ಮುಗ್ಧ ಕಂದಮ್ಮಗಳನ್ನು ಕೊಲೆಗೈದು ರಣಕೇಕೆಗಷ್ಟೇ ಸೀಮಿತ.!
ಅದು ಇಸ್ರೇಲ್. ಪ್ರಪಂಚದ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಇದು ಒಂದು. ಯಹೂದಿ ಕೋಟೆ ಬೇಧಿಸಲು ವಿಶ್ವದ ಯಾವುದೇ ರಾಷ್ಟ್ರಗಳಿಗೆ ಸಾಧ್ಯವಿಲ್ಲದಷ್ಟು ಪವರ್ ಫುಲ್ ಹೊಂದಿರುವ ಶಕ್ತ ಸೇನೆ ಅವರಲ್ಲಿದೆ. ಒಂದು ಸೊಳ್ಳೆಯೂ ಇಸ್ರೇಲ್ ನುಗ್ಗಲು ಸಾಧ್ಯವಿಲ್ಲದಷ್ಟು ಮಿಲಿಟರಿ ಶಕ್ತಿ ಹೊಂದಿರುವ ದೇಶ ಅದು. ಅದೇ ಇಸ್ರೇಲಿನ ರಕ್ಷಣಾ ವ್ಯೂಹವನ್ನು ಬೇಧಿಸಿ ಹಮಾಸ್ ದಾಳಿಗೈದು ಇಸ್ರೇಲ್ ಬೆವರಿಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಯುದ್ಧ ಘೋಷಿಸಿದ ಇಸ್ರೇಲ್ ಗಾಝಾದ ಮೇಲೆ ಸಮರೋಪಾದಿಯಲ್ಲಿ ಬಾಂಬ್, ಮಿಸೈಲ್ ದಾಳಿ ನಡೆಸಿ ಗಾಝಾ ಪಟ್ಟಣವನ್ನು ಶವಾಗಾರದ ಬಯಲು ಭೂಮಿಯಾಗಿ ಪರಿವರ್ತಿಸಿತ್ತು.
ಯುದ್ಧದ ಅರ್ಥದಲ್ಲಿ ನೋಡುವುದಾದರೆ ಇಸ್ರೇಲ್ ಸಂಪೂರ್ಣ ಮೇಲುಗೈ ಸಾಧಿಸಿದೆ. ಆದರೆ ಈ ವಿಜಯ ಮುಗ್ಧ ಕಂದಮ್ಮಗಳ ಹೆಣದ ಮೇಲೆ ಸಾಧಿಸಿದವುಗಳು.
ಏಕೆಂದರೆ ಯುದ್ದಕ್ಕೂ ಒಂದು ನೀತಿ ನಿಯಮವಿದೆ. ಶತ್ರು ಪಾಳೆಯದ ಸೈನಿಕರನ್ನು ಮಾತ್ರ ಕೊಲ್ಲಬೇಕು. ಅವರ ಮಡದಿ, ಮಕ್ಕಳಿಗೆ ಯಾವುದೇ ಅನ್ಯಾಯ ಮಾಡಬಾರದು. ರೌಡಿಗಳು ಒಬ್ಬ ವ್ಯಕ್ತಿಯನ್ನು ಕೊಲ್ಲಲು ಬಯಸಿದರೆ ಕೊಲ್ಲುವ ವ್ಯಕ್ತಿಯ ಜೊತೆಗೆ ಮಡದಿ, ಮಕ್ಕಳಿದ್ದರೆ ಕೊಲ್ಲದೆ ಮುಂದಿನ ಬಾರಿ ನೋಡೋಣ ಅಂತ ಹೋಗುತ್ತಿದ್ದರು. ಇದು ರೌಡಿಸಂ ಫೀಲ್ಡಿನಲ್ಲಿದ್ದ ಮಾನವೀಯ ಮುಖಗಳು.
