ಹಂತಕನಿಗಿತ್ತಾ ಮತೀಯ ನಂಟು.? ಗಗನ ಸಖಿ, ಫ್ಯಾಮಿಲಿ ಮರ್ಡರ್ ಮಿಸ್ಟರಿ.!
ರಾಜ್ಯವನ್ನೇ ಬೆಚ್ಚಿಬೀಳಿಸಿದ ಭಯಾನಕ, ಭೀಭತ್ಸ ಘಟನೆ ಉಡುಪಿ ಜಿಲ್ಲೆಯ ನೇಜಾರು ತೃಪ್ತಿ ನಗರದಲ್ಲಿ ನವೆಂಬರ್ 12 ರಂದು ನಡೆದಿತ್ತು. ಗಗನ ಸಖಿ ಮತ್ತಾಕೆಯ ಫ್ಯಾಮಿಲಿಯನ್ನು ಬೋಳುಮಂಡೆಯ ದುಷ್ಕರ್ಮಿಯೊಬ್ಬ ಸಿನಿಮೀಯ ಶೈಲಿಯಲ್ಲಿ ಬಂದು.. ಕೊಂದು..ಹೊರಟು ಹೋಗಿದ್ದ. ಆ ಬೋಳುಮಂಡೆಯ ಕ್ರಿಮಿನಲ್ ಅನ್ನು ಅದೇ ಸಿನಿಮಾ ಶೈಲಿಯಲ್ಲಿ ಪೊಲೀಸರು ಟ್ರೇಸ್ ಮಾಡಿ ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಕೆಲವು ವರ್ಷಗಳ ಹಿಂದೆ ಕರಾವಳಿ ಭಾಗದಲ್ಲಿ ಹಿಂದೂ ಯುವತಿಯರ ನಾಪತ್ತೆ ಪ್ರಕರಣ ಬಹಳಷ್ಟು ಸದ್ದುಗದ್ದಲ ಮಾಡಿತ್ತು. ಮತೀಯ ಸಂಘಟನೆಗಳು ‘ಲವ್ ಜಿಹಾದ್’ ಫೇಕ್ ಸ್ಟೋರಿ ಸೃಷ್ಟಿಸಿ ರಾಜ್ಯದೆಲ್ಲೆಡೆ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ನಾಪತ್ತೆಯಾದ ಯುವತಿಯರನ್ನು ರೇಪ್ ಮಾಡಿ ಸಯನೈಡ್ ಕೊಟ್ಟು ಕೊಲ್ಲುತ್ತಿದ್ದ ಭಯಾನಕ ಕಿಲ್ಲರ್ ಮೋಹನ್ ಅರೆಸ್ಟ್ ಆಗುತ್ತಿದ್ದಂತೆ ಮತೀಯ ಸಂಘಟನೆಗಳು ಸೈಲೆಂಟಾಗಿ ಬಿಟ್ಟಿದ್ದವು.
ಅದೇ ಸಯನೈಡ್ ಮೋಹನ್ ನಂತಹ ಪೈಶಾಚಿಕ, ವಿಕ್ಷಿಪ್ತ ಕೊಲೆಗಾರನಾಗಿದ್ದಾನೆ ಪ್ರವೀಣ್ ಅರುಣ್ ಚೌಗಲೆ. ರೌಡಿ ಶೀಟರ್ ಗಳು, ವೃತ್ತಿ ಪರ ಕೊಲೆಗಾರರು ಬೆಳಗ್ಗಿನ ಹೊತ್ತು ಪ್ರಶಾಂತ ವಾತಾವರಣದಲ್ಲಿ ಭಯಾನಕ ರೀತಿಯ ಹತ್ಯೆ ಮಾಡುವುದು ಸಾಧ್ಯವಿಲ್ಲ. ಕ್ರೈಂ ಫೀಲ್ಡಿನಲ್ಲಿ ದಂಡುಪಾಳ್ಯ ಗ್ಯಾಂಗ್ ನಂತಹ ವಿಕ್ಷಿಪ್ತ ಕೊಲೆಗಾರರಿಗೆ ಮಾತ್ರ ಇದು ಸಾಧ್ಯ. ಪ್ರವೀಣ್ ಚೌಗಲೆ ಅನ್ನುವ ನಿರ್ದಯಿ ಕೊಲೆಗಾರ ಇದೇ ಕೆಟಗರಿಗೆ ಸೇರುತ್ತಾನೆ. ಆತನಿಗೆ ಮರಣದಂಡನೆ ನೀಡುವಂತೆ ಸ್ವಾಭಾವಿಕವಾಗಿ ಎಲ್ಲೆಡೆ ಕೇಳಿಬರುತ್ತಿದೆ.
