ಡೇಟಾ ಕದ್ದ ಕಳ್ಳರು ಸಿಕ್ಕಿಬಿದ್ದು, ನೋಂದಣಿ ಇಲಾಖೆಯ ಮರ್ಯಾದೆ ಬೀದಿ ಪಾಲು
✍️.ಇಸ್ಮಾಯಿಲ್ ಸುನಾಲ್ ವಕೀಲರು
ರಾಜ್ಯದಲ್ಲೊಂದು ಕಾವೇರಿ 2.0 ಎನ್ನುವ ಸೊ ಕಾಲ್ಡ್ “ಸಾಫ್ಟ್ ವೇರ್ ಕ್ರಾಂತಿ” ಯ ಹೆಸರಲ್ಲಿ, ನೋಂದಣಿ ಇಲಾಖೆ ತನ್ನ ನಾಲಾಯಕ್ ಸಾಫ್ಟ್ ವೇರ್ ಜನರ ಮುಂದಿಟ್ಟು ಪ್ರಹಸನ ನಡೆಸುತ್ತಿದೆ. “ಸಾಫ್ಟ್ ವೇರ್ ಕಾವೇರಿ 2.0 ” ಹೆಸರಲ್ಲಿ ಜನರನ್ನು ಸಲ್ಲದ ಸಮಸ್ಯೆಗೆ ದೂಡುವ ಪ್ರಕ್ರಿಯೆಯಲ್ಲಿ ತೊಡಗಿರುವ ನೋಂದಣಿ ಇಲಾಖೆ, ಕಿವಿಯಿದ್ದು ಕುರುಡನಂತಾಗಿ ಹೋಗಿದೆ. ಕಾವೇರಿ 2.0 ಹೆಸರಲ್ಲಿ ನೋಂದಣಿ ಇಲಾಖೆ ಜನರಿಗೆ ಇಲ್ಲ ಸಲ್ಲದ ಸಮಸ್ಯೆಗಳನ್ನು ತಂದು ಗುಡ್ಡೆ ಹಾಕಿದೆ. ಈ ಸಮಸ್ಯೆಗಳನ್ನು ಪರಿಹರಿಸುವಂತೆ ಇಲಾಖೆಯ ಬಳಿ ಏನೇ ಮನವಿ ಮಾಡಿಕೊಂಡರೂ ಇಲಾಖೆ ಪ್ರತಿಸ್ಪಂದಿಸುತ್ತಿಲ್ಲ.
ಕಾವೇರಿ 2.0 ತಂತ್ರಾಂಶ ಜ್ಯಾರಿಯಾದ ಮೇಲೆ ಇಷ್ಟು ಕೋಟಿ ಕಲೆಕ್ಷನ್ ಆಯ್ತು, ಅಷ್ಟು ಕೋಟಿ ವರಮಾನ ಬಂತು ಎಂದು ಹೇಳಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿರುವ ಇಲಾಖೆ ಕಾವೇರಿ 2.0 ತಂತ್ರಾಂಶ ಬರುವ ಮೊದಲು ಯಾವುದೇ ನೋಂದಣಿ ಆಗಿಲ್ಲ, ಸರಕಾರದ ಬೊಕ್ಕಸಕ್ಕೆ ಯಾವುದೇ ಮೊತ್ತ ಬಂದಿಲ್ಲವೆಂಬಂತೆ ಆಡುತ್ತಿದೆ. ಯಾವುದೇ ತಂತ್ರಾಂಶ ಬಂದಾಗಲೂ, ತಂತ್ರಾಂಶವೇ ಇಲ್ಲದೇ ಇದ್ದಾಗಲೂ, ಸರಕಾರದ ಬೊಕ್ಕಸಕ್ಕೆ ಹಣ ತುಂಬಿಕೊಡುತ್ತಿದ್ದರು ದಸ್ತಾವೇಜು ನೋಂದಣಿಯಿಂದಲೇ ಎನ್ನುವ ನಗ್ನ ಸತ್ಯವನ್ನು ನೋಂದಣಿ ಇಲಾಖೆಯನ್ನು ಈಗ ಮುನ್ನೆಡುಸುವರು ಆಡಿಕೊಳ್ಳುವುದನ್ನು ನೋಡಿದಾಗ “ತಾನು ಕೊಕ್ಕೋ ಕೂಗಿದರೆ ಮಾತ್ರ ಲೋಕ ಬೆಳಗುವುದೆಂದು” ಜಂಭದಿಂದ ಮೆರೆಯುತ್ತಿದ್ದ ಅಜ್ಜಿಯ ಕೋಳಿಯ ನೆನಪಾಗುತ್ತದೆ.
