ದ.ಕ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ನಿಂದ ಬಿಲ್ಲವ, ಬಂಟ ಸಾಕು.. ಒಮ್ಮೆ ಮುಸಲ್ಮಾನರಿಗೆ ಅವಕಾಶ ನೀಡಿ.!

ಕರಾವಳಿ

ಜಾತಿವಾರು ಲೆಕ್ಕದಲ್ಲಿ ಮುಸಲ್ಮಾನರೇ ಫಸ್ಟ್.. ಇನಾಯತ್ ಅಲಿ ಪರ್ಫೆಕ್ಟ್ ಕ್ಯಾಂಡಿಡೇಟ್

ಇನ್ನೇನೂ ಐದಾರು ತಿಂಗಳಲ್ಲಿ ಲೋಕಸಭಾ ಚುನಾವಣೆಗೆ ಅಖಾಡ ತಯಾರಾಗಲಿದೆ. ಮತೀಯವಾದದ, ಕೋಮುವಾದದ ತವರುನೆಲೆ ಎಂದು ಗುರುತಿಸಿಕೊಂಡಿರುವ ಬುದ್ಧಿವಂತ, ವಿದ್ಯಾವಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೈಲೆಂಟಾಗಿಯೇ ಚುನಾವಣಾ ತಯಾರಿ ನಡೆಯುತ್ತಿದೆ. ಬಿಜೆಪಿಯಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ರಿಗೆ ಟಿಕೆಟ್ ಫಿಕ್ಸ್ ಆಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಆದರೆ ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿದ್ದು ಜಾತಿವಾರು ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಆದರೆ ಟಿಕೆಟ್ ಯಾರಿಗೆ ಅನ್ನುವ ಬಗ್ಗೆ ಹೈಕಮಾಂಡ್ ಈವರೆಗೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಮುಸಲ್ಮಾನ ಅಭ್ಯರ್ಥಿಗಳಿಗೆ ಅವಕಾಶ ನೀಡಲಿ ಅನ್ನುವ ಆಗ್ರಹಗಳು ಬಹಳ ಚೋರಾಗಿ ಕೇಳಿ ಬರುತ್ತಿದೆ. ಇದಕ್ಕೂ ಕಾರಣವಿದೆ. ಏನಿದು ಕಾರಣ? ವಿವರಿಸುತ್ತೇವೆ ನೋಡಿ.

ದಕ್ಷಿಣ ಕನ್ನಡ ಜಿಲ್ಲೆ 4,866 ಚ.ಕಿಮೀ ವಿಸ್ತೀರ್ಣ ಹೊಂದಿದ್ದು ಶೇಕಡಾ 88.57% ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. 2021-22 ರ ಜನಗಣತಿ ಪ್ರಕಾರ 20,89,609 ಜನಸಂಖ್ಯೆ ಹೊಂದಿದ್ದು, ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 16,98,868 ಆಗಿರುತ್ತದೆ. ಅದರಲ್ಲಿ ಪುರುಷ ಮತದಾರರ ಸಂಖ್ಯೆ 8,33,719, ಮಹಿಳಾ ಮತದಾರರ ಸಂಖ್ಯೆ 8,63, 698. ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚು. ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರವಿದ್ದು, ಹೊಸ ತಾಲೂಕು ಸೇರಿದಂತೆ 9 ಕ್ಕೇರಿದೆ. 422 ಕಂದಾಯ ಗ್ರಾಮ, 223 ಗ್ರಾಮ ಪಂಚಾಯಿತಿ, ಒಂದು ಮಹಾನಗರ ಪಾಲಿಕೆ, 5 ನಗರ ಸಭೆ/ಪುರಸಭೆಗಳು ಹಾಗೂ 8 ಪಟ್ಟಣ ಪಂಚಾಯಿತಿಗಳನ್ನು ಒಳಗೊಂಡಿದೆ.

ವಿಶೇಷವೆಂದರೆ ಅಂದಾಜು 17 ಲಕ್ಷ ಮತದಾರರ ಪೈಕಿ ಜಾತಿವಾರು ಲೆಕ್ಕದಲ್ಲಿ ನೋಡುವುದಾದರೆ ಮುಸಲ್ಮಾನರೇ ಟಾಪರ್. 2021 ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಅಂದಾಜು 4,50,000 ಮುಸಲ್ಮಾನರು, 4,30,000 ಬಿಲ್ಲವರು, 3,00,000 ಬಂಟರು, 1,60,000 ಕ್ರೈಸ್ತರು, 1,20,000 ಬ್ರಾಹ್ಮಣರು, 75,000 ಒಕ್ಕಲಿಗರು, 3,00,000 ಇತರೆ ಸಮುದಾಯದ ಮತದಾರರನ್ನು ಹೊಂದಿದೆ. 5 ಲಕ್ಷ ಮುಸ್ಲಿಂ ಮತದಾರರನ್ನು ಹೊಂದಿದ್ದರು ಜಾತ್ಯತೀತ ಕಾಂಗ್ರೆಸ್ ಪಕ್ಷ ಈವರೆಗೂ ಒಬ್ಬನೇ ಒಬ್ಬ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ ಅನ್ನುವುದು ಖೇದಕರ ಸಂಗತಿ. ಶೇ 95 ರಷ್ಟು ಮುಸ್ಲಿಂ ಮತದಾರರು ಕಾಂಗ್ರೆಸ್ ಪರ ಮತ ಚಲಾಯಿಸಿಕೊಂಡು ಬರುತ್ತಿದ್ದರೂ ಇತರ ಸಮುದಾಯದ ನಾಯಕರು ಮುಸ್ಲಿಮರನ್ನು ಎನ್ ಕ್ಯಾಶ್ ಮಾಡಿ ಸಲೀಸಾಗಿ ಟಿಕೆಟ್ ಪಡೆದು ಬರುತ್ತಿದ್ದಾರೆ. ಮುಸಲ್ಮಾನ ಸಮುದಾಯದಲ್ಲಿ ಒಗ್ಗಟ್ಟಿಲ್ಲ. ಯಾರಿಗೂ ಟಿಕೆಟ್ ಕೊಟ್ಟರೂ ಕಣ್ಣು ಮುಚ್ಚಿ ಓಟು ಹಾಕಿ ಬರುತ್ತಿರುವುದರಿಂದ ತಮಗೆ ದೊರಕಬೇಕಾದ ಹಕ್ಕನ್ನು ಕಸಿದು ಮುಸ್ಲಿಂ ಸಮುದಾಯವನ್ನು ಹರಕೆಯ ಕುರಿಯನ್ನಾಗಿಸುತ್ತಿದೆ.