ಒನ್ ವೇ ಲವ್ವಿಗೆ ಬಿದ್ದು ಜಸ್ಟ್ ಒಂದು ಕೊಲೆ ಮಾಡಿ ಹೋಗಿದ್ದಾನೆ ಅನ್ನುವ ಸಿಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಕೊಲೆ ಮಾಡಲು ಪೂರ್ವನಿಯೋಜಿತವಾಗಿಯೇ ಈತ ಬಂದಿದ್ದ. ನಾಲ್ವರನ್ನು ಹದಿನೈದು ನಿಮಿಷಗಳ ಅಂತರದಲ್ಲಿ ಭೀಕರವಾಗಿ ಕೊಂದು ರಕ್ತಸಿಕ್ತ ಬಟ್ಟೆ ಬದಲಾಯಿಸಿ, ಪೊಲೀಸರಿಗೆ ಕ್ಲೂ ಸಿಗಬಾರದೆಂದು ನಾಲ್ಕು ಬಾರಿ ವಾಹನ ಬದಲಾಯಿಸಿ ಹೋಗಿದ್ದ. ಒಬ್ಬ ಎಕ್ಸ್ ಫರ್ಟ್ ಕಿಲ್ಲರ್ ಮಾಡಬಹುದಾದ ಕುಕೃತ್ಯ ಗಳನ್ನೆಲ್ಲಾ ಈತ ಮಾಡಿದ್ದ.
ಸತತ 36 ಬಾರಿ ಕರೆ ಮಾಡಿದ್ದ ಹಂತಕ
ಹಂತಕ ಪ್ರವೀಣ್ ಮೂಲತಃ ಮಹಾರಾಷ್ಟ್ರದ ಸಾಂಗ್ಲಿಯವ. ಕಳೆದ ಏಳು ವರ್ಷಗಳಿಂದ ಮಂಗಳೂರು ಏರ್ಪೋರ್ಟ್ ನಲ್ಲಿ ಕ್ಯಾಬಿನ್ ಕ್ರೂ ಆಗಿ ಕೆಲಸಕ್ಕಿದ್ದ. ಏಳು ತಿಂಗಳ ಹಿಂದೆಯಷ್ಟೇ ಅಯ್ನಾಝ್ ಗಗನಸಖಿ ಟ್ರೈನಿಯಾಗಿ ಮಂಗಳೂರು ಏರ್ಪೋರ್ಟ್ ಸೇರಿದ್ದಳು. ಕ್ಯಾಬಿನ್ ಕ್ರೂ ಅಂದರೆ ಗಗನಸಖಿಯರೊಂದಿಗೆ ಕರ್ತವ್ಯ ನಿರ್ವಹಿಸುವುದು. ಸ್ಫುರದ್ರೂಪಿ ಅಯ್ನಾಝ್ ಮೇಲೆ ಬೋಳು ಮಂಡೆಯ ಪ್ರವೀಣನಿಗೆ ಕಣ್ಣು ಬಿತ್ತು. ಸಹೋದ್ಯೋಗಿ ನೆಲೆಯಲ್ಲಿ ಪ್ರವೀಣ್ ನೊಂದಿಗೆ ಹೆಚ್ಚಿನ ಸಲುಗೆ ಹೊಂದಿದ್ದಳು ಅಯ್ನಾಝ್. ಎರಡು ಮೂರು ಬಾರಿ ಇದೇ ಪ್ರವೀಣ್ ನೇಜಾರಿನಲ್ಲಿರುವ ಅಯ್ನಾಝ್ ಮನೆಗೆ ಹೋಗಿದ್ದ. ಏಕಮುಖವಾಗಿ ಪ್ರೀತಿಸುತ್ತಿದ್ದ ಪ್ರವೀಣ್ ಅಯ್ನಾಝ್ ಬರ್ತ್ ಡೇ ಗೇ ಉಂಗುರ ಗಿಫ್ಟ್ ಮಾಡಿ ಅದನ್ನು ಎಲ್ಲರ ಮುಂದೆ ಅಯ್ನಾಝ್ ಬೆರಳಿಗೆ ತೊಡಿಸಿದ್ದನಂತೆ. ಇದು ಅಯ್ನಾಝ್ ಕುಟುಂಬವನ್ನು ಗಲಿಬಿಲಿ ಮಾಡಿತ್ತು. ಅಯ್ನಾಝ್ ಪ್ರವೀಣ್ ನಿಂದ ದೂರ ಇರುವಂತೆ ಸೂಚಿಸಿದರು. ಇತ್ತ ಅಯ್ನಾಝ್ ಗೆ ಒಳ್ಳೆಯ ಹುಡುಗ ನೋಡಿ ಮದುವೆ ಮಾಡಿಸುವ ಪ್ಲ್ಯಾನ್ ಸಜ್ಜುಗೊಳಿಸಿದರು ಕುಟುಂಬ ವರ್ಗ. ಇದು ಸಹಜವಾಗಿ ಪ್ರವೀಣ್ ನನ್ನು ಕೆರಳಿಸಿತ್ತು. ಇತ್ತ ಅಯ್ನಾಝ್ ಕೂಡ ಮೊದಲಿನಂತೆ ಪ್ರವೀಣ್ ನೊಂದಿಗೆ ಸಲುಗೆಯಿಂದ ಇರದೆ ಅಂತರ ಕಾಪಾಡತೊಡಗಿದಳು. ಅಯ್ನಾಝ್ ಹತ್ಯೆಯ ಮುನ್ನ ಪ್ರವೀಣ್ ಸತತವಾಗಿ 36 ಬಾರಿ ಕರೆ ಮಾಡಿದ್ದನಂತೆ. ಆದರೆ ಅಯ್ನಾಝ್ ಕರೆ ಸ್ವೀಕರಿಸುವ ಗೋಜಿಗೆ ಹೋಗಿಲ್ಲ. ತನ್ನ ಆಸೆಗೆ ತಣ್ಣಿರೆರಚಿದ ಕುಟುಂಬವನ್ನೇ ಸರ್ವನಾಶ ಮಾಡಲು ಅಯ್ನಾಝ್ ಮನೆಗೆ ನುಗ್ಗಿ ನಾಲ್ವರ ಹತ್ಯೆ ನಡೆಸಿದ. ಪೊಲೀಸರು ಹೇಳುವಂತೆ ಅಯ್ನಾಝ್ ಒಬ್ಬಳೇ ಗುರಿಯಾಗಿದ್ದಳು. ಸಾಕ್ಷ್ತ ನಾಶಕ್ಕಾಗಿ ಅಡ್ಡ ಬಂದವರನ್ನು ಕೊಲ್ಲಲಾಯಿತು. ಈ ಕಾಗಕ್ಕ ಗುಬ್ಬಕ್ಕ ಕಥೆ ಕೇಳಲು ಇಲ್ಲಿನ ಜನ ದಡ್ಡರಲ್ಲ. ಅಯ್ನಾಝ್ ಒಬ್ಬಳೇ ಗುರಿಯಾಗಿದ್ದರೇ ದಾರಿ ಮಧ್ಯೆ ಕೊಂದು ಎಸ್ಕೇಪ್ ಆಗುತ್ತಿದ್ದ. ತನ್ನ ಲವ್ ಮ್ಯಾಟರಿಗೆ ಅಡ್ಡ ಬಂದಿದ್ದ ಕುಟುಂಬವನ್ನೇ ಸರ್ವನಾಶ ಮಾಡುವುದು ಈತನ ಉದ್ದೇಶವಾಗಿತ್ತು. ಅದೇ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿ ಮಾರಣಹೋಮ ನಡೆಸಿದ್ದ.
ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರಿಗೆ ತಿಳಿದಿತ್ತು ಹಂತಕನ ಸುಳಿವು.!
