ಇಸ್ರೇಲ್ ವಿರೋಧ ಪಕ್ಷದಿಂದ ಭಾರತ ಕಲಿಯಬೇಕಿರೋದೇನು.? ಬಯಲಾದ ಹಿಂದುತ್ವದ ಸುಳ್ಳುಗಳು.!

ಅಂತಾರಾಷ್ಟ್ರೀಯ

“ಇಸ್ರೇಲ್ ಪ್ರಧಾನಿ ಉಗ್ರರ ದಮನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಸುತ್ತ ಮುತ್ತ ಉಗ್ರರೇ ತುಂಬಿಕೊಂಡಿದ್ದಾರೆ”

✍️. ನವೀನ್‌ ಸೂರಿಂಜೆ, ಪತ್ರಕರ್ತರು

ಇಸ್ರೇಲ್ – ಪ್ಯಾಲೆಸ್ತೇನ್ ಯುದ್ಧ ಘೋಷಣೆಯಾದ ಬಳಿಕ ಇಸ್ರೇಲ್ ನ ವಿರೋಧ ಪಕ್ಷವನ್ನು ವಿಸರ್ಜನೆ ಮಾಡಲಾಗಿದೆ. ವಿರೋಧ ಪಕ್ಷದ ನಾಯಕರೇ ಸರ್ಕಾರದ ಜೊತೆ ಸೇರಿಕೊಂಡಿದ್ದಾರೆ. ಇದು ಭಾರತವು ಇಸ್ರೇಲ್ ನಿಂದ ಕಲಿಯಬೇಕಿರುವ ಪಾಠ. ಭಾರತವು ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮಾಡಿದಾಗ ಸಾಕ್ಷ್ಯ ಕೇಳಿದ ಅಯೋಗ್ಯರು ಇಲ್ಲಿದ್ದಾರೆ” ಎಂದು ಹಿಂದುತ್ವವಾದಿಯೊಬ್ಬ ಮಾಡಿದ ಭಾಷಣದ ತುಣುಕು ವೈರಲ್ ಆಗುತ್ತಿದೆ.

ವಾಸ್ತವವಾಗಿ ಇದೊಂದು ಸುಳ್ಳಿನ ಕಂತೆ. ನಿಜ ಏನೆಂದರೆ “ಇಸ್ರೇಲ್ ಪ್ರಧಾನಿ ಬೆಂಜಮಿನ್ ಉಗ್ರರ ದಮನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಸುತ್ತ ಮುತ್ತ ಉಗ್ರರೇ ತುಂಬಿಕೊಂಡಿದ್ದಾರೆ” ಎಂದು ನೇತಾನ್ಯಾಹು ಸಚಿವ ಸಂಪುಟವನ್ನು ಉಗ್ರರಿಗೆ ಹೋಲಿಕೆ ಮಾಡಿ ಇಸ್ರೇಲ್ ವಿರೋಧ ಪಕ್ಷದ ನಾಯಕರು ಟೀಕೆ ಮಾಡಿದ್ದಾರೆ !