ದ.ಕ ಲೋಕಸಭಾ ಕ್ಷೇತ್ರಕ್ಕೆ ಮೊದಲು ಉಡುಪಿ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದ ಆಸ್ಕರ್ ಫೆರ್ನಾಂಡಿಸ್ ಸತತ ಗೆಲ್ಲುತ್ತಾ ಬಂದಿದ್ದರು. 1971 ರಲ್ಲಿ ಬಂಟ ಸಮುದಾಯದ ಕೆ.ಜಿ ಶೆಟ್ಟಿ, 1977 ರಿಂದ 1980, 1984, 1989 ಬಿಲ್ಲವ ಸಮುದಾಯದ ಜನಾರ್ದನ ಪೂಜಾರಿ, 1991 ರಿಂದ 2003 ರವರೆಗೆ ಧನಂಜಯ ಕುಮಾರ್, 2004 ರಲ್ಲಿ ಡಿವಿ ಸದಾನಂದ ಗೌಡ, 2009 ರಿಂದ ನಳಿನ್ ಕುಮಾರ್ ಕಟೀಲ್ ಸತತವಾಗಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಇತರ ಪಕ್ಷಗಳ ವಿಷಯ ಬಿಟ್ಟು ಬಿಡಿ. ಆದರೆ ಹೆಸರಿಗೆ ಜಾತ್ಯತೀತ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಈವರೆಗೂ ಮುಸಲ್ಮಾನ ಅಭ್ಯರ್ಥಿಗಳಿಗೆ ಒಂದು ಭಾರಿಯಾದರೂ ಟಿಕೆಟ್ ಕೊಡುವ ಮನಸ್ಸು ಮಾಡಿಲ್ಲ.! ಓಟು ಮಾತ್ರ ಮುಸ್ಲಿಮರದ್ದು ಬೇಕೇ.? ಅನ್ನುವ ಮಾತುಗಳು ಇದೀಗ ಕೇಳಿ ಬರುತ್ತಿದೆ. ಬಿಲ್ಲವರಲ್ಲಿ ಶೇಕಡಾ 90 ರಷ್ಟು ಬಿಜೆಪಿ ಮತಬ್ಯಾಂಕ್ ಹೊಂದಿದ್ದು, ಕೇವಲ ಶೇಕಡಾ 10 ರಷ್ಟು ಮತಗಳು ಕಾಂಗ್ರೆಸ್ ಪರ ಬೀಳುತ್ತಿದ್ದು, ಆದರೆ ಕಾಂಗ್ರೆಸ್ ಪಕ್ಷಕ್ಕೆ ಶೇಕಡಾ 90 ಕ್ಕಿಂತ ಹೆಚ್ಚು ಮತ ನೀಡುವ ಮುಸಲ್ಮಾನರನ್ನು ಕಡೆಗಣಿಸಿ ಬಿಲ್ಲವರಿಗೆ ಮಣೆ ಹಾಕುತ್ತಾ ಬಂದಿದೆ. ಈ ಬಾರಿಯೂ ಬಿಲ್ಲವ ಮುಖಂಡರು ಪ್ಲೆಕ್ಸ್ ಮೊರೆ ಹೋಗಿ ಟಿಕೆಟ್ ಗಿಟ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸ್ವಾಮೀಜಿಗಳ ಮುಖಾಂತರ ಹೈಕಮಾಂಡ್ ಗೆ ಒತ್ತಡ ಹಾಕುವ ತಂತ್ರ ಬಿಲ್ಲವ ಮುಖಂಡರು ನಡೆಸುತ್ತಿದ್ದಾರೆ. ಪನಾಮ ಧಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸೂಟ್ ಬೂಟು ಧರಿಸಿ ತಾವೇ ಅಭ್ಯರ್ಥಿಗಳೆಂದು ಎಲ್ಲೆಡೆ ಪ್ರಚಾರ ನಡೆಸುತ್ತಾ ಬರುತ್ತಿದ್ದಾರೆ. ಶುಭಾಶಯಗಳ ಪ್ಲೆಕ್ಸ್ ಗಳು ನಗರದೆಲ್ಲೆಡೆ ರಾರಾಜಿಸುತ್ತಿದೆ. ಅದರಲ್ಲೂ ಜಿಲ್ಲಾಧ್ಯಕ್ಷರು ಪಕ್ಷದ ಪಾಲಿಗೆ ಶನಿಯಂತೆ ವಕ್ಕರಿಸಿದ್ದು, ಕಾಲಿಟ್ಟ ಕಡೆ ಕಾಂಗ್ರೆಸ್ ಮಕಾಡೆ ಮಲಗಿದೆ. ಜಾತಿಯ ಹೆಸರಿನಲ್ಲಿ ಅಧಿಕಾರ ಇವರಿಗೆ ಬೇಕು, ಇವರ ಸ್ವಂತ ಕ್ಷೇತ್ರದಲ್ಲೂ ಇವರದೇ ಸಮುದಾಯದ,ಕುಟುಂಬದ ಅಭ್ಯರ್ಥಿ ಕಣಕ್ಕಿಳಿದರೂ ಗೆಲ್ಲಿಸಿಕೊಡುವ ತಾಕತ್ತು ಇವರಿಗಿಲ್ಲ. ಮತ್ತೆ ಯಾವ ಪುರುಷಾರ್ಥಕ್ಕೆ ಲೋಕಸಭೆಯತ್ತ ಕಣ್ಣು ನೆಟ್ಟಿರುವುದು.?