ಈ ತಂತ್ರಾಂಶ ನಾವೇ ರೂಪಿಸಿದ್ದು ಎಂದು ಹೇಳುತ್ತಾ ಅಸ್ಸಾಂ, ಪಶ್ಚಿಮ ಬಂಗಾಳ, ಇತ್ಯಾದಿ ಕಡೆಗಳಿಂದ ತಮ್ಮ ತಂತ್ರಾಂಶವನ್ನು ಮೆಚ್ಚಿ ನೋಂದಣಿ ಇಲಾಖೆಗಳು ನಮ್ಮನ್ನು ಸಂಪರ್ಕ್ಸಿತ್ತಿವೆ ಎಂದು ಹೇಳುವ ನಮ್ಮ ರಾಜ್ಯದ ನೋಂದಣಿ ಇಲಾಖೆ, ಆ ರಾಜ್ಯದ ಜನರಿಗೆ ತಂತ್ರಾಂಶ ಎಂದರೆ ಏನೆಂದು ಕಲಿಸಿಕೊಡಬೇಕಾದ ಅವಶ್ಯಕತೆ ಇರುವ ಬಗ್ಗೆ ಮತ್ತು ನಮ್ಮ ರಾಜ್ಯ ತಂತ್ರಾಂಶ ವಿಚಾರದಲ್ಲಿ ಉತ್ತುಂಗದಲ್ಲಿದೆ ಎನ್ನುವುದನ್ನು ಮರೆತಂತಿದೆ. ಸಣ್ಣ ಸಣ್ಣ ಫೈನಾನ್ಸ್ ಕಂಪೆನಿಗಳು ಅತ್ಯುತ್ತಮ ತಂತ್ರಾಂಶಗಳನ್ನು ಬಳಸಿ ಹೆಸರು ಮಾಡುತ್ತಿರುವಾಗ, ನಮ್ಮ ಇಡೀ ರಾಜ್ಯದ ನೋಂದಣಿ ಉಸ್ತುವಾರಿ ನೋಡುತ್ತಿರುವ ನೋಂದಣಿ ಇಲಾಖೆ ದಿನಕ್ಕೊಂದು ಸಮಸ್ಯೆಯನ್ನು ತಂದು ಕೊಳ್ಳುತ್ತಿದೆ. ಹಳೆಯ ತಂತ್ರಾಂಶ ಹಲವು ಪಂಕ್ಚರ್ ಹಾಕಿದ ಟ್ಯೂಬ್’ನಂತಾಗಿದೆ, ಎಂದು ಹೇಳಿ ಹೊಸ ತಂತ್ರಾಂಶ ತಂದಿರುವ ಇಲಾಖೆ, ದಿನಕ್ಕೊಂದರಂತೆ ಪಂಚರ್ ಹಾಕಿ, ಹೊಸ ಬಟ್ಟೆಯನ್ನು ಹೊಲಿದು ಅದಕ್ಕೆ ಮತ್ತೆ ಮತ್ತೆ ತೇಪೆ ಹಚ್ಚಿ, ತಾನು ಹೊಲಿದ ಬಟ್ಟೆ ಅತೀ ಸುಂದರವಾಗಿದೆ” ಎಂದು ಭಾವಿಸಿದ ದರ್ಜಿಯಂತೆ ವರ್ತಿಸಿ ನಗೆಪಾಟಲಿಗೆ ಈಡಾಗಿದೆ. ಮಾತ್ರವಲ್ಲ ಒಬ್ಬನೇ ಒಬ್ಬ ಮಗನೆಂದು ತಂದೆಯೊಬ್ಬ ತನ್ನ ಮಗನನ್ನು ಮತ್ತೆ ಮತ್ತೆ ಏಳು ಬಾರಿ ಮುಂಜಿ ಮಾಡಿದ ಹಾಗಾಗಿದೆ.
