ನೇಜಾರು ಭೀಕರ ಹತ್ಯಾಕಾಂಡ: ಮಮ್ಮುಲ ಮರುಗಿ ಬಂಧುತ್ವಕ್ಕೆ ಅರ್ಥ ಕಲ್ಪಿಸಿದ ಉಡುಪಿ ಜನತೆ

ಕರಾವಳಿ

ದೀಪಾವಳಿ ಆಚರಿಸದೆ ಸಂತ್ರಸ್ತ ಕುಟುಂಬದ ಬೆನ್ನಿಗೆ ನಿಂತ ಸ್ಥಳೀಯ ಹಿಂದೂ ಸಮುದಾಯ

ಹೇಳಿ ಕೇಳಿ ಉಡುಪಿ ಹೆಸರು ಕೇಳಿದರೆ ಸಾಕು ರಾಜ್ಯದ ಜನತೆ ಹೌಹಾರಿ ಬಿಡುತ್ತಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಎಲ್ಲರನ್ನೂ ಹಿಂದಿಕ್ಕಿ ಫಸ್ಟ್ ಬರುತ್ತಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಮತೀಯ ಕಾರಣಕ್ಕೆ ರಾಜ್ಯದಲ್ಲೇ ಫಸ್ಟ್. ಇನ್ನು ಉಡುಪಿಯಲ್ಲಿ ಹಿಜಾಬ್ ರಾದ್ಧಾಂತ ಸುದ್ದಿಯಾಗಿ ದೇಶ ವಿದೇಶಗಳಲ್ಲಿ ಉಡುಪಿಗೆ ಅಪಕೀರ್ತಿ ತಂದಿದ್ದಂತೂ ಸುಳ್ಳಲ್ಲ. ಅದರ ಜೊತೆಗೆ ರಾಜಕೀಯ ನಾಯಕರು, ಮತೀಯ ಸಂಘಟನೆಗಳು ತಲ್ವಾರ್, ಹೊಡಿ-ಬಡಿ ಹೇಟ್ ಸ್ಪೀಚ್ ಗಳೆಲ್ಲ ಕರಾವಳಿ ಭಾಗದಿಂದಲೇ ಹುಟ್ಟಿ ಬೇರೆ ಕಡೆ ಪಸರಿಬಿಡುತ್ತದೆ. ಅಬ್ಬಬ್ಬಾ ಇಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆ ಹೇಗಿರಬಹುದೆಂದು ಅನ್ಯ ಜಿಲ್ಲೆಯ ಜನ ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ಅವಿಭಜಿತ ಜಿಲ್ಲೆಯ ಸೌಹಾರ್ದತೆ ಹದಗೆಟ್ಟಿದೆ. ಆದರೆ ಬೆರೆಳೆಣಿಕೆಯ ಮತೀಯ ಶಕ್ತಿಗಳನ್ನು ಕೆಲವು ಮೀಡಿಯಾಗಳು ವೈಭವೀಕರಿಸಿ ಕರಾವಳಿ ನೋಡಿ ಹೀಗಿದೆ ಎಂದು ಅನ್ಯ ಜಿಲ್ಲೆಗೆ ಕೆಟ್ಟ ಸ್ಥಿತಿಯನ್ನು ತೋರಿಸಿದಷ್ಟು ಅವಿಭಜಿತ ಜಿಲ್ಲೆಯ ಸೌಹಾರ್ದತೆ ಕೆಟ್ಟಿಲ್ಲ ಅನ್ನುವುದು ಸಮಾಧಾನಕರ ಸಂಗತಿ. ಜಿಲ್ಲೆಯಲ್ಲಿ ಮೇಲ್ನೋಟಕ್ಕೆ ಹಿಂದೂ-ಮುಸ್ಲಿಂ ಮಧ್ಯೆ ಏನೂ ಸರಿಯಿಲ್ಲ ಎಂದು ಕಂಡುಬಂದರೂ ಗ್ರೌಂಡ್ ಸ್ಥಿತಿಗತಿ ನೋಡಿದರೆ ಇಲ್ಲಿ ಇನ್ನೂ ಕೂಡ ಮಾನವೀಯತೆ ಜೀವಂತವಾಗಿದೆ.