ಯುದ್ಧದಲ್ಲೂ ಇಂತಹ ಮಾನವೀಯ ಮುಖಗಳಿವೆ. ಅದನ್ನು ಪಾಲಿಸದಿದ್ದರೆ ಆತ ಯೋಧನಾಗಲಾರ, ಬರೀ ಷಂಡನಷ್ಟೇ. ಆದರೆ ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಮಾನವೀಯತೆಯ ಅಂಶಗಳನ್ನು ಬದಿಗೊತ್ತಿ ಹಸುಗೂಸು ಕಂದಮ್ಮಗಳು, ವೃದ್ಧರು, ಮಹಿಳೆಯರ ಮೇಲೆ ಬಾಂಬ್ ಹಾಕಿ ಷಂಡತನ ಪ್ರದರ್ಶಿಸುತ್ತಿದೆ. ಆಸ್ಪತ್ರೆ, ಶಾಲೆ, ನಿರಾಶ್ರಿತರ ಶಿಬಿರ ಮೇಲೆ ದಾಳಿ ನಡೆಸಿ ನಾಗರೀಕರನ್ನು ಕೊಂದು ರಣಕೇಕೆ ಹಾಕುತ್ತಿದೆ. ವಿಶ್ವಸಂಸ್ಥೆ ಆದಿಯಾಗಿ ಜಗತ್ತಿನ ಪ್ರಮುಖ ರಾಷ್ಟ್ರಗಳು ಇಸ್ರೇಲ್ ಹತ್ಯಾಕಾಂಡವನ್ನು ವಿರೋಧಿಸುತ್ತಿದೆ. ಇಸ್ರೇಲ್ ಸಚಿವರೊಬ್ಬರು ಪರಮಾಣು ಶಕ್ತಿ ಬಳಕೆ ಬಗ್ಗೆ ಮಾತಾಡಿರುವುದು ಸಮೂಹ ನಾಶಕ್ಕೆ ಇಸ್ರೇಲ್ ಮುಂದಾಗಿದೆ ಅನ್ನುವ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಯುದ್ಧದಲ್ಲಿ ಯಾರಿಗೆ ಹೆಚ್ಚು ಹಾನಿಯಾಗಿದೆ, ಎಷ್ಟು ಜನರ ಸಾವಾಗಿದೆ ಅನ್ನುವ ಲೆಕ್ಕದಲ್ಲಿ ಗೆಲುವು ಘೋಷಿಸಲಾಗುತ್ತದೆ. ಪ್ಯಾಲೆಸ್ತೀನ್ ನ ಹತ್ತು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಇಸ್ರೇಲ್ ಸಾವಿನ ಸಂಖ್ಯೆ ನಾಲ್ಕು ಸಾವಿರ ಆಸುಪಾಸಿನಲ್ಲಿದೆ. ಈ ಅರ್ಥದಲ್ಲಿ ನೋಡುವುದಾದರೆ ಇಸ್ರೇಲ್ ಗೆದ್ದು ಬೀಗಿದೆ.
ಆದರೆ ಇಸ್ರೇಲ್ ಕೊಂದವರ ಪಟ್ಟಿಯಲ್ಲಿ 4500 ಕ್ಕೂ ಅಧಿಕ ಮಕ್ಕಳು, ಅಷ್ಟೇ ಸಂಖ್ಯೆಯಲ್ಲಿ ಮಹಿಳೆಯರು ಹತರಾಗಿದ್ದಾರೆ. ಆದರೆ ಹಮಾಸ್ ಇಸ್ರೇಲ್ ಸೈನಿಕರನ್ನು ಭೇಟೆಯಾಡುತ್ತಿದೆ ಹೊರತು ವೃದ್ಧರು, ಮಕ್ಕಳಿಗೆ ಯಾವುದೇ ತೊಂದರೆ ಕೊಡುತ್ತಿಲ್ಲ. ಹಮಾಸ್ ವಶದಲ್ಲಿದ್ದ ಇಬ್ಬರು ವೃದ್ಧರನ್ನು ಅದು ಬಿಡುಗಡೆ ಮಾಡಿದೆ. ವಿರೋಧಿ ಸೈನಿಕರನ್ನು ಹೊರತುಪಡಿಸಿ ಹಮಾಸ್ ಇಸ್ರೇಲ್ ನಾಗರೀಕರಿಗೆ ತೊಂದರೆ ಕೊಡುತ್ತಿಲ್ಲ.
ಯುದ್ದ ಆರಂಭವಾಗಿ 34 ದಿನಗಳು ಕಳೆದಿವೆ. ಶಕ್ತಿಶಾಲಿ ಇಸ್ರೇಲ್ ಗೆ ಹಮಾಸ್ ವಶದಲ್ಲಿರುವ 200 ಕ್ಕೂ ಅಧಿಕ ಒತ್ತೆಯಾಳುಗಳನ್ನು ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಜಗತ್ತಿನ ಶಕ್ತಿಶಾಲಿ ಮಿಲಿಟರಿ ಶಕ್ತಿ ಹೊಂದಿರುವ ದೇಶ ಜುಜುಬಿ ಹಮಾಸ್ ನಿರ್ನಾಮಕ್ಕೆ ಇನ್ನೂ ಸಾಧ್ಯವಾಗದಿರುವುದನ್ನು ನೋಡುವಾಗ ಇಸ್ರೇಲ್ ಗೆದ್ದು ಸೋತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ನೇರ ಯುದ್ಧದಲ್ಲಿ ಇಸ್ರೇಲ್ ಹಮಾಸ್ ಗರಿಂದ ಸಾಕಷ್ಟು ಸಾವು ನೋವು ಅನುಭವಿಸಿದೆ. ಶಕ್ತಿಶಾಲಿ ಯುದ್ಧ ಟ್ಯಾಂಕರ್ ಗಳು ಪುಡಿ ಪುಡಿಯಾಗಿದೆ. ಭೂ ದಾಳಿಯಲ್ಲಿ ಹಮಾಸ್ ಸದೆಬಡಿಯಲು ಈವರೆಗೂ ಇಸ್ರೇಲಿಗೆ ಸಾಧ್ಯವಾಗಿಲ್ಲ. ಆದರೆ ಷಂಡರಂತೆ ಮಕ್ಕಳ ಮೇಲೆ ದಾಳಿ ನಡೆಸಿ ಕ್ರೂರತನ ಮೆರೆಯುತ್ತಿದೆ.
ನಿಜವಾಗಿಯೂ ಈ ಯುದ್ಧದಲ್ಲಿ ಇಸ್ರೇಲ್ ಈವರೆಗಿನ ಗ್ರೌಂಡ್ ರಿಯಾಲಿಟಿ ಪ್ರಕಾರ ಹಮಾಸ್ ವಿರುದ್ಧ ಸೋತಿದೆ ಎಂದೇ ಹೇಳಬೇಕು. ತಮ್ಮ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿರುವ ಹಮಾಸ್ ಸದೆಬಡಿದು ಒತ್ತೆಯಾಳುಗಳನ್ನು ರಕ್ಷಿಸಿದ್ದರೆ ಇಸ್ರೇಲ್ ನ್ನು ಜಗತ್ತು ಕೊಂಡಾಡುತ್ತಿತ್ತು. ಅವರ ಸ್ಟೈರ್ಯವನ್ನು ಹೊಗಳಬಹುದಿತ್ತು. ಆದರೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಹಮಾಸ್ ಮುಂದೆ ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ನಾವು ಯುದ್ಧ ನಿಲ್ಲಿಸುತ್ತೇವೆ ಎಂದು ಅಂಗಲಾಚುತ್ತಿದ್ದಾರೆ.
ನಿರಾಯುಧ ಮಕ್ಕಳು, ಮಹಿಳೆಯರನ್ನು ಕೊಂದಿರುವುದೇ ಇಸ್ರೇಲ್ ನ ಈವರೆಗಿನ ಸಾಧನೆ. ಆದರೆ ಒಂದು ತಿಂಗಳಾದರೂ ಹಮಾಸ್ ಮುಟ್ಟಲು ಇಸ್ರೇಲ್ ಮಿಲಿಟರಿಗೆ ಈವರೆಗೂ ಸಾಧ್ಯವಾಗಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ.