ಲೋಕಸಭಾ ಚುನಾವಣೆ: 13 ಮಂದಿ ಹಾಲಿ ಸಂಸದರಿಗೆ ಕೋಕ್ ನೀಡಿ, ಹೊಸಬರಿಗೆ ಮಣೆಹಾಕಲು ಬಿಜೆಪಿ ಚಿಂತನೆ.!

ರಾಷ್ಟ್ರೀಯ

ಲೋಕಸಭಾ ಚುನಾವಣೆ ಒಟ್ಟಿನಲ್ಲಿ 13 ಕ್ಷೇತ್ರಗಳಲ್ಲಿ ಬಿಜೆಪಿಯ ಹಾಲಿಗಳಿಗೆ ಟಿಕೆಟ್ ತಪ್ಪಲಿದ್ದು, ಬಹುತೇಕ ಹೊಸಬರಿಗೆ ಮಣೆಹಾಕಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ಈ ಬಾರಿಯೂ ಪ್ರಯೋಗ ನಡೆಯಲಿದೆ. ಆದರೆ, ಮೊದಲೇ ಮಾಹಿತಿ ನೀಡಿ ಬಂಡಾಯ ಏಳದಂತೆ ನೋಡಿಕೊಂಡು ವ್ಯವಸ್ಥಿತವಾಗಿ ಟಿಕೆಟ್ ಪ್ರಕಟಿಸಲಿದೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಹಾಲಿ ಶಾಸಕರಿಗೆ ಕೋಕ್ ನೀಡಿ ಹೊಸಬರಿಗೆ ಮಣೆಹಾಕಿ ನಡೆಸಿದ್ದ ಪ್ರಯೋಗವನ್ನು ಲೋಕಸಭಾ ಚುನಾವಣೆಯಲ್ಲಿಯೂ ನಡೆಸಲು ಬಿಜೆಪಿ ಹೈಕಮಾಂಡ್ ಚಿಂತನೆಯಲ್ಲಿದೆ. 13 ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬದಲು ಹೊಸ ಮುಖಗಳಿಗೆ ಮಣೆ ಹಾಕುವ ಚಿಂತನೆಯಲ್ಲಿದೆ. ಅಲಿಖಿತ ನಿಯಮದ ಅನ್ವಯ 75 ವರ್ಷ ದಾಟಿದ ನಾಯಕರಿಗೆ ಚುನಾವಣಾ ರಾಜಕೀಯದಿಂದ ಹೊರಗಿಡಲು ಬಿಜೆಪಿ ಹೈಕಮಾಂಡ್​ ತೀರ್ಮಾನಿಸಿದೆ.

ಡಿವಿ ಸದಾನಂದಗೌಡ, ಬಿಎನ್​ ಬಚ್ಚೇಗೌಡ, ಶ್ರೀನಿವಾಸ ಪ್ರಸಾದ್ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಶಿವಕುಮಾರ್ ಉದಾಸಿ ವೈಯಕ್ತಿಕ ಕಾರಣದಿಂದ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಮತ್ತಷ್ಟು ಸಂಸದರ ವಯಸ್ಸು 70 ದಾಟಿದ್ದು ಅವರಿಗೆ ಟಿಕೆಟ್ ನೀಡದಿರುವ ಚಿಂತನೆ ನಡೆದಿದೆ ಎಂಬ ಮಾತುಗಳು ಪಕ್ಷದ ವಲಯದಿಂದ ಕೇಳಿ ಬಂದಿದೆ. ಇದರ ಜೊತೆಗೆ ಅನಾರೋಗ್ಯ, ಸ್ಪರ್ಧೆಯಿಂದ ಹಿಂದೇಟು, ಸೂಕ್ತವಲ್ಲ ಎನ್ನುವ ಕಾರಣಕ್ಕಾಗಿ ಮೂವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಮಾತು ಕೂಡ ಇದೆ. ಒಟ್ಟು 13 ಕ್ಷೇತ್ರಗಳಲ್ಲಿ ಬದಲಾವಣೆ ತರಲಾಗುತ್ತದೆ ಎಂಬ ಮಾತುಗಳಿವೆ. ಹೀಗೊಂದು ಚರ್ಚೆ ಪಕ್ಷದ ಆಂತರಿಕ ವಲಯದಿಂದ ಕೇಳಿ ಬರುತ್ತಿದೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಸಿಟಿ ರವಿ ಅವರಿಗೆ ಟಿಕೆಟ್ ನೀಡಿ, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡುವ ಪ್ರಸ್ತಾಪವಿದೆ. ವರ್ಷದಿಂದಲೇ ಈ ಮಾತು ಕೇಳಿ ಬರುತ್ತಿದೆ. ಇದೀಗ ಸದಾನಂದಗೌಡರು ಕಣದಲ್ಲಿ ಇಲ್ಲದ ಕಾರಣ ಶೋಭಾ ಕರಂದ್ಲಾಜೆ ಹೆಸರಿಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಇನ್ನು ಒಂದು ವೇಳೆ ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾದಲ್ಲಿ ಹಾಲಿ ಸಂಸದೆ ಸುಮಲತಾ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೆಟ್ ನೀಡುವ ಪ್ರಸ್ತಾಪವೂ ಇದೆ. ಒಂದು ವೇಳೆ ಇಲ್ಲಿ ಹೊಸ ಮುಖಕ್ಕೆ ಮಣೆಹಾಕಬೇಕು ಎಂದರೆ ತುಳಸಿಮುನಿರಾಜು ಅಥವಾ ಮಹಿಳಾ ಅಭ್ಯರ್ಥಿ ಬೇಕು ಎಂದರೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಹೆಸರು ಚಾಲ್ತಿಯಲ್ಲಿದೆ. ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಶ್ರೀನಿವಾಸ್ ಪ್ರಸಾದ್​: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ವಿ.ಶ್ರೀನಿವಾಸ್ ಪ್ರಸಾದ್​ಗೆ ಟಿಕೆಟ್ ಕೈತಪ್ಪುವುದು ಬಹುತೇಕ ಖಚಿತ. ಯಾಕೆಂದರೆ ಅವರು ಈಗಾಗಲೇ ತಾವು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ 13 ಕ್ಷೇತ್ರಗಳಲ್ಲಿ ಬಿಜೆಪಿಯ ಹಾಲಿಗಳಿಗೆ ಟಿಕೆಟ್ ತಪ್ಪಲಿದ್ದು, ಬಹುತೇಕ ಹೊಸಬರಿಗೆ ಮಣೆಹಾಕಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ಈ ಬಾರಿಯೂ ಪ್ರಯೋಗ ನಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.