ಸಾಮಾನ್ಯವಾಗಿ ಎರಡು ದೇಶಗಳ ಮಧ್ಯೆ ಯುದ್ಧ ನಡೆದಾಗ ವಿರೋಧ ಪಕ್ಷವು ಸರ್ಕಾರದ ಕ್ರಮಗಳ ಜೊತೆ ಇದ್ದೇವೆ ಎಂದು ನೈತಿಕ ಬೆಂಬಲವನ್ನು ಘೋಷಿಸುತ್ತದೆ. ಭಾರತವು ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ನಡೆಸಿದಾಗ ಖುದ್ದು ರಾಹುಲ್ ಗಾಂಧಿ ಮತ್ತು ಎಐಸಿಸಿ ಟ್ವೀಟ್ ಮಾಡಿ “ಭಾರತದ ಸೈನಿಕರ ಸಾಹಸ”ವನ್ನು ಪ್ರಶಂಸಿದ್ದಲ್ಲದೇ ಸೈನಿಕರ ಜೊತೆ ನಾವಿದ್ದೇವೆ ಎಂದು ಸಾರಿತ್ತು. ಆ ಬಳಿಕ ಎದ್ದ ಕೆಲವು ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ಕೊಡಲು ಸಾಧ್ಯವಾಗದೇ ಇದ್ದಾಗ ಏರ್ ಸ್ಟ್ರೈಕ್ ಗೆ ಸಾಕ್ಷ್ಯ ಕೊಡಿ ಎಂದು ಕೇಳಲಾಯಿತು. ಸರ್ಕಾರದ ಕೆಲಸವನ್ನು ಪರಿಶೀಲಿಸುವುದೇ ವಿರೋಧ ಪಕ್ಷದ ಪ್ರಥಮ ಕೆಲಸವಾದ್ದರಿಂದ ಅದು ಸರಿಯಾಗಿಯೇ ಮಾಡಿದೆ.

ಯಾಯಿರ್ ಲ್ಯಾಪಿಡ್ ಈಗ ಇಸ್ರೇಲ್ ವಿಷಯಕ್ಕೆ ಬರೋಣ. ಇಸ್ರೇಲ್ ನ ಅಧಿಕೃತ ಪ್ರತಿಪಕ್ಷದ ನಾಯಕನ ಹೆಸರು ಯಾಯಿರ್ ಲ್ಯಾಪಿಡ್ (Yair Lapid). ಎಲ್ಲಾ ವಿರೋಧ ಪಕ್ಷಗಳ ಸಂಪ್ರದಾಯದಂತೆ ಯುದ್ಧದ ವಿಷಯಾಧರಿತವಾಗಿ ಬೆಂಬಲ ಸೂಚಿಸಿದ್ದಾರೆ. ಈ ಮಧ್ಯೆ ಇಸ್ರೇಲ್ ಪ್ರಧಾನಿ ನೇತಾನ್ಯಾಹು ಒಂದು ಕುತಂತ್ರಿ ಜಾಲವನ್ನು ಹೆಣೆದರು. ಅದೇನೆಂದರೆ, ಪ್ರತಿಪಕ್ಷಗಳನ್ನು ಸೇರಿಸಿಕೊಂಡು ಒಂದು ‘ವಾರ್ ಕ್ಯಾಬಿನೆಟ್’ ರಚಿಸೋದು. ಅಂದರೆ ‘ಯುದ್ಧಕ್ಕಾಗಿಯೇ ಪ್ರತ್ಯೇಕ ಸಚಿವ ಸಂಪುಟ’ ಎಂದರ್ಥ. ಈ ವಾರ್ ಕ್ಯಾಬಿನೆಟ್ ನಲ್ಲಿ ವಿರೋಧ ಪಕ್ಷದ ನಾಯಕನನ್ನೂ ಸೇರಿಸಲು ತಯಾರಿ ನಡೆಸಿದ್ದರು. ವಿರೋಧ ಪಕ್ಷದ ನಾಯಕ ಯಾಯಿರ್ ಲ್ಯಾಪಿಡ್ ಜೊತೆ ಮಾತುಕತೆ ನಡೆಸಿದ್ದ ನೇತಾನ್ಯಾಹು ಅದನ್ನೇ ಬಳಸಿಕೊಂಡು “ವಿರೋಧ ಪಕ್ಷದ ನಾಯಕರು ನಮ್ಮ ವಾರ್ ಕ್ಯಾಬಿನೆಟ್ ಸೇರಲು ಒಪ್ಪಿದ್ದಾರೆ” ಎಂದು ಮಾಧ್ಯಮಗಳಲ್ಲಿ ಬರುವಂತೆ ಮಾಡಿದರು. ವಾಸ್ತವವಾಗಿ ವಿರೋಧ ಪಕ್ಷದ ನಾಯಕರು ವಾರ್ ಕ್ಯಾಬಿನೆಟ್ ಅನ್ನು ಸೇರಲು ಈವರೆಗೂ ನಿರ್ಧರಿಸಿಲ್ಲ.

