ತನಿಖಾ ಸಂಸ್ಥೆಗಳನ್ನು ಬಳಸಿ ಸರಕಾರ ಮಾಧ್ಯಮ ನಿಯಂತ್ರಿಸುವ ಗೋಜಿಗೆ ಹೋಗಬೇಡಿ: ಸುಪ್ರೀಂ ಕೋರ್ಟ್ ಕಿವಿಮಾತು

ರಾಷ್ಟ್ರೀಯ

ಮಾಧ್ಯಮಗಳ ಕಾರ್ಯ ನಿರ್ವಹಣೆಗೆ ಮುಕ್ತ ಸ್ವಾತಂತ್ರ್ಯ ಇರಬೇಕು ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ಸರ್ಕಾರವು ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸುವ ಗೋಜಿಗೆ ಹೋಗಬಾರದು ಎಂದು ಸೂಚ್ಯವಾಗಿ ತಿಳಿಸಿದೆ.

ಮಾಧ್ಯಮಗಳಿಗೆ ಮುಕ್ತ ಸ್ವಾತಂತ್ರ್ಯ ಕಲ್ಪಿಸಬೇಕು. ಪತ್ರಕರ್ತರ ಡಿಜಿಟಲ್ ಸಾಧನೆಗಳ ಪರಿಶೀಲನೆ ಹಾಗೂ ಜಪ್ತಿಗೆ ಮಾರ್ಗಸೂಚಿ ರಚನೆ ಕೋರಿ ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ “ಕಾನೂನು ಜಾರಿ ಹೊಣೆ ಹೊತ್ತ ಸಂಸ್ಥೆಗಳು ಯಾವುದೇ ರೀತಿಯ ತನಿಖೆ ಕೈಗೊಳ್ಳಲು ಪತ್ರಕರ್ತರು ಅಥವಾ ಮಾಧ್ಯಮ ಸಿಬ್ಬಂದಿಗೆ ಸೇರಿದ ಪೋನ್ ಅಥವಾ ಮತ್ತಿತರ ಡಿಜಿಟಲ್ ಸಾಧನಗಳನ್ನು ಪರಿಶೀಲಿಸಲು ಹಾಗೂ ಜಪ್ತಿ ಮಾಡಿಕೊಳ್ಳುವುದಕ್ಕೆ ಕೇಂದ್ರ ಸರಕಾರ ಪ್ರತ್ಯೇಕ ಮಾರ್ಗಸೂಚಿಗಳನ್ನು ರಚಿಸುವ ಅಗತ್ಯವಿದೆ” ಎಂದು ಹೇಳಿದೆ.

“ಮಾಧ್ಯಮ ಕ್ಷೇತ್ರದ ವ್ಯಕ್ತಿಗಳು ತಮ್ಮ ಡಿಜಿಟಲ್ ಸಾಧನಗಳಲ್ಲಿ ಸುದ್ದಿ ಮೂಲಗಳ ಬಗ್ಗೆ ಗೌಪ್ಯ ಮಾಹಿತಿ ಅಥವಾ ವಿವರ ಹೊಂದಿರುವ ಸಾಧ್ಯತೆ ಇರುತ್ತದೆ. ಜತೆಗೆ ಸಂಪರ್ಕ ಮಾಹಿತಿ ಸಂಗ್ರಹ ಮಾಡಿಕೊಂಡಿರುತ್ತಾರೆ. ಖಾಸಗಿತನದ ಹಕ್ಕಿನ ವಿಚಾರವೂ ಇದರಲ್ಲಿರುತ್ತದೆ. ಇಂಥ ಗಂಭೀರ ವಿಚಾರ ಅಡಕವಾಗಿರುವ ವಿಷಯದಲ್ಲಿ ಕಾನೂನು ಜಾರಿ ಹೊಣೆ ಹೊತ್ತ ಸಂಸ್ಥೆಗಳಿಗೆ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ” ಎಂದು ಪೀಠ ಹೇಳಿದೆ.