ಗೆಳೆಯನ ಅಪ್ರಾಪ್ತ ಮಗಳನ್ನೇ ಅಪಹರಿಸಿ ಅತ್ಯಾಚಾರಗೈದ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ

ರಾಜ್ಯ

2021ರಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೊಕ್ಸೊ ನ್ಯಾಯಾಲಯ) 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಗಂಗಾಧರ ಶರಣಬಸಪ್ಪ ನೀಲಹಳ್ಳಿ 2021ರ ಸೆಪ್ಟಂಬರ್ 24ರಂದು ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಲಬುರಗಿಯ ರಾಮಮಂದಿರದ ಬಳಿ ಅಪಹರಿಸಿ, ಕೋಲಾರ ಜಿಲ್ಲೆಯ ಕರಿನಾಯಕನಹಳ್ಳಿಗೆ ಕರೆದೊಯ್ದಿದ್ದ. ತಾನು ತಂಗಿದ್ದ ಬಾಡಿಗೆ ಮನೆಗೆ ಕರೆದೊಯ್ದು 2021ರ ಸೆಪ್ಟೆಂಬರ್ 25ರಿಂದ ನವೆಂಬರ್ 25ರವರೆಗೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಬಳಿಕ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ತನ್ನ ಹುಟ್ಟೂರಾದ ಕಲಬುರಗಿ ಜಿಲ್ಲೆಯ ಮದ್ಬೂಳ ಗ್ರಾಮಕ್ಕೆ ಬಂದು ಪೋಷಕರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಬಳಿಕ, ಆರೋಪಿಯು ಸಂತ್ರಸ್ತೆಯ ತಂದೆಯ ಸ್ನೇಹಿತನಾಗಿದ್ದು, ಆತ ನಾಲ್ಕು ವರ್ಷಗಳಿಂದ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಗಂಗಾಧರ್ ವಿರುದ್ಧ ಪೋಷಕರು ಮದ್ಬೂಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖಾಧಿಕಾರಿಯಾಗಿದ್ದ ಕಾಳಗಿ ವೃತ್ತದ ಅಂದಿನ ಪೊಲೀಸ್‌ ನಿರೀಕ್ಷಕ ವಿನಾಯಕ್‌ ಅವರು ಪ್ರಕರಣದ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.