ಭ್ರಷ್ಟಾಚಾರಕ್ಕೆ ಕುಮ್ಮಕ್ಕೋ? ಕಾಲಹರಣವೋ? ‘ಸಿಟಿಜನ್ಸ್’ ವಿಶ್ವಾಸ ಕಳೆದುಕೊಂಡಿತೇ ಸಿದ್ದು ಸರ್ಕಾರ.?

ರಾಜ್ಯ

ಬೆಂಗಳೂರು: ಹಿಂದಿನ ಬೊಮ್ಮಾಯಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಾ ಆಡಳಿತಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ದವೂ ರಾಜ್ಯದ ಜನರಲ್ಲಿ ಅನುಮಾನ ಮೂಡುವಂತಾಗಿದೆ. ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗುವಂತಹಾ ಮಾಹಿತಿ ಹಕ್ಕು ಕಾಯಿದೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಕಣ್ಣಾ-ಮುಚ್ಚಾಳೆ ಆಡುತ್ತಿದ್ದು ‘ಸಿಟಿಜನ್ಸ್’ ವಿಶ್ವಾಸ ಕಳೆದುಕೊಳ್ಳುವಂತಿದೆ. ಇದಕ್ಕೆ ಸಾಕ್ಷೀಯಾಗಿದೆ ಈ ಬೆಳವಣಿಗೆ.

ಮಾಹಿತಿ ಹಕ್ಕು ವಿಚಾರದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯೇ ಎಡವಟ್ಟು ಮಾಡುತ್ತಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಾಗ ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರು ದಾಖಲೆಗಳನ್ನು ಕೋರಿ ಅರ್ಜಿ ಸಲ್ಲಿಸುವುದು ಸಾಮಾನ್ಯ. ಆದರೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿ ಈ ಹೊಣೆಗಾರಿಕೆಯಿಂದ ಪಾರಾಗಲು RTI ನಿಯಮವನ್ನೇ ಉಲ್ಲಂಘಿಸುತ್ತಿದೆ. RTI ಅರ್ಜಿಗಳಿಗೆ ”ಕೋರಿರುವ ಮಾಹಿತಿ ಈ ಕಚೇರಿಯಲ್ಲಿ ಲಬ್ಯವಿರುವುದಿಲ್ಲ’ ಎಂಬ ರೆಡಿಮೇಡ್ ಉತ್ತರ ನೀಡುತ್ತಿದೆ.

ಸಿದ್ದು ಸರ್ಕಾರಕ್ಕೆ RTI ಕಾರ್ಯಕರ್ತರ ಮೇಲೇಕೆ ಸಿಟ್ಟು?

ಕೆಲ ಸಮಯದ ಹಿಂದಷ್ಟೇ RTI ಅರ್ಜಿದಾರರ ಮಾಹಿತಿ ಸಂಗ್ರಹಿಸಲು ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ಕ್ರಮ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಮಾಧ್ಯಮಗಳ ವರದಿ ನಂತರ ಆದೇಶ ಹಿಂಪಡೆದಿರುವ ಸರ್ಕಾರದಿಂದ ಇದೀಗ ಮತ್ತೊಂದು ಗೊಂದಲ ಸೃಷ್ಟಿಸಿದೆ. RTI ಅರ್ಜಿಗಳನ್ನೇ ತಿರಸ್ಕರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮಾಹಿತಿ ಹಕ್ಕು ಹೋರಾಟಗಾರರು ಸಿಡಿದೆದ್ದಿದ್ದಾರೆ. ಮುಖ್ಯ ಕಾರ್ಯದರ್ಶಿ (Chief Secretary) ಕಚೇರಿಯಲ್ಲೇ ಅವಾಂತರ ನಡೆದಿದ್ದು ಈ ಬಗ್ಗೆ RTI ಕಾರ್ಯಕರ್ತರ ಸಮೂಹ ಸಮೂಹ ಆಕ್ರೋಶ ಹೊರಹಾಕಿದೆ.