ಈ ಬಗ್ಗೆ ನವೆಂಬರ್ 07 ರಂದು ಮಾತನಾಡಿರುವ ವಿಪಕ್ಷ ನಾಯಕ ಲ್ಯಾಪಿಡ್ “ನಾನು ಬೆಂಜಮಿನ್ ನೇತಾನ್ಯಾಹು ನೇತೃತ್ವದ ಯಾವುದೇ ಕ್ಯಾಬಿನೆಟ್ ಸೇರಲು ಬಯಸುವುದಿಲ್ಲ. ಈಗಿರುವ ಸರ್ಕಾರದ ಕ್ಯಾಬಿನೆಟ್ ಜೊತೆಗೆ ಇನ್ನೊಂದು ವಾರ್ ಕ್ಯಾಬಿನೆಟ್ ಸೃಷ್ಟಿಸುವುದರಿಂದ ಗೊಂದಲ ಸೃಷ್ಟಿಯಾಗುತ್ತದೆ. ಇದರಿಂದ ಎರಡು ಕ್ಯಾಬಿನೆಟ್ ಗಳ ಮಧ್ಯೆ ಘರ್ಷಣೆ ಆಗಬಹುದು” ಎಂದಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ
ವಿರೋಧ ಪಕ್ಷದ ನಾಯಕ ಯಾಯಿರ್ ಲ್ಯಾಪಿಡ್ ಇಷ್ಟೇ ಹೇಳಿ ಸುಮ್ಮನೆ ಕುಳಿತಿಲ್ಲ. ಪ್ರಧಾನಿ ಬೆಂಜಮಿನ್ ನೇತನ್ಯಾಹು ಉಗ್ರಗಾಮಿಗಳ ಜೊತೆಯೇ ಇದ್ದಾರೆ ಎಂದು ಈ ಯುದ್ಧಕಾಲದಲ್ಲಿ ಕಟು ಟೀಕೆ ಮಾಡಿದ್ದಾರೆ. “ಬೆಂಜಮಿನ್ ನೇತಾನ್ಯಾಹು ಉಗ್ರಗಾಮಿಗಳ ವಿರುದ್ದ ಸಮರ ಹೂಡಿದ್ದೇನೆ ಅನ್ನುತ್ತಾರೆ. ವಾಸ್ತವವಾಗಿ ಅವರ ಸುತ್ತಮುತ್ತಲೂ ಉಗ್ರರೇ ತುಂಬಿದ್ದಾರೆ. ಅವರು ಉಗ್ರರಿಂದಲೇ ನಿರ್ಬಂಧಿಸಲ್ಪಟ್ಟಿದ್ದಾರೆ” ಎಂದು ಇಸ್ರೇಲ್ ಸರ್ಕಾರದ ಸಚಿವರನ್ನು ಉಗ್ರರಿಗೆ ಹೋಲಿಸಿ ಕಟುವಾದ ಟೀಕೆ ಮಾಡಿದ್ದಾರೆ.

ಹಿಂದುತ್ವವಾದಿಗಳು ಕಾಂಗ್ರೆಸ್ ಅನ್ನು ಟೀಕಿಸಲು ಇಸ್ರೇಲ್ ವಿರೋಧ ಪಕ್ಷದ ಸುಳ್ಳು ಉದಾಹರಣೆ ನೀಡಿದ್ದಾರೆ. ಇಸ್ರೇಲ್ ವಿರೋಧ ಪಕ್ಷವು ಭಾರತದ ವಿರೋಧ ಪಕ್ಷಕ್ಕಿಂತ ಹೆಚ್ಚು ಸಕ್ರಿಯವಾಗಿದ್ದುಕೊಂಡು ಯುದ್ಧದ ಕ್ರಮಗಳನ್ನು ಪ್ರಶ್ನಿಸುತ್ತಿದೆ