ರಾಜ್ಯದಾದ್ಯಂತ ರಿಕ್ರಿಯೇಷನ್ ಕ್ಲಬ್ ಗಳ ಆರಂಭಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಡೆಯೊಡ್ಡಿದ್ದಾರೆ.
ಬೆಂಗಳೂರು ನಗರ ಸಹಿತ ರಾಜ್ಯದ ಯಾವುದೇ ಭಾಗದಲ್ಲಿ ಇಸ್ಪೀಟ್ ಕ್ಲಬ್ ಆರಂಭಕ್ಕೆ ಅನುಮತಿ ನಿರಾಕರಿಸಿರುವ ಅವರು, ಈ ಸೂಚನೆಯನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೂ ಸದ್ಯ ಇಸ್ಪೀಟ್ ಕ್ಲಬ್ ಗಳು ಬಾಗಿಲೆಳೆದುಕೊಂಡಿದೆ. ಈ ಹಿಂದೆ ಮಂಗಳೂರಿನಲ್ಲಿ ಅಲ್ಲಲ್ಲಿ ನಾಯಿಕೊಡೆಯಂತೆ ತಲೆ ಎತ್ತಿ ರಾಜಾರೋಷವಾಗಿ ರಿಕ್ರಿಯೇಷನ್ ಕ್ಲಬ್ ಗಳು ಕಾರ್ಯಾಚರಿಸುತ್ತಿತ್ತು. ವಿದ್ಯಾರ್ಥಿಗಳು, ಯುವ ಸಮುದಾಯ ಇದರ ದಾಸರಾಗಿದ್ದರು. ಉದ್ಯೋಗಕ್ಕೆ ಹೋಗದೆ ಈ ಮಾಯಾಜಾಲಕ್ಕೆ ಮರುಳಾಗಿ ಹಣ ಕಳೆದುಕೊಳ್ಳುತ್ತಿದ್ದರು. ಕೈಯಲ್ಲಿ ದುಡ್ಡು ಇಲ್ಲದಿದ್ದಾಗ ಕಳ್ಳತನಕ್ಕೂ ಯತ್ನಿಸುತ್ತಿದ್ದರು. ತಾಯಂದಿರು ತಮ್ಮ ಮಕ್ಕಳನ್ನು ಜೂಜಾಟದಿಂದ ಹೊರ ತರಲಾಗದೆ ಪರಿತಪಿಸುತ್ತಿದ್ದರು.
ದಂಧೆಕೋರರು ಹೈಕೋರ್ಟ್ ಆದೇಶ ಇದೆ ಎಂದೇಳಿ ಸ್ಥಳೀಯ ಸಂಸ್ಥೆ, ಪೊಲೀಸ್ ಇಲಾಖೆಯಿಂದ ಪರವಾನಿಗೆ ಪಡೆಯುತ್ತಿದ್ದರು. ಹೈಕೋರ್ಟ್ ಸ್ಪಷ್ಟವಾಗಿ ಹಣ ಪಣವಾಗಿಟ್ಟು ಆಡುವ ಜೂಜಾಟಕ್ಕೆ ಸ್ಪಷ್ಟವಾಗಿ ನಿಷೇಧ ಹೇರಿದ್ದರೂ, ಇಲಾಖೆಯ ದಾರಿ ತಪ್ಪಿಸುತ್ತಿದ್ದರು.
ಇದೀಗ ಖುದ್ದು ಡಿಜಿಪಿ ಸ್ಪಷ್ಟವಾಗಿ ಆದೇಶಿಸಿರುವುದರಿಂದ ಬಾಗಿಲು ತೆರೆಯುವ ಅಂದಾಜಿನಲ್ಲಿದ್ದ ಕ್ಲಬ್ ದಂಧೆಕೋರರಿಗೆ ತಣ್ಣೀರು ಎರಚಿದಂತಾಗಿದೆ.