ಈ ಗೊಂದಲಗಳ ನಡುವೆ ಬೆಂಗಳೂರಿನ ‘ಸಿಟಿಜನ್ ರೈಟ್ಸ್ ಫೌಂಡೇಶನ್’ (CRF) ಸಲ್ಲಿಸಿದ ಅರ್ಜಿಗೂ CS ಕಚೇರಿ ಅಧಿಕಾರಿಗಳು, ‘ಕೋರಿರುವ ಮಾಹಿತಿ ಈ ಕಚೇರಿಯಲ್ಲಿ ಲಬ್ಯವಿರುವುದಿಲ್ಲ’ ಎಂಬ ಹಿಂಬರಹ ನೀಡಿ ಕೈತೊಳೆದುಕೊಂಡಿದ್ದಾರೆ. ಜಿಂದಾಲ್ ಭೂ ಕರ್ಮಕಾಂಡ ಸಹಿತ ವಿವಿಧ ಹಗರಣಗಳ ವಿರುದ್ಧ ಕಾನೂನು ಹೋರಾಟ ನಡೆಸಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಇತ್ತೀಚಿಗೆ ರಾಜ್ಯದ ಮೆಡಿಕಲ್ ಕಾಲೇಜುಗಳ ಬಗ್ಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದ್ದ ಮುಖ್ಯ ಕಾರ್ಯದರ್ಶಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ‘ಕೋರಿರುವ ಮಾಹಿತಿ ಈ ಕಚೇರಿಯಲ್ಲಿ ಲಬ್ಯವಿರುವುದಿಲ್ಲ’ ಎಂಬ ರೆಡಿಮೇಡ್ ಹಿಂಬರಹ ನೀಡಿದ್ದಾರೆ.

ಇಷ್ಟೂ ವರ್ಷಗಳ ಕಾಲ RTI ಅರ್ಜಿಗಳನ್ನು ಅಧಿನಿಯಮದ ಕಲಂ 6(3) ಪ್ರಕಾರ ಸಂಬಂಧಪಟ್ಟ ಇಲಾಖೆ/ ಕಚೇರಿಗಳಿಗೆ ವರ್ಗಾವಣೆ ಮಾಡುತ್ತಿದ್ದ ಮುಖ್ಯ ಕಾರ್ಯದರ್ಶಿ ಕಚೇರಿಯು ಇದೀಗ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ನಿಯಮವನ್ನೇ ಮರೆತಿರುವುದು ಅಚ್ಚರಿಯ ಬೆಳವಣಿಗೆಯಂತಿದೆ.

ಮುಖ್ಯ ಕಾರ್ಯದರ್ಶಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಅಧೀನ ಕಾರ್ಯದರ್ಶಿ ಕೆ.ಪ್ರೀತ ಎಂಬವರು ನೀಡಿರುವ ಈ ಹಿಂಬರಹದಿಂದ ಕುಪಿತರಾಗಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’, ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದೆ. ಅಷ್ಟೇ ಅಲ್ಲ, RTI ಅಧಿನಿಯಮದ ಕಲಂ 6(3) ಏನು ಹೇಳುತ್ತದೆ ಎಂಬ ಬಗ್ಗೆ ಪಾಠ ಹೇಳಿದೆ.

