ರಾಜ್ಯದಲ್ಲಿ 2019 ರ ಏಪ್ರಿಲ್ 1 ಕ್ಕಿಂತಲೂ ಮೊದಲು ನೋಂದಣಿಯಾದ ವಾಹನಗಳಿಗೆ ‘ಅತಿ ಸುರಕ್ಷಿತ ನೋಂದಣಿ ಫಲಕ ( ಎಚ್ ಎಸ್ ಆರ್ ಪಿ) ಅಳವಡಿಕೆಗೆ ಸರ್ಕಾರ ವಿಧಿಸಿರುವ ನವೆಂಬರ್ 17 ರ ಗಡುವು ಸಮೀಪಿಸಿದ್ದು, ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಆದರೆ, ರಾಜ್ಯದಲ್ಲಿ ಬಹುತೇಕ ಸವಾರರು ನಂಬರ್ ಪ್ಲೇಟ್ ಬದಲಾವಣೆಗೆ ಒಲವು ತೋರಿಲ್ಲ. ಸರಕಾರದ ಆದೇಶ ಪ್ರಶ್ನಿಸಿದ ಅರ್ಜಿ ಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇರುವುದರಿಂದ, ಈ ಗಡುವು ಅನ್ವಯವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಾಹನ ಮಾಲೀಕರಲ್ಲಿ ಗೊಂದಲ ಮನೆ ಮಾಡಿದೆ. ಅಲ್ಲದೆ, ರಾಜ್ಯದಲ್ಲಿ 2 ಕೋಟಿಗೂ ಅಧಿಕ ವಾಹನಗಳಿಗೆ ಹೊಸ ಮಾದರಿಯ ನಂಬರ್ ಪ್ಲೇಟ್ ಬದಲಾವಣೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಗಡುವು ಮುಂದೂಡಬಹುದೆಂಬ ನಿರೀಕ್ಷೆ ಯೂ ಜನರಲ್ಲಿದೆ. ಆದರೆ, ಸರಕಾರ ಈವರೆಗೂ ಗಡುವು ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿಲ್ಲ. ಹೀಗಾಗಿ ಗಡುವು ಮುಗಿದರೆ 500 ರೂಪಾಯಿ ಯಿಂದ 1000 ರೂಪಾಯಿ ದಂಡ ಪಾವತಿಸಬೇಕಾಗಬಹುದೇ ಎಂಬ ಕಳವಳವೂ ಕಾಡುತ್ತಿದೆ.
ರಾಜ್ಯದಲ್ಲಿ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಾಯಿಸಲಾದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಗಳು, ಲಘು, ಮೋಟಾರು ವಾಹನ, ಪ್ರಯಾಣಿಕ ಕಾರು, ಮಧ್ಯಮ ಮತ್ತು ಭಾರಿ ವಾಣಿಜ್ಯ ಸೇರಿದಂತೆ ಎಲ್ಲಾ ವಾಹನಗಳಿಗೆ ‘ಎಚ್ ಎಸ್ ಆರ್ ಪಿ’ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಕಳೆದ ಆ.17 ರಂದು ಸರಕಾರ ಆದೇಶಿಸಿತ್ತು. ಇವು ಅತ್ಯಂತ ಸುರಕ್ಷಿತವಾಗಿದ್ದು, ಈ ನಂಬರ್ ಪ್ಲೇಟ್ ಗಳನ್ನು ಬದಲಿಸುವುದು, ವಿರೂಪಗೊಳಿಸುವುದು, ನಕಲು ಮಾಡುವುದು ಸಾಧ್ಯವಿಲ್ಲ. ವಾಹನಗಳ ಕಳವು ಮತ್ತು ಕದ್ದ ವಾಹನಗಳನ್ನು ಬಳಸಿ ಅಪರಾಧ ಕೃತ್ಯಗಳ ಪತ್ತೆಗೆ ನೆರವಾಗಲಿದೆ. ಹಿಟ್ ಆಂಡ್ ರೈಡ್ ಮುಂತಾದ ರಸ್ತೆ ಅಪಘಾತಗಳ ಸಂದರ್ಭದಲ್ಲಿ ಸುಲಭವಾಗಿ ವಾಹನಗಳ ಸುಳಿವಿಗೂ ಸಹಕಾರಿಯಾಗಲಿದೆ.