ಹೊಸ ತಂತ್ರಾಂಶದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ, ಜನರ ಹಣ ಸುರಕ್ಷಿತವಾಗಿರುತ್ತದೆ ಎಂದು ಹೇಳಿದ್ದ ಇಲಾಖೆ ಸ್ಕ್ಯಾಮರ್ ಗಳು ತಮ್ಮ ಡೇಟಾವನ್ನು ಕದ್ದು ಜನರನ್ನು ವಂಚಿಸುವಾಗ ಕುಂಭಕರ್ಣ ನಿದ್ದೆಯಲ್ಲಿದ್ದು, ಜನರು ನೋಂದಣಿ ಕಚೇರಿಗಳಿಂದಲೇ ಡೇಟಾ ಕಳವು ಆದ ಬಗ್ಗೆ ದೂರು ನೀಡಿದಾಗ, ನಿದ್ದೆಯಲ್ಲೇ ಇದ್ದು, ಡೇಟಾ ಸೋರಿಕೆ ನಮ್ಮ ಕಚೇರಿಯಿಂದಾಗಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿ, ಮತ್ತೆ ಹೊಸ ತಂತ್ರಾಂಶದ ಜತೆ ಹನಿಮೂನ್ ತಯಾರಿಯಲ್ಲಿರುವಾಗಲೇ, ಡೇಟಾ ಕದ್ದ ಕಳ್ಳರು ಸಿಕ್ಕಿಬಿದ್ದು, ನೋಂದಣಿ ಇಲಾಖೆಯ ಮರ್ಯಾದೆಯನ್ನು ಬೀದಿ ಪಾಲು ಮಾಡಿ ಬಿಟ್ಟಾಗ, ತರಾತುರಿಯಲ್ಲಿ ನಿದ್ದೆಯಿಂದ ಎದ್ದಿರುವ ಇಲಾಖೆ ಆಧಾರ್ ನಮೂದಿಸಬೇಡಿ, ದೃಢೀಕೃತ ನಕಲು ನೀಡುವಾಗ ಒಂದೇ ಪುಟ ಮಾತ್ರ ನೋಡಲು ಅನುವು ಎಂದು ಹೇಳುತ್ತಿದೆ.
ಇಲಾಖೆಯದ್ದು ಈ ಕತೆಯಾದರೆ ಇಲಾಖೆಯನ್ನು ಹಿಡಿತದಲ್ಲಿಡಬೇಕಾದ ಸರಕಾರದ ಕತೆ ಇನ್ನೊಂದಾಗಿದೆ. ಈ ಸರಕಾರವನ್ನು ನಡೆಸುವರು ನೋಂದಣಿ ಪ್ರಕ್ರಿಯೆ ಹಾಗೂ ತಂತ್ರಾಂಶಗಳ ವಿಷಯದಲ್ಲಿ ಹೆಬ್ಬೆಟ್ಟು’ಗಳಾಗಿರುವುದು ಇಲಾಖೆಯ ಕೆಲವು ಸ್ಮಾರ್ಟ್ ಅಧಿಕಾರಿಗಳಿಗೆ ವರದಾನವಾಗಿದೆ ಎಂದರೆ ತಪ್ಪಾಗಲಾರದು. ಎಲ್ಲಿಯ ತನಕ ಈ ಔಟ್ಡೇಟೆಡ್ ತಂತ್ರಾಂಶವನ್ನು ಕಸದಬುಟ್ಟಿಗೆ ಹಾಕಿ ಒಳ್ಳೆಯ ಸಾಫ್ಟ್ ವೇರ್ ಕಂಪೆನಿಗಳ ಮೂಲಕ ಸರಳ ಮತ್ತು ಪರಿಣಾಮಕಾರಿ ತಂತ್ರಾಂಶವನ್ನು ಇಲಾಖೆ ಹಾಗೂ ಸರಕಾರ ತರುವುದಿಲ್ಲವೋ ಅಲ್ಲಿಯ ತನಕ ಜನರ ತಲೆ ನೋವು ಇದೇ ರೀತಿ ಮುಂದಿವರಿಯಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಅಲ್ಲಿಯ ತನಕ ಕಂಟ್ರೋಲ್+ ಶಿಫ಼್ಟ್+ ಆರ್, ಟ್ರೆಸುರಿ, ಬ್ರೌಸ್ ಡೇಟಾ ಕ್ಲಿಯರ್, ಶಟ್ ಡೌನ್, ರೀ-ಸ್ಟಾರ್ಟ್, ಪೇಮೆಂಟ್ ಫೇಲ್ಯೂರ್, ಪೆಂಡಿಂಗ್ ಬಿಫೋರ್ ದಿ ಪೇಮೆಂಟ್ ಗೇಟ್ ವೇ ಇತ್ಯಾದಿ ಪದಗಳು ನಮ್ಮ ದಿನಚರಿಯ ಅವಿಭಾಜ್ಯ ಅಂಗಳಾಗಿ ಮುಂದೊಂದು ದಿನ ನಾವು ನೀವೆಲ್ಲರೂ ಮಾನಸಿಕ ಅಸ್ಪತ್ರೆಯ ಆ ಫೇಮಸ್ ವಾರ್ಡಿನ ಅಂಗವಾಗುವುದರಲ್ಲಿ ಸಂಶಯವಿಲ್ಲ.