ನೋಂದಾಯಿತ ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ) ಕ್ಯಾನ್ಸಲೇಷನ್ ಆಫ್ ಜಿಪಿಎ ಹೆಸರಿನಲ್ಲಿ ರದ್ದುಗೊಳಿಸಿ ಮತ್ತೊಂದು ಹೆಸರಿನಲ್ಲಿ ನೋಂದಾಯಿಸುವ ಅಧಿಕಾರ ಉಪ ನೋಂದಣಾಧಿಕಾರಿಗಳಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಬಾಗಲಕೋಟೆಯ ಮಧುಮತಿ ತಮ್ಮ ಹಾಗೂ ಪತಿಯ ಹೆಸರಿನಲ್ಲಿ ಜಂಟಿಯಾಗಿ ನೋಂದಾಯಿಸಿದ್ದ ಜಿಪಿಎ ಅನ್ನು ರದ್ಜುಗೊಳಿಸಲು ಬಯಸಿದ್ದರು. ಆದರೆ ಅದನ್ನು ನಿರಾಕರಿಸಿ ಬೆಳಗಾವಿಯ ಸಬ್ ರಿಜಿಸ್ಟ್ರಾರ್ ನೀಡಿದ್ದ ಹಿಂಬರಹ ಪ್ರಶ್ನಿಸಿ ಮಧುಮತಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ರಿಜಿಸ್ಟ್ರಾರ್|ಸಬ್ ರಿಜಿಸ್ಟ್ರಾರ್ ಗೆ ಅಗತ್ಯ ಪುರಾವೆಗಳೊಂದಿಗೆ ದಾಖಲೆಗಳ ನೋಂದಾವಣೆಯನ್ನು ಮಾಡುವುದಿಲ್ಲವೆಂದು ಹೇಳುವ ಯಾವ ಅಧಿಕಾರವೂ ಇಲ್ಲ. ಆದರೆ 1908 ರ ರಿಜಿಸ್ಟ್ರೇಷನ್ ಕಾಯಿದೆ ಅನ್ವಯ ರಿಜಿಸ್ಟ್ರಾರ್ ಗೆ ನೋಂದಾಯಿತ ದಾಖಲೆಯನ್ನು ರದ್ದುಗೊಳಿಸುವ ಯಾವುದೇ ಅಧಿಕಾರ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
” ಕ್ರಯಪತ್ರ ಅಥವಾ ಡೀಡ್ ಅನ್ನು ರದ್ದುಗೊಳಿಸುವುದು, ಅದನ್ನು ವಜಾ ಮಾಡುವುದಕ್ಕೆ ಸಮನಾದುದು. ಕ್ರಯಪತ್ರ ರದ್ದು ಮಾಡುವುದು, ಒಪ್ಪಂದವನ್ನು ವಜಾಗೊಳಿಸುವುದು ಅಥವಾ ವಜಾಗೊಳಿಸಿದಂತೆ. ಒಪ್ಪಂದದ ವಿಚಾರಗಳಲ್ಲಿ ವಜಾ ಮಾಡುವುದು (ರಿಷಿಷನ್) ಪದವನ್ನು ರದ್ದು ಮಾಡುವುದಕ್ಕೆ ಬಳಸಲಾಗುವುದು. ಆದ್ದರಿಂದ ಒಮ್ಮೆ ವ್ಯಕ್ತಿ ದಾಖಲೆಯನ್ನು ನೋಂದಾಯಿಸಿದರೆ ಮತ್ತು ನಂತರ ಅದನ್ನು ರದ್ದುಗೊಳಿಸಲು ಬಯಸಿದರೆ ಆಗ ಆ ಪ್ರಕರಣವನ್ನು ಭಾರತೀಯ ಒಪ್ಪಂದದ ಕಾಯಿದೆ ಸೆಕ್ಷನ್ 62 ರಡಿ ನೋಡಬೇಕಾಗುತ್ತದೆ” ಎಂದು ನ್ಯಾಯಾಲಯ ಆದೇಶಿಸಿದೆ.
“ಡೀಡ್ ರದ್ದುಮಾಡಬೇಕಾದರೆ ಅದನ್ನು ಎರಡು ಕಡೆಯಿಂದ ಮಾಡಬೇಕಾಗುತ್ತದೆ. ಒಮ್ಮೆ ನೋಂದಾಯಿತ ದಾಖಲೆ ಜಾರಿಯಾದರೆ, ಅದನ್ನು ರದ್ದುಗೊಳಿಸಲು ಆ ವ್ಯಕ್ತಿ ಬಯಸಿದರೆ, ಆಗ ವಿಶೇಷ ಪರಿಹಾರ ಕಾಯಿದೆ ಸೆಕ್ಷನ್ 31 ರಡಿ ಲಭ್ಯವಿರುವ ಪರಿಹಾರವನ್ನು ಅವರು ಪಡೆದುಕೊಳ್ಳಬೇಕಾಗುತ್ತದೆ. ಆದರೆ ಭಾರತೀಯ ನೋಂದಣಿ ಕಾಯಿದೆ 1908 ರಲ್ಲಿ ಅದಕ್ಕೆ ಯಾವುದೇ ಪರಿಹಾರ ಇಲ್ಲ. ಹಾಗಾಗಿ ಉಪನೋಂದಣಾಧಿಕಾರಿಗೆ ನೋಂದಾಯಿತ ಜಿಪಿಎ ರದ್ದುಗೊಳಿಸುವ ಅಧಿಕಾರ ಇಲ್ಲ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರರು ತಮ್ಮ ಹಾಗೂ ಪತಿ ಹೆಸರಿನಲ್ಲಿ ತಮ್ಮ ವಹಿವಾಟು ನಿಯಂತ್ರಣ, ಆದಾಯ ತೆರಿಗೆ ಪಾವತಿ ಮತ್ತು ಅಡವಿಟ್ಟ ಆಸ್ತಿಗಾಗಿ ತಮ್ಮಲ್ಲಿರುವ ಹಣವನ್ನು ಪಾವತಿಸಲು ಜಂಟಿಯಾಗಿ ಜಿಪಿಎ ನೋಂದಣಿ ಮಾಡಿಸಿಕೊಂಡಿದ್ದರು. ನಂತರ ಅದನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ರದ್ದುಮಾಡಲಾಗದು ಎಂದು ಉಪ ನೋಂದಣಾಧಿಕಾರಿ ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.