ನವದೆಹಲಿ: ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ನೈತಿಕ ಸಮಿತಿಯು ಗುರುವಾರ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದಿಂದ ಉಚ್ಛಾಟಿಸಲು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ನೇತೃತ್ವದ ಸಮಿತಿಯು ಇಲ್ಲಿ ಸಭೆ ಸೇರಿ, ತನ್ನ ವರದಿಯನ್ನು ಅಂಗೀಕರಿಸಿ ಮಹುವಾರನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡಿದೆ ಎನ್ನಲಾಗಿದೆ.
ನೈತಿಕ ಸಮಿತಿಯ ಒಟ್ಟು 10 ಮಂದಿಯಲ್ಲಿ ಆರು ಸದಸ್ಯರು ವರದಿಯನ್ನು ಅಂಗೀಕರಿಸುವುದನ್ನು ಬೆಂಬಲಿಸಿದ್ದಾರೆ ಮತ್ತು ಉಳಿದ ನಾಲ್ವರು ಅದನ್ನು ವಿರೋಧಿಸಿದರು ಎಂದು ಸಭೆಯ ನಂತರ ಸೋಂಕರ್ ಸುದ್ದಿಗಾರರಿಗೆ ತಿಳಿಸಿದರು.
ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮಕ್ಕಾಗಿ ವರದಿಯನ್ನು ಈಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ಸಭೆಯ ನಂತರ, ನಾಲ್ವರು ವಿರೋಧ ಪಕ್ಷದ ಸದಸ್ಯರು ಸಮಿತಿಯ ಶಿಫಾರಸು ‘ಪೂರ್ವಾಗ್ರಹ ಪೀಡಿತ’ ಮತ್ತು ‘ತಪ್ಪು’ ಎಂದು ಹೇಳಿದ್ದಾರೆ.
ಸಮಿತಿಯು ಮಹುವಾ ಮೊಯಿತ್ರಾ ಹಾಗೂ ಸದನದಲ್ಲಿ ಪ್ರಶ್ನೆ ಕೇಳಲು ಉದ್ಯಮಿಯೊಬ್ಬರಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಲೋಕಸಭಾ ಸ್ಪೀಕರ್ ಓಂ ಸ್ಪೀಕರ್ ಬಿರ್ಲಾ ಅವರಿಗೆ ದೂರು ದಾಖಲಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರನ್ನು ಈ ಹಿಂದೆ ವಿಚಾರಣೆ ನಡೆಸಿತ್ತು