ಬೆಂಗಳೂರು: ಗಣಿ ಇಲಾಖೆ ಭೂ ವಿಜ್ಞಾನಿಯ ಕೊಲೆ ಪೂರ್ವ ನಿಯೋಜಿತ ಕೃತ್ಯ; ಗಣಿ ಮಾಫಿಯಾ ಶಂಕೆ

ರಾಜ್ಯ

ರಾಜಧಾನಿ ಬೆಂಗಳೂರಿನಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಪ್ರತಿಮಾ ಕೊಲೆ ಘಟನೆಗೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ಮಾಹಿತಿಯೊಂದನ್ನು ಲಭ್ಯವಾಗಿದ್ದು, ಕಲ್ಲು ಕ್ವಾರಿ ನಿಲ್ಲಿಸಿದ್ದಕ್ಕೆ ಪ್ರತಿಮಾ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಗಣಿ-ಭೂ ವಿಜ್ಞಾನಿ ಅಧಿಕಾರಿ ಪ್ರತಿಮೆ ಹತ್ಯೆ ಸಂಬಂಧ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಕಲ್ಲು ಕ್ವಾರಿ ನಿಲ್ಲಿಸಿದ್ದಕ್ಕೆ ಪ್ರತಿಮಾ ಕೊಲೆ ಮಾಡಿರುವ ಅನುಮಾನ ಇದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಪ್ರತಿಮಾ ಅವರು ಅಕ್ರಮ ಗಣಿಗಾರಿಕೆ ಸಂಬಂಧ ವರದಿ ನೀಡಿದ್ದರು. ಸರ್ವೆ ನಂಬರ್ 177, 179 ಭಾಗದಲ್ಲಿ ದೂರು ಬಂದಿತ್ತು.

ಬೆಂಗಳೂರು ನಗರ ಜಿಲ್ಲೆ ಹುಣಸಮಾರನಹಳ್ಳಿ ಗ್ರಾಮದಲ್ಲಿ ಲೈಸೆನ್ಸ್ ಪಡೆಯದೇ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರು. ಹೀಗಾಗಿ ದೂರಿನ್ವಯ ಸ್ಥಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಬಳಿಕ ಕಲ್ಲು ಕ್ವಾರಿಯನ್ನು ಸ್ಥಗಿತಗೊಳಿಸಿದ್ದಕ್ಕೆ ಪ್ರತಿಮಾ ಕೊಲೆ ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.

ರಾಜಧಾನಿ ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ ಮಹಿಳೆಯ ಕೊಲೆ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ. ಬೆಂಗಳೂರಿನ ಗ್ರಾಮಾಂತರ ಭೂಗರ್ಭ ಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಪ್ರತಿಮಾ (37) ಕೊಲೆಯಾದವರು. ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್‌ ಅಪಾರ್ಟ್ಮೆಂಟ್‌ ನಲ್ಲಿ ಈ ಘಟನೆ ನಡೆದಿದೆ. ಪ್ರತಿಮಾ ದೊಡ್ಡಕಲ್ಲಸಂದ್ರದ ಕುವೆಂಪು ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಪತಿ ಮತ್ತು ಮಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ. ಪ್ರತಿಮಾ ಅವರು ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಶನಿವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಪ್ರತಿಮಾ ಅವರನ್ನು ಚಾಲಕ ಮನೆಗೆ ಡ್ರಾಪ್ ಮಾಡಿ ಹೊರಟಿದ್ದ. ಪ್ರತಿಮಾ ಅವರಿಗೆ ಅಣ್ಣ ರಾತ್ರಿ ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸದ ಕಾರಣ ಬೆಳಗ್ಗೆ ಬಂದು ನೋಡಿದ್ದಾರೆ. ಈ ವೇಳೆ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.