ದುಡಿಯುವ ತಾಕತ್ತು ಇದ್ದರೆ, ಕೆಲಸ ಇಲ್ಲದಿದ್ದರೂ ಜೀವನಾಂಶ ನೀಡಲೇಬೇಕು

ರಾಜ್ಯ

ಉದ್ಯೋಗ ಕಳೆದುಕೊಂಡಿದ್ದೇನೆಂಬ ಕಾರಣಕ್ಕೆ ಪತಿಯು ಪತ್ನಿಗೆ ಜೀವನಾಂಶ ನೀಡದಿರಲು ಕಾರಣವಿಲ್ಲ ಎಂದು ಹೇಳಿರುವ ಹೈಕೋರ್ಟ್ ‘ದುಡಿಯಲು ಶಕ್ತಿ ಇರುವ ಪತಿ ಜೀವನಾಂಶ ನೀಡಲೇಬೇಕಾಗುತ್ತದೆ’ ಎಂದು ಆದೇಶ ನೀಡಿದೆ.

ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ವಜಾಗೊಳಿಸಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ “ಅರ್ಜಿದಾರರ ವಕೀಲರು ಪತಿ ಉದ್ಯೋಗ ಕಳೆದುಕೊಂಡಿದ್ದಾನೆ. ಹಾಗಾಗಿ ಅವರಿಗೆ ಜೀವನಾಂಶ ನೀಡುವಂತೆ ಹೊರಡಿಸಿರುವ ಆದೇಶ ರದ್ದುಗೊಳಿಸಬೇಕೆಂದು ಕೋರಿದ್ದಾರೆ. ಆದರೆ ಪತಿಗೆ ದುಡಿಯುವ ಶಕ್ತಿ ಇದೆ. ಆತ ಕೆಲಸ ಮಾಡಿ ತನ್ನ ಪತ್ನಿಯನ್ನು ನೋಡಿಕೊಳ್ಳಬೇಕಾಗುತ್ತದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಅಂಜು ಗರ್ಗ್ ವರ್ಸಸ್ ದೀಪಕ್ ಕುಮಾರ್ ಗರ್ಗ್ ಪ್ರಕರಣದಲ್ಲಿ ಸ್ಪಷ್ಟ ಆದೇಶ ನೀಡಿದೆ. ಅದರಂತೆ ಉದ್ಯೋಗ ಇಲ್ಲದಿರುವುದು ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲು ಕಾರಣವಲ್ಲ” ಎಂದು ಆದೇಶಿಸಿದೆ.

“ಅಲ್ಲದೆ ಪತ್ನಿಗೆ ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶ ಸರಿಯಾಗಿಯೇ ಇದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ” ಎಂದು ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿದಾರರ ಪರ ವಕೀಲರು “ಪತಿ ಉದ್ಯೋಗ ಕಳೆದುಕೊಂಡಿದ್ದಾನೆ. ಸದ್ಯ ಜೀವನಾಂಶ ಪಾವತಿಸುವ ಸ್ಥಿತಿಯಲ್ಲಿಲ್ಲ. ಜತೆಗೆ ಕೌಟುಂಬಿಕ ನ್ಯಾಯಾಲಯ ಪತಿ ತಿಂಗಳಿಗೆ 50 ಸಾವಿರ ಗಳಿಸುತ್ತಿದ್ದಾರೆಂಬ ತೀರ್ಮಾನಕ್ಕೆ ಬಂದಿದೆ. ಆದರೆ ವಾಸ್ತವದಲ್ಲಿ ಅವರಿಗೆ ಅಷ್ಟು ಆದಾಯವಿಲ್ಲ. ಹಾಗಾಗಿ ಈ ಅಂಶಗಳನ್ನು ಪರಿಗಣಿಸಿ ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದಂತೆ ಆದೇಶ ರದ್ದುಗೊಳಿಸಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.