ಮಂಗಳೂರು: ಮಟ್ಕಾ ದಾಳಿ ಪ್ರಹಸನ.! ದೊಡ್ಡ ಕುಳಗಳನ್ನು ಬಿಟ್ಟು ಚೀಟಿ ಬರೆಯುವವರನ್ನು ಬಂಧಿಸುವ ಪೊಲೀಸರು..!

ಕರಾವಳಿ

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬಾಗಿಲು ಹಾಕಿಕೊಂಡಿದ್ದ ಮಟ್ಕಾ ದಂಧೆ ಇದೀಗ ಮತ್ತೆ ಮೆಲ್ಲನೆ ಚಿಗಿತುಕೊಂಡು ತನ್ನ ಆಟ ಆರಂಭಿಸುತ್ತಿದೆ. ನಗರದ ಹಲವು ಕಡೆ ಮಟ್ಕಾ ಪ್ರತ್ಯಕ್ಷವಾಗಿ ಜನರ ಜೀವ ಹಿಂಡುತ್ತಿದೆ. ಮಂಗಳೂರು ನಗರದ ಹಂಪನಕಟ್ಟೆ ಹಳೇ ಬಸ್ ನಿಲ್ದಾಣ ಸಮೀಪ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಕೇರಳ ಮೂಲದ ಕಿಂಗ್ ಪಿನ್ ಒಬ್ಬರು ಈ ದಂಧೆಯನ್ನು ನಡೆಸುತ್ತಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ. ಇದಿಷ್ಟೇ ಅಲ್ಲ ನಗರದ ಹಲವು ಭಾಗಗಳಲ್ಲಿ, ಹಲವು ಕಟ್ಟಡಗಳಲ್ಲಿ ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ದಂಧೆ ನಡೆಯುತ್ತಿದೆ ಅನ್ನಲಾಗಿದ್ದು, ಪ್ರಭಾವಿಶಾಲಿಗಳು ದಂಧೆ ನಡೆಸುತ್ತಿದ್ದಾರೆ ಅನ್ನುವ ಮಾಹಿತಿ ಇದೆ.

ನಗರದಲ್ಲಿ ಹಲವು ತಿಂಗಳುಗಳಿಂದ ಧೋ ನಂಬರ್ ದಂಧೆಗೆ ಸಂಪೂರ್ಣ ಪುಲಿಸ್ಟಾಪ್ ಬಿದ್ದಿತ್ತು. ಆದರೆ ಇದೀಗ ಮತ್ತೆ ಬಾಗಿಲು ತೆರೆದಿದ್ದು ಮಂಗಳೂರಿನ ನೆಮ್ಮದಿಯನ್ನು ಕಸಿಯುತ್ತಿದೆಯಾ ಅನ್ನುವ ಆತಂಕಕ್ಕೆ ಕಾರಣವಾಗಿದೆ.

ಚೀಟಿ ಬರೆಯುವ ಈ ಮಟ್ಕಾ ದಂಧೆಗೆ ಬಹುತೇಕ ವಿದ್ಯಾರ್ಥಿಗಳು, ಡ್ರೈವರ್ ಗಳು, ಕೂಲಿಕಾರ್ಮಿಕರೇ ಗಿರಾಕಿಗಳು. ದಿನ ನಿತ್ಯ ದುಡಿದ ದುಡ್ಡನ್ನೆಲ್ಲಾ ಚೀಟಿ ಗೆ ಹಾಕಿ ಇವರನ್ನೆ ನಂಬಿಕೊಂಡು ಕೂತಿರುವ ಕುಟುಂಬಗಳು ಉಪವಾಸಕ್ಕೆ ಬೀಳುವಂತಾಗಿದೆ. ಸಂತೋಷದಿಂದಿದ್ದ ಕುಟುಂಬಕ್ಕೆ ಇದೀಗ ಮತ್ತೆ ಬರಸಿಡಿಲು ಆದಂತಾಗಿದೆ.

ಕೇವಲ ಮಂಗಳೂರು ನಗರದಲ್ಲಿ ಮಾತ್ರವಲ್ಲ ಸುರತ್ಕಲ್, ತಲಪಾಡಿ, ಉಳ್ಳಾಲದಲ್ಲೂ ಮಟ್ಕಾ ಅಬ್ಬರ ಶುರುವಾಗಿದೆ. ಮಂಗಳೂರು ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಟ್ರ್ಯಾಕ್ ಬಳಿ ಮಟ್ಕಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ಕು ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಮಟ್ಕಾ ಚೀಟಿ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಸ್ಪೀಕರ್ ಕ್ಷೇತ್ರದಲ್ಲಿಯೇ ಮಟ್ಕಾ ರಾಜಾರೋಷವಾಗಿ ನಡೆಯುತ್ತಿತ್ತು.

