ಕಾಶ್ಮೀರಿ ಪಂಡಿತರೊಬ್ಬರ ಅಂತಿಮ ವಿಧಿಗಳನ್ನು ನೆರೆಹೊರೆಯ ಮುಸ್ಲಿಮರು ನೆರವೇರಿಸಿ ಕೋಮು ಸೌಹಾರ್ದತೆಯ ಸಂಪ್ರದಾಯವನ್ನು ನೆನಪಿಸಿದ್ದಾರೆ.

ರಾಷ್ಟ್ರೀಯ

ಮಂಗಳವಾರ ಸಂಜೆ ನಿಧನರಾದ ಕಾಶ್ಮೀರಿ ಪಂಡಿತರೊಬ್ಬರ ಅಂತಿಮ ವಿಧಿಗಳನ್ನು ಇಲ್ಲಿನ ನೆರೆಹೊರೆಯ ಮುಸ್ಲಿಮರು ನೆರವೇರಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿನ ಕೋಮು ಸೌಹಾರ್ದತೆಯ ಸಂಪ್ರದಾಯವನ್ನು ನೆನಪಿಸಿದ್ದಾರೆ. ಅಶೋಕ್ ಕುಮಾರ್ ವಾಂಗೂ ಅವರು ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಪಾಂಪೋರ್ ಪಟ್ಟಣದ ಡ್ರಂಗಬಾಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು

ಪಾರ್ಥಿವ ಶರೀರವನ್ನು ಜಮ್ಮುವಿಗೆ ಕೊಂಡೊಯ್ಯುವ ಬದಲು ಕಾಶ್ಮೀರ ಪಂಡಿತ ಸಮುದಾಯವು ಇಲ್ಲಿಯೇ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ನಿರ್ಧರಿಸಿತು. ಈ ಸಂದರ್ಭ ನೆರೆಯ ಮುಸ್ಲಿಂ ಸಮುದಾಯದ ಜನರು ಪಂಡಿತರ ನೆರವಿಗೆ ಧಾವಿಸಿದ್ದಾರೆ. ನಿಧನ ಸುದ್ದಿ ತಿಳಿದ ತಕ್ಷಣ, ಇಡೀ ಡ್ರಂಗಬಾಲ್ ಮೊಹಲ್ಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಬಂದು ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಸಹಾಯ ಮಾಡಿದರು. ಪುರುಷರು, ಮಹಿಳೆಯರು ಮತ್ತು ಮಕ್ಕಳೆಲ್ಲರೂ ನೆರವಿಗೆ ಬಂದರು. ಹಾಗಾಗಿ, ಎಲ್ಲವೂ ಸುಸೂತ್ರವಾಗಿ ನೆರವೇರಿತು. ಈ ಸಾಮರಸ್ಯ ಹೊಸದೇನಲ್ಲ, ಇದು ಕಾಶ್ಮೀರಿಯತ್. ಆದರೆ, ಈಗಿನ ಕಾಲದಲ್ಲೂ ಸೌಹಾರ್ದತೆ ತೋರಿದ್ದು ಅತ್ಯಂತ ಸಂತಸದ ವಿಷಯ. ನಾವು ನಿಜಕ್ಕೂ ನಾವು ಧನ್ಯರು’ ಎಂದು ಮೃತಪಟ್ಟ ಅಶೋಕ್ ಕುಮಾರ್ ಅವರ ನೆರೆಯ ಕಾಶ್ಮೀರಿ ಪಂಡಿತ್ ರಾಜು ಭಟ್ ಹೇಳಿದ್ದಾರೆ. ಈ ಪ್ರದೇಶವು ಮೊದಲಿನಿಂದಲೂ ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮರ ಐಕ್ಯತೆಗೆ ಹೆಸರಾಗಿದೆ