ನಾಲ್ಕು ದಿನಗಳ ಹಿಂದೆ ಉಡುಪಿ ನೇಜಾರಿನಲ್ಲಿ ಪೈಶಾಚಿಕ ಕೃತ್ಯಕ್ಕೆ ನಾಲ್ವರು ಅಮಾಯಕರು ಜೀವ ತೆತ್ತಾಗ ಇಡೀ ಉಡುಪಿಯ ಹಿಂದೂ-ಮುಸ್ಲಿಂ ಜನತೆ ಮಮ್ಮುಲ ಮರುಗಿದ್ದರು. ಸಾಕಷ್ಟು ಆಕಾಂಕ್ಷೆಯನ್ನಿಟ್ಟು ಗಗನಸಖಿ ಆಗಿದ್ದ ಯುವತಿ, ಪುಟ್ಟ ಯುವಕ ಸೇರಿದಂತೆ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆರೋಪಿ ಯಾವುದೇ ಧರ್ಮೀಯನಿರಲಿ ಆತನಿಗೆ ಮರಣ ದಂಡನೆ ನೀಡುವಂತೆ ಇಲ್ಲಿನ ಜನ ಧರ್ಮ ಭೇದ ಮರೆತು ಆಗ್ರಹಿಸಿದರು. ಆರೋಪಿ ಬಾಡಿಗೆ ನೀಡಿ ರಿಕ್ಷಾ ಮೂಲಕ ಬಂದಿದ್ದನ್ನು ಹಿಂದೂ ಸಮುದಾಯದ ರಿಕ್ಷಾ ಚಾಲಕ ಮಾಧ್ಯಮದ ಮೂಲಕ ಬಹಿರಂಗ ಹೇಳಿಕೆ ನೀಡುವಲ್ಲಿ ಹಿಂದೇಟು ಹಾಕಲಿಲ್ಲ. ಹತ್ಯೆ ನಡೆದ ದಿನದಿಂದ ಮೃತರ ಪಾರ್ಥಿವ ಶರೀರಗಳನ್ನು ಕೋಡಿ ಬೆಂಗ್ರೆಯ ಜುಮ್ಮಾ ಮಸೀದಿಯ ಜಾಗದಲ್ಲಿ ದಫನ ಮಾಡುವವರೆಗೆ ಊರ ಜನ ನಡೆದುಕೊಂಡ ರೀತಿ, ಮೃತರಿಗೆ ಅಂತಿಮ ನಮನಗಳನ್ನು ಸಲ್ಲಿಸಿ ಕಣ್ಣೀರಿಟ್ಟ ಘಟನೆಗಳು, ಮೃತರಾದವರು ಮುಸ್ಲಿಂ ಕುಟುಂಬ ಎಂದು ತಾರತಮ್ಯ ಮಾಡದೆ ಇಲ್ಲಿನ ಹಿಂದೂ ಕುಟುಂಬ ತಮ್ಮ ಮಕ್ಕಳೆ ಈ ರೀತಿ ಆಗಿದ್ದಾರೆ ಅನ್ನುವ ರೀತಿಯಲ್ಲಿ ಕುಟುಂಬವನ್ನು ಸಂತೈಷಿಸುತ್ತಿದ್ದ ಬೆಳವಣಿಗೆಗಳು ಉಡುಪಿ ಜನತೆಯ ಘನತೆಯನ್ನು, ಧರ್ಮ ಸಾಮರಸ್ಯವನ್ನು ಎತ್ತರಕ್ಕೆ ಏರಿಸಿತ್ತು.