ಮುಸ್ಲಿಂ ಸಮುದಾಯ ಈ ಬಾರಿಯಾದರೂ ಕಾಂಗ್ರೆಸ್ ಟಿಕೆಟ್ ಪಡೆಯುವ ಬಗ್ಗೆ ಸಮುದಾಯದ ಹಿತ ಚಿಂತಕರು, ನಾಯಕರು, ಧಾರ್ಮಿಕ ಮುಖಂಡರು ಚಿಂತಿಸಬೇಕಿದೆ. ಸೋಲು-ಗೆಲುವು ನಂತರದ್ದು. ಬಂಟ, ಬಿಲ್ಲವರಿಗೆ ಟಿಕೆಟ್ ಕೊಟ್ಟು ಹಾಗಿದೆ. ಕಳೆದ 25 ವರ್ಷಗಳಿಂದ ಅಭ್ಯರ್ಥಿಗಳು ಸೋಲುತ್ತಾ ಬರುತ್ತಿದ್ದಾರೆ. ಆದರೆ ಈ ಬಾರಿ ಯಾಕೆ ಹೊಸ ಪ್ರಯೋಗ ಮಾಡಬಾರದು.?ಒಮ್ಮೆ ಮುಸಲ್ಮಾನ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟು ನೀಡಿ ಅನ್ನುವ ಅಭಿಯಾನವು ಜಿಲ್ಲೆಯಲ್ಲಿ ಸದ್ದಿಲ್ಲದೆ ಬಹಳ ಜೋರಾಗಿ ನಡೆಯುತ್ತಿದೆ.

ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಮುಸ್ಲಿಂ ನಾಯಕರಿದ್ದರೂ ವರ್ಚಸ್ಸು ಉಳ್ಳ, ಎಲ್ಲಾ ಸಮುದಾಯದವರನ್ನು ಒಂದೇ ರೀತಿಯಲ್ಲಿ ಕೊಂಡು ಹೋಗುವ ನಾಯಕತ್ವದ ಕೊರತೆಯಿದೆ ಅನ್ನುವುದನ್ನು ಒಪ್ಪಿಕೊಳ್ಳಬೇಕು. ಕೇವಲ ಓಟು ಒತ್ತಿ ಬಂದುದರ ಫಲವಿದು. ಆದರೆ ಈಗಿನ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸರ್ವಸಮ್ಮತ ಆಯ್ಕೆ ಅನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಕೇವಲ ಮುಸ್ಲಿಂ ಸಮುದಾಯ ಮಾತ್ರವಲ್ಲ ವಿವಿಧ ಸಮುದಾಯದ ಜನರು ಇನಾಯತ್ ಅಲಿ ಬಗ್ಗೆ ಒಳ್ಳೆಯ ಅಭಿಪ್ರಾಯ, ಗೌರವವನ್ನು ಹೊಂದಿದ್ದಾರೆ. ಎಲ್ಲಾ ಧರ್ಮದ ಧಾರ್ಮಿಕ ಕ್ಷೇತ್ರಗಳ ಕಾರ್ಯಕ್ರಮಕ್ಕೂ ಇನಾಯತ್ ಅಲಿ ಅವರನ್ನು ಆಹ್ವಾನಿಸುತ್ತಿದ್ದಾರೆ. ಉತ್ತಮ ಸ್ವಭಾವ, ಹೊಂದಾಣಿಕೆಯ ಇಚ್ಚಾಶಕ್ತಿ, ಎಲ್ಲರನ್ನೂ ಹೊಂದಾಣಿಕೆಯಲ್ಲಿ ಕೊಂಡೊಯ್ಯುವ ಚಾಣಕ್ಯತನದ ಶ್ರೀಮಂತಿಕೆ, ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಒಳ್ಳೆಯ ಸಂಬಂಧವೂ ಇದೆ. ಉಪಮುಖ್ಯಮಂತ್ರಿ ಡಿಕೆಶಿ ಅವರ ಅತ್ಯಂತ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಯುವ ಸಮುದಾಯಕ್ಕೆ ಶಕ್ತಿ ತುಂಬುವ ವ್ಯಕ್ತಿತ್ವ, ನಾಯಕತ್ವದ ಗುಣವೂ ಇವರಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆಯ ಗಳಿಗೆಯಲ್ಲಿ ಟಿಕೆಟ್ ಘೋಷಣೆಯಾಗಿತ್ತು. ಮೇಲಾಗಿ ಇನಾಯತ್ ಅಲಿ ಬಗ್ಗೆ ಮತದಾರರಿಗೆ ಮುಖ ಪರಿಚಯವೂ ಕಡಿಮೆ ಇತ್ತು. ಆದರೆ ಈಗ ಇನಾಯತ್ ಅಲಿ ಯಾರೆಂದು ಜಿಲ್ಲೆಯ ಜನತೆಯ ಸಂಪೂರ್ಣ ತಿಳಿದಿದೆ. ಅವರ ಕಾರುಣ್ಯ ಸೇವೆಯ ಬಗ್ಗೆ ಜನತೆಗೆ ಒಲವಿದೆ. ಎಲ್ಲಾ ಸಮುದಾಯದ ಪ್ರೀತಿಗೆ ಪಾತ್ರರಾಗಿರುವ ಇನಾಯತ್ ಅಲಿಯವರಿಗೆ ಈ ಬಾರಿ ಲೋಕಸಭಾ ಟಿಕೆಟ್ ನೀಡಿದರೆ ಅಚ್ಚರಿಯ ಫಲಿತಾಂಶ ಬರುವ ಎಲ್ಲಾ ಸಾಧ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ತುರ್ತು ಗಮನ ಹರಿಸಬೇಕಿದೆ.

