ಬುಡಕಟ್ಟು ಜನಾಂಗದ 20 ವರ್ಷ ಯುವತಿಯೊಬ್ಬಳ ಮೇಲೆ ನಡೆದ ಗ್ಯಾಂಗ್‌ ರೇಪ್‌; 13 ಮಂದಿಗೆ 20 ವರ್ಷಗಳ ಸೆರೆವಾಸದ ಶಿಕ್ಷೆ

ರಾಜ್ಯ

ಬೀರ್‌ಭುಮ್ ಜಿಲ್ಲೆಯ ಲಾಭಪುರ ಗ್ರಾಮದಲ್ಲಿ ಬುಡಕಟ್ಟು ಯುವತಿಯೊಬ್ಬಳ ಮೇಲೆ ಅಮಾನುಷವಾಗಿ ನಡೆದ ಗ್ಯಾಂಗ್‌ ರೇಪ್‌ಗೆ ಸಂಬಂಧಿಸಿದಂತೆ ಪಶ್ಚಿಮಬಂಗಾಳದ ನ್ಯಾಯಾಲಯ 13 ಮಂದಿಗೆ 20 ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿದೆ.

ಅನ್ಯ ಕೋಮಿನ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವತಿಗೆ ಸಾಮೂಹಿಕ ಅತ್ಯಾಚಾರದ ಶಿಕ್ಷೆ ನೀಡಬೇಕೆಂದು ಗ್ರಾಮದ ಹಿರಿಯರು ಆದೇಶ ನೀಡಿದ್ದರು. ಕಳೆದ ಜನವರಿ 21ರಂದು 20 ವರ್ಷ ವಯಸ್ಸಿನ ಯುವತಿಯನ್ನು ಮತ್ತು ಅವಳ ಜೊತೆಯಿದ್ದ ಪುರುಷನನ್ನು ಮರಕ್ಕೆ ಕಟ್ಟಿಹಾಕಿ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ತಲಾ 25,000 ರೂ. ದಂಡ ಕಟ್ಟುವಂತೆ ಗ್ರಾಮದ ಹಿರಿಯರು ಆದೇಶ ನೀಡಿದ್ದರು.

ಆಗ ಮಹಿಳೆಯ ಕುಟುಂಬ ತಮಗೆ ಅಷ್ಟೊಂದು ದಂಡ ಕಟ್ಟಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿತು.ಆಗ ಅ ಯುವತಿಯನ್ನು ಬಲವಂತವಾಗಿ ಸಣ್ಣ ಗುಡಿಸಿಲಿನೊಳಕ್ಕೆ ತಳ್ಳಿ ಗ್ರಾಮದ ಸರಿ-ಸುಮಾರು 10 ಜನರು ಯುವತಿಯ ಮೇಲೆ ಮನ ಬಂದಂತೆ ಸಾಮೂಹಿಕ ಅತ್ಯಾಚಾರ ನಡೆಸಿದರು. ನನ್ನನ್ನು ಗ್ರಾಮದ ಪುರುಷರು ಅನುಭವಿಸಬೇಕೆಂದು ಗ್ರಾಮದ ಮುಖಂಡ ಆದೇಶ ನೀಡಿದ ಬಳಿಕ ಕನಿಷ್ಟ 10-12 ಮಂದಿ ನನ್ನ ಮೇಲೆ ಸತತವಾಗಿ ನಿರಂತರ ಅತ್ಯಾಚಾರ ಮಾಡಿದರು. ನನ್ನ ಮೇಲೆ ಎಷ್ಟು ಬಾರಿ ಅತ್ಯಾಚಾರ ಮಾಡಿದರೆಂದು ನನಗೆ ಲೆಕ್ಕವೂ ತಪ್ಪಿಹೋಯಿತು ಎಂದು ಯುವತಿ ಪೊಲೀಸರಿಗೆ ದೂರಿದ್ದಾಳೆ.

ಪ್ರಥಮ ಮಾಹಿತಿ ವರದಿಯಲ್ಲಿ ಅವಳು 13 ಜನರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಹೆಸರಿಸಿದ್ದಳು. ಈ ಆಘಾತಕಾರಿ ಪ್ರಕರಣವನ್ನು ಅತ್ಯಂತ ಖಂಡನೀಯ ಎಂದು ಹೇಳಿದ ಕೋರ್ಟ್, ಯುವತಿ ವಾಸಿಸುವ ಬೀರ್‌ಭುಮ್ ಗ್ರಾಮಕ್ಕೆ ಭೇಟಿ ನೀಡಿ ಸತ್ಯಾಂಶಗಳ ಬಗ್ಗೆ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾ ನ್ಯಾಯಾಧೀಶರಿಗೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಅಲ್ಲಿನ ನ್ಯಾಯಾಲಯವು ಗ್ರಾಮದ 13 ಮಂದಿಗೆ 20 ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿದೆ.