SSLC ಅಂಕಪಟ್ಟಿ ತಿದ್ದುಪಡಿಗೆ ಇನ್ನು ಅಲೆದಾಡಬೇಕಿಲ್ಲ; ದಾಖಲೆಗಳು ತಿದ್ದುಪಡಿ ಅಥವಾ ನಕಲಿಯಾಗಿದ್ದಲ್ಲಿ ಶಾಲೆಯ ಮುಖ್ಯ ಶಿಕ್ಷಕರೇ ಹೊಣೆ.!

ರಾಜ್ಯ

SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ/ ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ ಹಾಗೂ ಇತರ ತಿದ್ದುಪಡಿಗಳಿಗೆ ಇನ್ನು ಮುಂದೆ ಆನ್‌ಲೈನ್‌ ಮೂಲಕ ಶಾಲಾ ಹಂತದಲ್ಲೇ ಅರ್ಜಿಗಳನ್ನು ಪಡೆಯಲಾಗುತ್ತದೆ. ಭೌತಿಕವಾಗಿ ಪ್ರಸ್ತಾವನೆ ಸ್ವೀಕರಿಸುವ ಪ್ರಕ್ರಿಯೆ ಇರದು. ಇದುವರೆಗೆ ವಿದ್ಯಾರ್ಥಿಗಳು ಅಂಕಪಟ್ಟಿಯಲ್ಲಿನ ತಿದ್ದುಪಡಿಗಾಗಿ ಮುಖ್ಯ ಶಿಕ್ಷಕರ ಮೂಲಕ ಅಗತ್ಯ ದಾಖಲೆ ಮತ್ತು ನಿಗದಿತ ಶುಲ್ಕದೊಂದಿಗೆ ಪ್ರಸ್ತಾವನೆಯನ್ನು ಸಂಬಂಧಿಸಿದ ವಿಭಾಗೀಯ ಕಚೇರಿ ಅಥವಾ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಸಲ್ಲಿಸಬೇಕಿತ್ತು. ವಿಭಾಗೀಯ ಕಚೇರಿಯಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಿ ಅರ್ಹರ ಅಂಕಪಟ್ಟಿ ತಿದ್ದುಪಡಿ ಮಾಡಿ ಸಂಬಂಧಿಸಿದ ಶಾಲೆಗೆ ರವಾನಿಸಲಾಗುತ್ತಿತ್ತು. ಇದಕ್ಕಾಗಿ ವಿದ್ಯಾರ್ಥಿಗಳು ಅಲೆದಾಡುವ ಜತೆಗೆ ಹೆಚ್ಚು ಸಮಯ ತಗಲುತ್ತಿತ್ತು.ಈ ಹಿನ್ನೆಲೆಯಲ್ಲಿ ಆನ್‌ ಲೈನ್‌ ವ್ಯವಸ್ಥೆಗೆ ಮಂಡಳಿಯು ಮುಂದಾಗಿದೆ.

ಅಂಕಪಟ್ಟಿಯಲ್ಲಿನ ತಿದ್ದುಪಡಿಗಾಗಿ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಶಾಲೆಯ ಮುಖ್ಯಶಿಕ್ಷಕರಿಗೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಮುಖ್ಯಶಿಕ್ಷಕರು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ ಮೂಲಕ ತಿದ್ದುಪಡಿಗೆ ಪ್ರಸ್ತಾವನೆ ಸಲ್ಲಿಸುವರು. ಶುಲ್ಕವನ್ನು ಆನ್‌ಲೈನ್‌ ಚಲನ್‌ ಮೂಲಕ ಪಾವತಿಸಬಹುದು. ದಾಖಲೆ ಸಮೇತ ಪ್ರಸ್ತಾವನೆ ಅಪ್‌ಲೋಡ್‌ ಆದ ತತ್‌ಕ್ಷಣವೇ ವಿಭಾಗೀಯ ಕಚೇರಿ,ಮಂಡಳಿಯ ಅಧಿಕಾರಿಗಳು ಪರಿಶೀಲಿಸಿ, ಶಾಲೆಯಿಂದ ಮೂಲ ಅಂಕಪಟ್ಟಿಯನ್ನು ಪಡೆದುಕೊಳ್ಳುವರು. ಇದನ್ನು ಆಧರಿಸಿ ತಿದ್ದುಪಡಿ ನಡೆಸಿ, ಪರಿಷ್ಕೃತ ಅಂಕಪಟ್ಟಿಯನ್ನು ಶಾಲೆಗೆ ಸ್ಪೀಡ್‌ ಪೋಸ್ಟ್‌ನಲ್ಲಿ ಕಳುಹಿಸಲಾಗುತ್ತದೆ. ಆನ್‌ಲೈನ್‌ ಮೂಲಕ ಪ್ರಸ್ತಾವನೆ ಸಲ್ಲಿಸುವಾಗ ಅಪ್‌ಲೋಡ್‌ ಮಾಡುವ ದಾಖಲೆಗಳು ತಿದ್ದುಪಡಿ ಅಥವಾ ನಕಲಿಯಾಗಿದ್ದಲ್ಲಿ ಅಂತಹ ಶಾಲೆಯ ಮುಖ್ಯಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಮಂಡಳಿ ಎಚ್ಚರಿಸಿದೆ.