ನೇಜಾರ್ ಹತ್ಯಾಕಾಂಡದ ಕಿಲ್ಲರ್ ಬಲೆಗೆ ಹಾಕಲು ಪೊಲೀಸರಿಗೇನೂ ಕಷ್ಟವಿರಲಿಲ್ಲ. ಸಿಸಿ ಟಿವಿ ಫೂಟೇಜ್ ನಲ್ಲಿ ಬೋಳು ಮಂಡೆ ಸಾಕ್ಷ್ಯ ದೊರೆತಿತ್ತು. ಇತ್ತ ಅಯ್ನಾಝ್ ಕೆಲಸ ಮಾಡುವ ಏರ್ಪೋರ್ಟ್ ಗೆ ತೆರಳಿದಾಗ ಘಟನೆಯ ಸಂಪೂರ್ಣ ಚಿತ್ರಣ ಪೊಲೀಸರ ಕೈಗೆ ಸಲೀಸಾಗಿ ಸಿಕ್ಕಿತ್ತು. ಆದರೆ ಕಿಲ್ಲರ್ ನನ್ನು ಬೇಟೆಯಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. ಮೊಬೈಲ್ ಲೊಕೇಶನ್ ಆಧರಿಸಿದಾಗ ಸ್ವಿಚ್ಡ್ ಆಫ್ ಆಗಿತ್ತು. ಮೊಬೈಲ್ ಟ್ರೇಸ್ ನಲ್ಲಿದ್ದ ಪೊಲೀಸರಿಗೆ ಎರಡು ದಿನದ ನಂತರ ಮೊಬೈಲ್ ಆನ್ ಮಾಡಿ ಹಂತಕ ಸಂಬಂಧಿಕ ನೀರಾವರಿ ಇಲಾಖೆಯ ಅಧಿಕಾರಿಗೆ ಕರೆ ಮಾಡಿ ಮನೆಗೆ ಬರುವುದಾಗಿ ತಿಳಿಸಿದ್ದ. ಇವಿಷ್ಟೇ ಸಾಕಾಗಿತ್ತು ಪೊಲೀಸರಿಗೆ. ಅಲರ್ಟ್ ಆಗಿ ಬೆಳಗಾವಿಯಿಂದಲೇ ಎತ್ತಾಕಿಕೊಂಡು ಬಂದರು.
ಮುಸ್ಲಿಂ ಯುವತಿಯರೇ ಈತನ ಟಾರ್ಗೆಟ್ ಆಗಿದ್ದರೇ.!
ಹಂತಕ ಪ್ರವೀಣ್ ನಿಗೆ ಮತೀಯ ಸಂಘಟನೆಗಳ ನಂಟು ಇದೆಯಾ ಅನ್ನುವ ಬಗ್ಗೆ ಪೊಲೀಸ್ ಇಲಾಖೆ ಜನ್ಮ ಜಾಲಾಡುವ ಕೆಲಸ ಮಾಡಬೇಕಿದೆ. 40 ರ ಪ್ರಾಯದ ಪ್ರವೀಣ್ ಮುಸ್ಲಿಂ ಮಹಿಳೆಯೊಬ್ಬಳನ್ನು ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರ ಗೊಳಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಎರಡು ಮಕ್ಕಳ ತಾಯಿ ಇದೀಗ ಮಂಗಳೂರಿನಲ್ಲೇ ವಾಸವಿದ್ದಾಳೆ. ಪತ್ನಿ ಮಕ್ಕಳಿದ್ದರೂ ಇಪ್ಪತ್ತೊಂದರ ಹದಿ ಹರೆಯದ ಮುಸ್ಲಿಂ ಯುವತಿಯ ಮೇಲೆ ಕಣ್ಣು ಹಾಕಿ ಅವರ ಕುಟುಂಬವನ್ನು ಬರ್ಬಾದ್ ಮಾಡಿದ ಪ್ರವೀಣ್ ಹಿನ್ನೆಲೆ ಏನು? ಪ್ರೇರಣೆಯಿಂದ ಇಂತಹ ಕುಕೃತ್ಯಕ್ಕೆ ಪ್ರೇರಣೆ ನೀಡಿದವರಾರು.? ಎಳವೆಯಲ್ಲೇ ಬಲಪಂಥೀಯ ವಿಚಾರಧಾರೆ ಗೆ ಬಲಿಯಾಗಿ ಮುಸ್ಲಿಂ ಯುವತಿಯರನ್ನೇ ಟಾರ್ಗೆಟ್ ಮಾಡುವುದು ಈತನ ಚಾಳಿಯೇ.? ಅನ್ನುವ ದಿಶೆಯಲ್ಲೂ ತನಿಖೆ ನಡೆಸಬೇಕಿದೆ. ಕುಕೃತ್ಯದ ಬಗ್ಗೆ ಪೊಲೀಸರು ಸರಿಯಾದ ತನಿಖೆ ನಡೆಸಿ, ನಾಗರಿಕರಿಗೆ ದೈರ್ಯ ತುಂಬುವ ಕೆಲಸ ಮಾಡಬೇಕಿದೆ. ಇನ್ನೆರಡು ಕಾರಣ ಯಾವುದು ಎಂಬ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಯಬೇಕಿದೆ.