಟಿಗೊಳಿಸುತ್ತಾ ಬಂದಿದ್ದರೂ, ಪ್ರತಿ ಚುನಾವಣೆಗೂ ಗೆಲ್ಲುವ ಮಾರ್ಜಿನ್ ಅನ್ನು ಹೆಚ್ಚಿಸುತ್ತಾ ಬಂದಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಲ್ಲವ ಅಭ್ಯರ್ಥಿ ಬದಲಿಗೆ ಬಂಟ ಅಭ್ಯರ್ಥಿಗೆ ಟಿಕೆಟ್ ನೀಡಿ ಗೆಲ್ಲುವ ರಣತಂತ್ರ ನಡೆಸಿದರೂ ಮಿಥುನ್ ರೈ ಭಾರೀ ಅಂತರದಿಂದ ಸೋತಿದ್ದರು.

ಆದರೆ ಈ ಬಾರಿ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಬಿಲ್ಲವ ಅಭ್ಯರ್ಥಿಗಳಿಗೆ ಮಣೆ ಹಾಕಲು ನಿರ್ಧರಿಸಿದೆ ಅನ್ನುವ ಮಾಹಿತಿ ಲಭ್ಯವಾಗಿದೆ. ಈ ತಿಂಗಳ ಅಂತ್ಯದಲ್ಲಿ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಘೋಷಿಸಿದ್ದು, ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ತಾಳ ಮೇಳ ಆರಂಭವಾಗಿದೆ.

ದ.ಕ ಜಿಲ್ಲೆಯಲ್ಲಿ ಈ ಬಾರಿ ಅಚ್ಚರಿಯ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಮುಂದಾಗಿದೆ ಎಂದು ತಿಳಿದು ಬಂದಿದ್ದು, ರೇಸಿನಲ್ಲಿ ಉದ್ಯಮಿ, ಪನಾಮ ಧಣಿ ವಿವೇಕ್ ರಾಜ್ ಪೂಜಾರಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ವಿವೇಕ್ ರಾಜ್ ಪೂಜಾರಿ ಗೆ ಟಿಕೆಟ್ ಕನ್ಫರ್ಮ್ ಅನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಇದರ ಜೊತೆಗೆ ಡಿಸಿಸಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ, ಬಿ ಕೆ ಹರಿಪ್ರಸಾದ್ ಅವರ ಹೆಸರುಗಳು ಕೂಡ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿದ್ದು ಕಟೀಲು ಅವರನ್ನು ಸಮರ್ಥವಾಗಿ ಕಟ್ಟಿ ಹಾಕಬಲ್ಲ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಲೆಕ್ಕಾಚಾರಗಳು ಶುರುವಾಗಿದೆ. ಹೈಕಮಾಂಡ್ ಹೊಸ ಅಭ್ಯರ್ಥಿ ನೆಲೆಯಲ್ಲಿ ವಿವೇಕ್ ರಾಜ್ ಪೂಜಾರಿ ಅವರನ್ನು ಕಣಕ್ಕಿಳಿಸಿದರೆ ಗ್ರೌಂಡ್ ರಿಯಾಲಿಟಿ ಪ್ರಕಾರ ಗೆಲ್ಲಲು ಸಾಧ್ಯವೇ? ವಿವೇಕ್ ರಾಜ್ ಪೂಜಾರಿ ಮುಖಪರಿಚಯ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರಿಗೆ ಗೊತ್ತೆ ಇಲ್ಲ. ಅವರ ಹೆಸರು ಕೂಡ ಶೇಕಡಾ 90 ರಷ್ಟು ಮತದಾರರಿಗೆ ತಿಳಿದಿಲ್ಲ. ಉದ್ಯಮಿ, ದುಡ್ಡಿದೆ ಎಂದು ಟಿಕೆಟ್ ಕೊಟ್ಟರೆ ಇಲ್ಲಿ ಬಿಜೆಪಿ ಅಭ್ಯರ್ಥಿ ಕಳೆದ ಬಾರಿಗಿಂತ ಭಾರೀ ಅಂತರದಿಂದ ಗೆಲ್ಲುವುದು ಶತಸಿದ್ಧ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಡಗು-ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಆಗಿ ಅಲ್ಲಿ ಕಾಂಗ್ರೆಸ್ ಗೆದ್ದಿದೆ ಅನ್ನುವುದು ವಿವೇಕ್ ರಾಜ್ ಪೂಜಾರಿ ಗೆ ಇರುವ ಪ್ಲಸ್ ಪಾಯಿಂಟ್. ಆದರೆ ಅಲ್ಲಿ ಅಭ್ಯರ್ಥಿಗಳ ವರ್ಚಸ್ಸು ಕೆಲಸ ಮಾಡಿತ್ತು. ದ.ಕ ಜಿಲ್ಲೆಯ ಉಸ್ತುವಾರಿ ವಹಿಸಿ ಕನಿಷ್ಠ 4 ಸ್ಥಾನ ಗೆಲ್ಲಿಸಿ ಕೊಟ್ಟಿದ್ದರೆ ವಿವೇಕ್ ರಾಜ್ ಸಾಮರ್ಥ್ಯ ಪರಿಗಣಿಸಬಹುದಿತ್ತು ಎಂದು ಕಾಂಗ್ರೆಸ್ ನಾಯಕರಿಂದಲೇ ಈ ಮಾತು ಕೇಳಿ ಬರುತ್ತಿದೆ. ಇನ್ನು ವ್ಯವಹಾರ, ದುಡ್ಡಿನ ವಿಚಾರದಲ್ಲಿ ಪನಾಮ ಧಣಿ ಕೈ ಬಾಯಿ ಶುದ್ಧ ಇಟ್ಟುಕೊಂಡಿಲ್ಲ ಅನ್ನುವ ಆರೋಪಗಳಿವೆ. ಇಂತಹ ನಾಯಕರಿಗೆ ಮಣೆ ಹಾಕಿ ಟಿಕೆಟ್ ನೀಡಿದರೆ ಕಟೀಲು 3 ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಗೆಲ್ಲಬಹುದು ಅನ್ನುವ ಸುದ್ದಿಗಳು ಹರಿದಾಡುತ್ತಿವೆ.

ಇನ್ನು ಡಿಸಿಸಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಬಿಜೆಪಿ ಅಭ್ಯರ್ಥಿ ಫೀಲ್ಡಿಗೆ ಹೋಗುವ ಅಗತ್ಯವಿಲ್ಲ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಡಿಸಿಸಿ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಲಗಾಡಿ ತೆಗೆದ ಇಂತಹವರಿಗೆ ಎಂ ಪಿ ಸೀಟು ನೀಡಿದರೆ ಕಾರ್ಯಕರ್ತರು ಭ್ರಮನಿರಸನ ಗೊಳ್ಳುವುದು ಖಚಿತ. ಜೊತೆಗೆ ಅಲ್ಪಸಂಖ್ಯಾತರು ಹರೀಶ್ ಕುಮಾರ್ ನಡವಳಿಕೆಯಿಂದ ಬೇಸತ್ತಿದ್ದು, ಅಲ್ಫಸಂಖ್ಯಾತ ಮತಗಳು ಒಡೆದು ಹೋಗುವ ಸಾಧ್ಯತೆ ಇದೆ.

ಇನ್ನು ಬಿ ಕೆ ಹರಿಪ್ರಸಾದ್ ಅಭ್ಯರ್ಥಿ ಆದರೆ ಓಕೆ ಅಂದರೂ, ಗ್ರೌಂಡ್ ಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಇದ್ದಾರ.? ಅನ್ನುವುದು ಅನುಮಾನ. ಸಿದ್ದರಾಮಯ್ಯರೊಂದಿಗೆ ಮುನಿಸಿಕೊಂಡಿರುವುದು ಮಾತ್ರ ಇವರಲ್ಲಿರುವ ಮೈನಸ್ ಪಾಯಿಂಟ್. ಶುದ್ಧ ಜಾತಿವಾದಿಯಾಗಿರುವ ಹರಿಪ್ರಸಾದ್ ರಿಗೆ ಬಿಲ್ಲವರೆ ಓಟು ಹಾಕುತ್ತಾರಾ ಅನ್ನುವುದು ಯಕ್ಷಪ್ರಶ್ನೆ.

ಇನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ರ ಬಗ್ಗೆ ನಾಯಕರ ಮಧ್ಯೆ ಭಿನ್ನಾಭಿಪ್ರಾಯವಿದ್ದರೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಧಾರ್ಮಿಕ ರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ, ಸರಳ ಸೌಮ್ಯ ಸ್ವಭಾವದ ಪದ್ಮರಾಜ್ ರಿಗೆ ಟಿಕೆಟ್ ದೊರೆತರೆ ದೊಡ್ಡ ಮಟ್ಟದ ಫೈಟ್ ನಡೆಯಬಹುದು ಅನ್ನುವ ಲೆಕ್ಕಾಚಾರಗಳಿವೆ.

ಒಟ್ಟಾರೆ ದ.ಕ ಜಿಲ್ಲೆಯಲ್ಲಿ ಬಿಲ್ಲವರಿಗೆ ಟಿಕೆಟ್ ಮಣೆ ಹಾಕುವುದು ಫೈನಲ್ ಆಗಿದೆ ಅನ್ನುವ ಮಾತುಗಳು ಕೇಳಿ ಬರುತ್ತಿದ್ದು, ಅಭ್ಯರ್ಥಿ ಯಾರು ಅನ್ನುವುದಷ್ಟೇ ಇರುವ ಕುತೂಹಲ. ಹೈಕಮಾಂಡ್ ಸಮರ್ಥ, ಬಿಜೆಪಿ ಸೋಲಿಸುವ ಕೆಪಾಸಿಟಿ ಇರುವವರನ್ನು ಆಯ್ಕೆ ಮಾಡಿದರೆ ಉತ್ತಮ. ಕಾರ್ಯಕರ್ತರೊಂದಿಗೆ ಸಂವಹನ ಇರುವ ನಾಯಕರನ್ನು ಆರಿಸಿದರೆ ಮಾತ್ರ ಗೆಲ್ಲಬಹುದು. ಬಿಜೆಪಿ ಕೇಡರ್ ಬೈಸ್ ಪಕ್ಷವಾಗಿದ್ದರಿಂದ ಜೊತೆಗೆ ಮೋದಿ ಹೆಸರು ಬಳಸಿ ಯಾವ ಅಭ್ಯರ್ಥಿಗೂ ಟಿಕೆಟ್ ನೀಡಿದರೂ ಗೆಲ್ಲಬಹುದು. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದು ಸಾಧ್ಯವಿಲ್ಲ. ಕಾರ್ಯಕರ್ತರ ಹೃದಯ ಗೆಲ್ಲುವ, ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಿದರೆ ಮಾತ್ರ ಗೆಲುವು ಕಾಣಬಹುದು. ಇಲ್ಲವಾದರೆ ದ.ಕ ಜಿಲ್ಲೆ ಕಾಂಗ್ರೆಸ್ ಮರೆತು ಬಿಡುವುದು ಒಳ್ಳೆಯದು.