RTI ಅರ್ಜಿಯಲ್ಲಿ ಕೋರಿರುವ ಮಾಹಿತಿಯು ಅರ್ಜಿ ಸ್ವೀಕೃತವಾಗಿರುವ ಕಚೇರಿಯಲ್ಲಿ ಲಬ್ಯ ಇಲ್ಲವೆಂದಾದರೆ RTI ಅಧಿನಿಯಮದ ಕಲಂ 6(3) ಪ್ರಕಾರ ಸಂಬಂಧಪಟ್ಟ ಇಲಾಖೆಗೆ ವರ್ಗಾವಣೆ ಮಾಡಲೇಬೇಕು. ಆದರೆ, ಕಾನೂನಿಗೆ ಬೆಲೆ ನೀಡದ ಮುಖ್ಯ ಕಾರ್ಯದರ್ಶಿ ಕಚೇರಿ ವಿರುದ್ದ ಸಿಎಂ ಹಾಗೂ ಸಿಎಸ್‌ಗೆ ದೂರು ಸಲ್ಲಿಸಿರುವ CRF ಅಧ್ಯಕ್ಷ ಕೆ.ಎ.ಪಾಲ್, ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳು CS ಕಚೇರಿ ಸುಪರ್ದಿಯಲ್ಲೇ ಬರುತ್ತದೆಯಲ್ಲವೇ ಈ ಬಗ್ಗೆ CS ಕಚೇರಿ ಅಧಿಕಾರಿಗಳಿಗೆ ತಿಳಿದಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಯೇ? ಅಥವಾ ಕಾಲಹರಣ ಮಾಡುವ ಉದ್ದೇಶ ಹೊಂದಿದ್ದಾರೆಯೇ ಎಂದು ಪ್ರಶ್ನಿಸಿರುವ CRF ಅಧ್ಯಕ್ಷ ಕೆ.ಎ.ಪಾಲ್, ಇಡೀ ದೇಶಕ್ಕೆ ಇರುವುದು ಒಂದೇ ರೀತಿಯ RTI ಅಧಿನಿಯಮ. ಆದರೆ CS ಕಚೇರಿಗೆ ಪ್ರತ್ಯೇಕ ಅದಿನಿಯಮ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿದ್ದು ಸರ್ಕಾರದ ವಿರುದ್ದ RTI ಕಾರ್ಯಕರ್ತರ ಆಕ್ರೋಶ ಸ್ಫೋಟ:

ಮಾಹಿತಿ ಹಕ್ಕು ಅರ್ಜಿಗಳ ವಿಚಾರದಲ್ಲಿ ನಿಯಮ ಪಾಲಿಸದ ಸಿದ್ದರಾಮಯ್ಯ ಸರ್ಕಾರದ ವಿರುದ್ದ RTI ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಹಲವಾರು ಎಡವಟ್ಟುಗಳ ಸಂದರ್ಭದಲ್ಲಿ ಮಾಹಿತಿ ಆಯೋಗ ಹಾಗೂ ರಾಜ್ಯಪಾಲರ ಬಳಿ ದೂರು ನೀಡುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ಪಾರದರ್ಶಕ ಆಡಳಿತಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಬೆಂಗಳೂರಿನ RTI ಅಧ್ಯಯನ ಕೇಂದ್ರದ ಪ್ರಮುಖರಾದ ಬಾಬು ಆಕ್ರೋಶ ಹೊರ ಹಾಕಿದ್ದಾರೆ. ಮುಖ್ಯ ಕಾರ್ಯದರ್ಶಿ ಕಚೇರಿಯೇ ಈ ರೀತಿ ನಡೆದುಕೊಂಡರೆ ಇನ್ನುಳಿದ ಸರ್ಕಾರಿ ಇಲಾಖೆಗಳ ನಡೆ ಹೇಗಿರಬಹುದು ಎಂದು ಬಾಬು ಅವರು ಅಸಮಾಧಾನ ಹೊರಹಾಕಿದ್ದಾರೆ.

CS ಕಚೇರಿ ಅದಿಕಾರಿಗಳ ಎಡವಟ್ಟಿನಿಂದಾಗಿ ಸಿದ್ದರಾಮಯ್ಯ ಸರ್ಕಾರದ ನಿಲುವು ಅನಾವರಣವಾಗಿದೆ ಎಂದು RTI ಕಾರ್ಯಕರ್ತ ಎಂ. ಆಲ್ವಿನ್ ಅವರೂ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕ ಸರ್ಕಾರವು ಭಾರತದಲ್ಲಿ ಇಲ್ಲವೇ ಎಂದು ಪ್ರಶ್ನಿಸಿರುವ ಅವರು, ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.