ಮಂಗಳೂರು ನಗರದ ಐದು ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷದ ಕಾರಾಗೃಹವಾಸದ ಸಜೆ, ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಕರಾವಳಿ

ಅಪರೂಪದ ಪ್ರಕರಣ ಒಂದರಲ್ಲಿ ಮಂಗಳೂರು ಗ್ರಾಹಕ ನ್ಯಾಯಾಲಯವು ಗ್ರಾಹಕರ ಪರವಾಗಿ ನೀಡಿದ್ದ ಆದೇಶವನ್ನು ಪಾಲಿಸದೆ ಉಲ್ಲಂಘನೆ ಮಾಡಿದ್ದ ಕಾರಣಕ್ಕೆ ಮಂಗಳೂರು ನಗರದ ಐದು ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷದ ಕಾರಾಗೃಹವಾಸದ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವನ್ನು ನೀಡುವಂತೆ ಆದೇಶಿಸಿದೆ.

ಮಂಗಳೂರಿನ ರಾಮ್ ಭವನದಲ್ಲಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಮಾರಿಯನ್ ಇನ್‌ಫ್ರಾಸ್ಟ್ರಕ್ಚರ್‌ನ ಪಾಲುದಾರಾರಾಗಿರುವ ಉಜ್ವಲ್ ಡಿಸೋಜ ಮತ್ತು ನವೀನ್ ಕಾರ್ಡೋಝಾ ಹಾಗೂ ಅವರೊಂದಿಗೆ ಡೆವೆಲಪ್‌ಮೆಂಟ್ ಪಾಲುದಾರಾರಾಗಿರುವ ವಿಲಿಯಂ ಸಾಲ್ದಾನ್ಹ, ಗಾಯತ್ರಿ, ಮತ್ತು ಲೂಸಿ ಸಾಲ್ದಾನ್ಹ ಶಿಕ್ಷೆಗೆ ಒಳಗಾದವರು.

2013ರಲ್ಲಿ ಮಂಗಳೂರಿನ ಗುಜ್ಜರೆ ಕೆರೆ ಎಂಬಲ್ಲಿ ಬಹುಮಹಡಿ ಕಟ್ಟಡ ಕಟ್ಟಿ ಮಾರಾಟ ಮಾಡುತ್ತಿದ್ದರು. ಈ ಸಂದರ್ಭ ಮಂಗಳೂರಿನ ಡಾ. ಲವೀನಾ ಅವರು ಒಂದು ಫ್ಲಾಟ್ ಕಾರ್ ಪಾರ್ಕಿಂಗ್ ಸಹಿತ ಖರೀದಿಸಲು ಒಪ್ಪಂದ ಮಾಡಿ ಹಣ ನೀಡಿದ್ದರು. ಹಣ ಪಡೆದ ಬಳಿಕ ಮಾರಾಟ ಪತ್ರ ವನ್ನು ಲವೀನಾ ಇವರಿಗೆ ಬರೆದು ಕೊಟ್ಟಿದ್ದರು. ಆದರೆ ಮಾರಾಟ ಪತ್ರದಲ್ಲಿ ತಿಳಿಸಿರುವಂತೆ ಆರೋಪಿತರು ಕಾರ್ ಪಾರ್ಕಿಂಗ್ ನೀಡಿರಲಿಲ್ಲ.ಬಿಲ್ಡರ್ ಗಳನ್ನು ಭೇಟಿ ಮಾಡಿ ಕಾರ್ ಪಾರ್ಕಿಂಗ್ ಒದಗಿಸುವತೆ ವಿನಂತಿಸಿದಾಗ, ಮಾಲಿಕರು ನಿರಾಕರಿಸಿದರು. ಆ ಕಾರಣದಿಂದ ಲವೀನಾರವರು ಬಿಲ್ಡರ್ ಗಳಿಗೆ ಲೀಗಲ್ ನೋಟಿಸ್ ನೀಡಿದರು. ಆದರೆ ಕಾರ್ ಪಾರ್ಕಿಂಗ್ ಸಿಕ್ಕಿರಲಿಲ್ಲ. ಕೊನೆಗೆ ಲವೀನಾ 2014 ರಲ್ಲಿ ಮಂಗಳೂರಿನ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಆರೋಪಿಗಳು ತನ್ನಿಂದ ಹಣ ಪಡೆದ ಹೊರತಾಗಿಯೂ ತನಗೆ ಫ್ಲಾಟ್ ನಲ್ಲಿ ಕಾರ್ ಪಾರ್ಕಿಂಗ್ ಒದಗಿಸಿಲ್ಲ ಮತ್ತು ಕಾರ್ ಪಾರ್ಕಿಂಗ್ ಒದಗಿಸುವಂತೆ ನಿರ್ದೇಶನ ನೀಡುವಂತೆ ದೂರು ಸಲ್ಲಿಸಿದರು.