ಇನ್ನು ಕೇರಳದ ಗಡಿಭಾಗವಾದ ಮಂಜೇಶ್ವರ, ತಲಪಾಡಿಯಲ್ಲೂ ಮಟ್ಕಾ ದಂಧೆಗೆ ಬ್ರೇಕ್ ಹಾಕುವವರೇ ಇಲ್ಲ. ಕೇರಳದಲ್ಲಿ ಲಾಟರಿ ಅಧಿಕೃತವಾಗಿ ರುವುದರಿಂದ ಕರ್ನಾಟಕದ ಗಡಿ ಭಾಗದಲ್ಲಿ ಒಕ್ಕರಿಸಿಕೊಂಡು ಲಾಟರಿ ಜೊತೆಗೆ ಮಟ್ಕಾ ವನ್ನು ಬಿಂದಾಸ್ ಆಗಿ ಆಡಲಾಗುತ್ತಿದೆ. ಕೇರಳ ಮೂಲದ ಎರಡನೇ ಗಣೇಶ ಈ ದಂಧೆಯ ಕಿಂಗ್ ಪಿನ್ ಆಗಿದ್ದು, ರಾಜಾರೋಷವಾಗಿ ದಂಧೆಯನ್ನು ನಡೆಸುತ್ತಿದ್ದಾರೆ.

ಮಟ್ಕಾ ದಂಧೆಯನ್ನು ಪ್ರಭಾವಶಾಲಿಗಳು, ದೊಡ್ಡ ದೊಡ್ಡ ಕುಳಗಳು ನಿಯಂತ್ರಿಸುತ್ತಿರುವುದರಿಂದ ಅವರ ಬುಡಕ್ಕೆ ಕೈ ಹಾಕುವ ಕೆಲಸ ಪೊಲೀಸರು ಮಾಡುತ್ತಿಲ್ಲ. ಮೇಲಾಧಿಕಾರಿಗಳ ಒತ್ತಡ ಬಂದಾಗ ಪೊಲೀಸರು ಮಟ್ಕಾ ದಾಳಿ ಪ್ರಹಸನ ನಡೆಸಿ ಕೂಲಿ ಕಾರ್ಮಿಕರು, ಚೀಟಿ ಬರೆಯುವವರನ್ನು ಬಂಧಿಸಿ ದೊಡ್ಡ ಸಾಧನೆ ಮಾಡಿದಂತೆ ಪೋಸ್ ಕೊಡುತ್ತಾರೆ. ಮಟ್ಕಾ ಕ್ಕೆ ಬ್ರೇಕ್ ಹಾಕಬೇಕಾದರೆ ಮೊದಲು ದೊಡ್ಡ ದೊಡ್ಡ ಕುಳಗಳಿಗೆ ಬಿಸಿ ಮುಟ್ಟಿಸುವ ಅಗತ್ಯ ಕೆಲಸ ಮಾಡಬೇಕಿದೆ. ಪೊಲೀಸರು ಅದನ್ನು ಮಾಡದೇ ಇರುವುದರಿಂದ ದಾಳಿ ಯಾದ ಮಟ್ಕಾ ಕೇಂದ್ರ ಮರುದಿನವೇ ಬಾಗಿಲು ತೆರೆದು ತನ್ನ ದಂಧೆ ಸಲೀಸಾಗಿ ನಡೆಸುವಂತಾಗಿದೆ.

ಪೊಲೀಸರು ಚೀಟಿ ಬರೆಯುವವರನ್ನು, ಆಟ ಆಡುವ ಕೂಲಿ ಕಾರ್ಮಿಕರನ್ನು ಬಂಧಿಸುವ ಬದಲು ದಂಧೆಯ ಕಿಂಗ್ ಪಿನ್ ಗಳನ್ನು ಮಟ್ಟ ಹಾಕಬೇಕಿದೆ. ನಾಗರೀಕರ ನೆಮ್ಮದಿಯನ್ನು ಕಸಿಯುವ ಇಂತಹ ಧೋ ನಂಬರ್ ದಂಧೆಗೆ ಶಾಶ್ವತ ಬಾಗಿಲು ಹಾಕುವ ಕಾರ್ಯ ನಡೆಯಬೇಕಿದೆ. ಸೇವೆ ಸಲ್ಲಿಸಿದ ಎಲ್ಲಾ ಪ್ರದೇಶಗಳಲ್ಲಿ ದಕ್ಷ, ಪ್ರಾಮಾಣಿಕ, ಅಧಿಕಾರಿಯೆಂಬ ಖ್ಯಾತಿ ಪಡೆದ ಕಮೀಷನರ್ ಅನುಪಮ್ ಅಗರ್ ವಾಲ್ ರವರು ಮಟ್ಕಾ ದಂಧೆಯ ಕಿಂಗ್ ಪಿನ್ ಗಳನ್ನು ಬೆನ್ನುಹತ್ತಬೇಕಾಗಿದೆ ಎಂದು ಪ್ರಜ್ಞಾವಂತರ ಅಂಬೋಣ.