ಗಣಿ ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆಗೆ ಸಂಬಂಧಿಸಿದಂತೆ, ಪ್ರತಿಮಾ ಅವರ ಹಳೆ ಡ್ರೈವರ್​ ಬಂಧನ

ರಾಜ್ಯ

ರಾಜಧಾನಿ ಬೆಂಗಳೂರಿನಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಪ್ರತಿಮಾ ಕೊಲೆ ಘಟನೆಗೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ಮಾಹಿತಿಯೊಂದನ್ನು ಲಭ್ಯವಾಗಿದ್ದು, ಕಲ್ಲು ಕ್ವಾರಿ ನಿಲ್ಲಿಸಿದ್ದಕ್ಕೆ ಪ್ರತಿಮಾ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಗಣಿ-ಭೂ ವಿಜ್ಞಾನಿ ಅಧಿಕಾರಿ ಪ್ರತಿಮೆ ಹತ್ಯೆ ಸಂಬಂಧ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಕಲ್ಲು ಕ್ವಾರಿ ನಿಲ್ಲಿಸಿದ್ದಕ್ಕೆ ಪ್ರತಿಮಾ ಕೊಲೆ ಮಾಡಿರುವ ಅನುಮಾನ ಇದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಪ್ರತಿಮಾ ಅವರು ಅಕ್ರಮ ಗಣಿಗಾರಿಕೆ ಸಂಬಂಧ ವರದಿ ನೀಡಿದ್ದರು. ಸರ್ವೆ ನಂಬರ್ 177, 179 ಭಾಗದಲ್ಲಿ ದೂರು ಬಂದಿತ್ತು.

ಹುಣಸಮಾರನಹಳ್ಳಿ ಹಾಗೂ ಸೊಣ್ಣಪ್ಪನಹಳ್ಳಿ ಗ್ರಾಮದ 4 ಎಕರೆ 5 ಗುಂಟೆ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆದ ಬಗ್ಗೆ ವರದಿ ಸಿದ್ಧಪಡಿಸಿದ್ದ ಹಿರಿಯ ಭೂ ವಿಜ್ಞಾನಿ ಪ್ರತಿಮಾ, ₹25.35 ಲಕ್ಷ ನಷ್ಟ ಆಗಿರುವುದಾಗಿ ಉಲ್ಲೇಖಿಸಿದ್ದರು ಎಂಬುದು ಗೊತ್ತಾಗಿದೆ.

ಹುಣಸಮಾರನಹಳ್ಳಿ ಗ್ರಾಮದ ಸರ್ವೇ ನಂಬರ್ 177/3, 178/1–2–3, 179 ಮತ್ತು ಸೊಣ್ಣಪ್ಪನಹಳ್ಳಿ ಗ್ರಾಮದ ಸರ್ವೇ ನಂಬರ್ 34/1–2–3 ಹಾಗೂ ಸರ್ವೇ ನಂಬರ್ 17/7–8–9 ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದ ಆರೋಪದಡಿ ಶಾಸಕರೊಬ್ಬರು ಸೇರಿ ನಾಲ್ವರ ವಿರುದ್ಧ ಚಿಕ್ಕಜಾಲ ಠಾಣೆಯಲ್ಲಿ ಜುಲೈನಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದರ ತನಿಖೆ ಪ್ರಗತಿಯಲ್ಲಿದೆ.
ಅಕ್ರಮ ಗಣಿಗಾರಿಕೆ ನಡೆದಿದೆ ಎನ್ನಲಾದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ವರದಿ ಸಿದ್ಧಪಡಿಸಿದ್ದರು. ಜೊತೆಗೆ, ಅಕ್ರಮ ಗಣಿಗಾರಿಕೆ ನಡೆಸಿದ್ದ ಆರೋಪದಡಿ ಶಾಸಕ ಸೇರಿ ಇಬ್ಬರ ವಿರುದ್ಧ ದೇವನಹಳ್ಳಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಸಹ ದಾಖಲಿಸಿದ್ದರು.

ಇದೇ ಪ್ರಕರಣದಲ್ಲಿ ಪ್ರತಿಮಾ ಅವರು ನೀಡಿದ್ದ ಸ್ಥಳ ಪರಿಶೀಲನೆ ವರದಿಯ ಪ್ರತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಜೊತೆಗೆ, ಪ್ರತಿಮಾ ಅವರ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದಿದ್ದ ವ್ಯಕ್ತಿಯೊಬ್ಬರು ಅದನ್ನು ಈಗ ಹಂಚಿಕೊಂಡಿದ್ದಾರೆ
‘4 ಎಕರೆ 5 ಗುಂಟೆ ಜಮೀನಿನಲ್ಲಿ ಅನುಮತಿ ಇಲ್ಲದೇ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದೆ. 4 ಪ್ರದೇಶಗಳಲ್ಲಿ 51,460 ಟನ್‌ ಪ್ರಮಾಣದ ಭೂ ಅಗೆತ ಮಾಡಲಾಗಿದೆ. ಸ್ಥಳದಲ್ಲಿ 5,000 ಟನ್ ಕಟ್ಟಡ ಕಲ್ಲಿನ ದಾಸ್ತಾನು ಇದೆ. 25,876 ಟನ್ ಕಟ್ಟಡ ಕಲ್ಲು ಬೇರೆಡೆ ಸಾಗಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ₹25.35 ಲಕ್ಷ ನಷ್ಟವಾಗಿದೆ’ ಎಂದು ಪ್ರತಿಮಾ ಅವರು ವರದಿಯಲ್ಲಿ ಉಲ್ಲೇಖಿಸಿದ್ದರು.

ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ ಸಂಭದಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಅವರಲ್ಲಿ ಒಬ್ಬನ ಬಗ್ಗೆ ತೀವ್ರವಾದ ಅನುಮಾನ ವಿರುವುದರಿಂದ ಆತನ ವಿಚಾರಣೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಮೂವರಲ್ಲಿ ಕಿರಣ್ ಎಂಬಾತನನ್ನು ಪೊಲೀಸರು ವಶಕ್ಕೆ ​ಪಡೆದಿದ್ದು, ಈತನೇ ಮಹಿಳಾ ಅಧಿಕಾರಿಯನ್ನು ಕೊಲೆ ಮಾಡಿದ್ದಾನೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸುಬ್ರಮಣ್ಯಪುರ ಪೊಲೀಸರು ಪ್ರತಿಮಾ ಅವರ ಕೊಲೆಗೆ ಸಂಬಂಧಿಸಿದಂತೆ ಕಿರಣ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಪ್ರತಿಮಾ ಅವರ ಹಳೆ ಡ್ರೈವರ್​.

ಸದ್ಯ ಹೊರಬಿದ್ದ ಮಾಹಿತಿ ಪ್ರಕಾರ, ವಿಚಾರಣೆ ನಡೆಸಿದ್ದ ವೇಳೆ ಕೊಲೆ ಮಾಡಿದ್ದು ಒಬ್ಬನೇ ಎಂಬುದು ಬಯಲಿಗೆ ಬಂದಿದೆ. ಕಿರಣ್ ಎಂಬಾತನೇ ಈ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಿರಣ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.