ಇನ್ನು ಜಿಲ್ಲೆಯ ಜಾತ್ಯತೀತ ಒಕ್ಕೂಟ, ಸಮಾನ ಮನಸ್ಕ ಮುಸ್ಲಿಮರು ಒಟ್ಟಾಗಿ ಗುಪ್ತ ಸಭೆ ಸೇರಿದ್ದು, ಕಾಂಗ್ರೆಸ್ ಪಕ್ಷದಿಂದ ನ್ಯಾಯಪರ, ಸೌಹಾರ್ದ ಪರ ಉಳ್ಳ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಮಾತ್ರ ಬೆಂಬಲಿಸುವುದು ಇಲ್ಲವಾದರೆ ಪರ್ಯಾಯ ಶಕ್ತಿ ಹುಟ್ಟು ಹಾಕುವ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಲ್ಲೆಯ ನಾಡಿಮಿಡಿತ ತಿಳಿಯದ, ಅಲ್ಪಸಂಖ್ಯಾತರಿಗೆ ಅನ್ಯಾಯವಾದಾಗ ತುಟಿ ಬಿಚ್ಚದ ನಾಯಕರಿಗೆ ಕಾಂಗ್ರೆಸ್ ಮಣೆ ಹಾಕಿದರೆ ಜಾತ್ಯತೀತ ಒಕ್ಕೂಟ ಈ ಬಾರಿ ಕಾಂಗ್ರೆಸ್ ಗೆ ಕೈ ಕೊಡುವುದಂತು ನಿಚ್ಚಳವಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಮುಸಲ್ಮಾನರಿಗೆ ಟಿಕೆಟ್ ಎಂಬುದನ್ನು ಘೋಷಣೆ ಮಾಡಲಿ ಅನ್ನುವ ಕೂಗು ಕೇಳಿಬರ ತೊಡಗಿದೆ. ಇದು ಇನ್ನಷ್ಟು ವ್ಯಾಪಕಗೊಳ್ಳುವ ಸಾಧ್ಯತೆ ಇದೆ.