ಉಡುಪಿಯ ಜನತೆ ಶನಿವಾರದಿಂದ ಮಂಗಳವಾರದವರೆಗೆ ಹಿಂದೂ ಧರ್ಮೀಯರಿಗೆ ದೀಪಾವಳಿ ಹಬ್ಬವಿದ್ದರೂ, ಹಬ್ಬದ ಸಂಭ್ರಮವನ್ನು ಬದಿಗಿರಿಸಿ ತಮ್ಮ ಕುಟುಂಬದ ಕುಡಿಗಳೇ ಹತ್ಯೆಯಾಗಿದೆ ಅನ್ನುವ ರೀತಿಯಲ್ಲಿ ಸ್ವಾಭಾವಿಕ ಎಂಬಂತೆ ನಡೆದುಕೊಂಡಿದ್ದರು.

ಕುಟುಂಬದ ಸದಸ್ಯರನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬದ ಬೆನ್ನಿಗೆ ನಿಂತು ಸಾಂತ್ವನದ ಸಹಾಯ ಹಸ್ತ ಚಾಚಿ ಅವರ ದು:ಖದಲ್ಲಿ ತಾವೂ ಭಾಗಿಗಳಾಗಿ ಅವರ ಕಣ್ಣೀರನ್ನು ಒರೆಸುವುದರ ಜೊತೆಗೆ ತಾವೂ ದು:ಖದ ಕಟ್ಟೆಯೊಡೆದು ಕಣ್ಣೀರಿಟ್ಟ ದೃಶ್ಯ ಮನಕಲಕುವಂತದ್ದು.

ಇದರ ಜೊತೆಗೆ ದುಷ್ಕೃತ್ಯ ನಡೆದ ನೇಜಾರು ಪಕ್ಕದ ಊರುಗಳಾದ ಹೂಡೆ-ಬೆಂಗ್ರೆ-ಕೋಡಿಬೆಂಗ್ರೆಯ ಹಿಂದೂ ಸಮುದಾಯದ ಪ್ರತಿಯೊಬ್ಬ ನಾಗರಿಕರೂ ದೀಪಾವಳಿ ಹಬ್ಬಕ್ಕೆ ತಂದಿರಿಸಿದ್ದ ಪಟಾಕಿ ಸುಡುಮದ್ದುಗಳ ಚೀಲಗಳನ್ನು ಕಡೆಗಣ್ಣಿನಿಂದಲೂ ನೋಡದೆ, ಯಾವುದೇ ಮನೆಯಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಅಡುಗೆ ಮಾಡದೆ ತಮ್ಮವರೇ ಕಳೆದುಕೊಂಡ ರೀತಿಯಲ್ಲಿ ಇಡೀ ಊರಿನ ಹಿಂದೂ ಸಮುದಾಯ ಕಣ್ಣೀರು ಹಾಕಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

ಮೀಡಿಯಾ-ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ರೀತಿಯಲ್ಲಿ ಇಲ್ಲಿ ಹಿಂದೂ-ಮುಸ್ಲಿಮರು ಇಲ್ಲ. ಎಲ್ಲರೂ ಸೌಹಾರ್ದತೆ ಯಿಂದಲೇ ಬದುಕು ನಡೆಸುತ್ತಿದ್ದಾರೆ. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಕೈ ಜೋಡಿಸುತ್ತಿದ್ದಾರೆ. ಬಂಧುತ್ವದ ನಿಜವಾದ ಅರ್ಥವನ್ನು ಹೂಡೆ-ನೇಜಾರು-ಕೋಡಿಬೆಂಗ್ರೆಯ ಸಜ್ಜನ ಸಮುದಾಯ ಜಗಮೆಚ್ಚುವ ರೀತಿಯಲ್ಲಿ ರಾಜ್ಯಕ್ಕೆ ತೋರಿಸಿಕೊಟ್ಟಿದೆ.