ಗ್ರಾಹಕ ನ್ಯಾಯಾಲಯ ಲವೀನಾ ರವರ ದೂರನ್ನು ವಿಚಾರಣೆಗೆ ತೆಗೆದುಕೊಂಡು ದಿನಾಂಕ 24-06-2017 ರಲ್ಲಿ ಅಂತಿಮ ತೀರ್ಪುನ್ನು ಪ್ರಕಟಿಸಿ ಆರೋಪಿಗಳು ಸೇವಾ ನ್ಯೂನತೆ ಮಾಡಿದ್ದಾರೆ. ಅವರು ದೂರುದಾರರಿಗೆ ಕಾರ್ ಪಾರ್ಕಿಂಗ್ ಮತ್ತು 50,000 ರೂ.ಪರಿಹಾರ ಹಾಗೂ 10,000 ರೂ.ಪ್ರಕರಣದ ಬಾಬ್ತು ಖರ್ಚನ್ನು ನೀಡುವಂತೆ ಆದೇಶಿತ್ತು.
ಈ ಆದೇಶವನ್ನು ಪ್ರಶ್ನಿಸಿ ಬಿಲ್ಡರ್ ಗಳು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆದರೆ ರಾಜ್ಯ ಗ್ರಾಹಕ ನ್ಯಾಯಾಲಯ ಬಿಲ್ಡರ್ ಗಳ ಮನವಿಯನ್ನು ತಿರಸ್ಕರಿಸಿ ಗ್ರಾಹಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಇದರ ಹೊರತಾಗಿಯೂ ಆರೋಪಿತರು ದೂರುದಾರರಿಗೆ ಕಾರ್ ಪಾರ್ಕಿಂಗ್ ನೀಡಲಿಲ್ಲ.

ಹೀಗಾಗಿ ದೂರುದಾರರು ಸೆಪ್ಟೆಂಬರ್ 2022 ಕ್ಕೆ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆರೋಪಿತರು ತನಗೆ ಕಾರ್ ಪಾರ್ಕಿಂಗ್ ನೀಡದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಕಾರ್ ಪಾರ್ಕಿಂಗ್ ನೀಡದ ಕಾರಣ ಅವರಿಗೆ ಗ್ರಾಹಕ ರಕ್ಷಣಾ ಕಾಯ್ದೆ 2019 ರ ಅನ್ವಯ ಮೂರು ವರ್ಷ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸ ಬೇಕಾಗಿ ವಿನಂತಿಸಿದ್ದರು.

ದೂರು ದಾರರ ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯ, ಬಿಲ್ಡರ್ ಗಳು ಗ್ರಾಹಕ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಮೂರು ವರ್ಷ ಕಾರಾಗೃಹ ಸಜೆ ಮತ್ತು ತಲಾ ಒಂದು ಲಕ್ಷ ರೂಪಾಯಿ ದಂಡವನ್ನು ಪಾವತಿಸುವಂತೆ ಬಿಲ್ಡರ್ ಗಳಿಗೆ ಆದೇಶಿಸಿದೆ.